ಸೋಮವಾರ, ಏಪ್ರಿಲ್ 19, 2021
32 °C

ಮಹಿಳಾ ಸಬಲೀಕರಣಕ್ಕೆ ಆದ್ಯತೆ: ಸಚಿವ ಬಂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಮಹಿಳಾ ಸಬಲೀಕರಣದ ದೃಷ್ಟಿಯಿಂದ ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮೇಲುಗೈ ಸಾಧಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಹೇಳಿದರು.ತಮ್ಮ 45ನೇ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ದಕ್ಷಿಣ ಕಾಶಿ ಪ್ರಶಿದ್ಧಿಯ ಕಾಲಕಾಲೇಶ್ವರ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಪುರುಷನ ಸರಿಸಮಾನ ಸ್ಥಾನ-ಮಾನಗಳನ್ನು ಮಹಿಳೆ ಅಲಂಕರಿಸಬೇಕು. ಆ ಮೂಲಕ ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಖಚಿತ ಪಡಿಸಲು ಮಹಿಳಾ ಸಮುದಾಯ ಶ್ರಮಿಸಬೇಕು ಎಂದರು.ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ನಿರುದ್ಯೋಗ ನಿವಾರಣೆಯ ಜೊತೆಗೆ ನೀರಾವರಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನ ಗೊಳಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ರೂ 68 ಕೋಟಿ ವೆಚ್ಚದಲ್ಲಿ ಬೃಹತ್ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ತಾಲ್ಲೂಕಿನ ಸರ್ಜಾಪುರ ಗ್ರಾಮದ ಸುತ್ತಲಿನ 16 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ರೂ 28 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಕಾರ್ಯಾರಂಭಿಸಿದೆ ಎಂದರು.ಜಿಲ್ಲೆಯಲ್ಲಿ ನಿರಂತರ ಎರಡನೇ ವರ್ಷ ಬರ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜನತೆಗೆ ಉದ್ಯೋಗ ನೀಡುವುದು, ಜಾನುವಾರುಗಳ ಸಂರಕ್ಷಣೆಯ ದೃಷ್ಟಿಯಿಂದ ಈಗಾಗಲೇ ಆರಂಭಗೊಂಡಿರುವ ಗೋಶಾಲೆಗಳಿಗೆ ವಿಶೇಷ ಸೌಕರ್ಯಗಳನ್ನು ಒದಗಿಸಲಾಗಿದೆ. ಜೊತೆಗೆ ಮೇವಿನ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಸಾಗುವಳಿ ಭೂಮಿಯ ಫಲವತ್ತತೆ ಹಾಗೂ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ `ರಾಷ್ಟ್ರೀಯ ಉದ್ಯೋಗ ಖಾತ್ರಿ~ ಯೋಜನೆಯಡಿಯಲ್ಲಿ ಜಿಲ್ಲೆಯ ರೈತರು ಕೃಷಿ ಹೊಂಡ, ಒಳಗಟ್ಟಿ, ಬದು ಮುಂತಾದವುಗಳನ್ನು ನಿರ್ಮಿಸಿಕೊಂಡಿದ್ದಾರೆ.

 

ಆದರೆ, ಸಂಬಂಧಿಸಿದ ಗ್ರಾಪಂಗಳು ಅರ್ಹ ರೈತರಿಗೆ ಯೋಜನೆಯಡಿ ಪೂರ್ಣ ಪ್ರಮಾಣದ ಹಣ ಒದಗಿಸುವಲ್ಲಿ ವಿಳಂಬ ನೀತಿ ಅನುಸರಿ ಸುತ್ತಿವೆ ಎಂಬ ದೂರುಗಳು ರೈತ ವಲಯದಿಂದ ಕೇಳಿ ಬರುತ್ತಿವೆ. ಗ್ರಾ.ಪಂ ಗಳು ರೈತರಿಗೆ ಹಣ ನೀಡಬೇಕು. ಇಲ್ಲದಿದ್ದರೆ, ಗ್ರಾ.ಪಂಗಳ ಅನುದಾನ ಕಡಿತಗೊಳಿಸಲಾಗುವುದು.  2004ರಿಂದ ಅನುಷ್ಠಾನಗೊಂಡಿರುವ ಬಹುತೇಕ ಯೋಜನೆಗಳಲ್ಲಿನ ಕಾಮಗಾರಿಗಳು ಭಾಗಶಃ ಪೂರ್ಣಗೊಂಡಿದ್ದು, ಇನ್ನೂ ಕೆಲವೇ ತಿಂಗಳುಗಳಲ್ಲಿ ತಾಲ್ಲೂಕಿನ ಸಮಗ್ರ ಚಿತ್ರಣ ಬದಲಾಗುತ್ತಿದೆ ಎಂದರು.   ಕಲ್ಲಿನಾಥಭಟ್ ಪೂಜಾರ, ಸುರೇಶ ಪೂಜಾರ, ಪುರಸಭೆ ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಬಾಳನಗೌಡ ಗೌಡರ, ಗಿರೀಶ ರಂಗ್ರೇಜಿ, ಶಂಕರಗೌಡ ಗೌಡರ, ಶಂಕರ ಪವಾರ, ಪ್ರಕಾಶ ಜಾಲಿಹಾಳ, ಗಂಗಾಧರ ಪಾಟೀಲ, ಅಫ್ಜಲ್‌ಖಾನ್ ಲೋದಿ  ಉಪಸ್ಥಿತರಿದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ

ವಿವಿಧ ಇಲಾಖೆಯ ಅಧಿಕಾರಿಗಳು ಜನ ಸಾಮಾನ್ಯರ ಕುಂದು ಕೊರತೆ ನಿವಾರಣೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ನಾಗರಿಕರಿಗೆ ಇಂದು, ನಾಳೆ ಎಂದು ಅಲೆದಾಡಿಸುವಂತಿಲ್ಲ. ಹಾಗೊಂದು ವೇಳೆ ಅಧಿಕಾರಿಗಳು ಸರ್ಕಾರಿ ಕೆಲಸಕ್ಕಾಗಿ ನಾಗರಿಕರನ್ನು ಅಲೆದಾಡಿಸಿ, ಕರ್ತವ್ಯ ಲೋಪ ಎಸಗಿದ ಬಗ್ಗೆ ದೂರುಗಳು ಕೇಳಿ ಬಂದರೆ ಕೂಡಲೇ ಶಿಸ್ತು ಕ್ರಮ ಜರುಗಿಸುವುದಾಗಿ ಕಳಕಪ್ಪ ಬಂಡಿ ಎಚ್ಚರಿಸಿದರು.ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಸೂಕ್ತ ರೀತಿಯಲ್ಲಿ ಅವರ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.