ಶನಿವಾರ, ಮೇ 8, 2021
18 °C

ಮಹಿಳಾ ಹಾಕಿ ಟೂರ್ನಿ: ಭಾರತ ತಂಡಕ್ಕೆ ಕಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ತಂಡ ನ್ಯೂಜಿಲೆಂಡ್‌ನ ಪಕುರಂಗಾದಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಮಹಿಳಾ ಹಾಕಿಯ ಎರಡನೇ ಹಂತದ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದುಕೊಂಡಿತು.ಭಾನುವಾರ ನಡೆದ ತಮ್ಮ ಕೊನೆಯ ಪಂದ್ಯದಲ್ಲಿ ಭಾರತದ ವನಿತೆಯರು 1-0 ಗೋಲಿನಿಂದ ಅಮೆರಿಕಾವನ್ನು ಮಣಿಸಿದರು.ಮೊದಲಾರ್ಧ ತೀವ್ರ ಪೈಪೋಟಿಯಿಂದ ಕೂಡಿದ್ದು ಯಾವುದೇ ಗೋಲುಗಳು ಬರಲಿಲ್ಲ. ಆದರೆ ಉತ್ತರಾರ್ಧದ ಆಟ ಶುರುವಾಗಿ ಐದು ನಿಮಿಷಗಳಾಗಿದ್ದಾಗ ಮಿಡ್‌ಫೀಲ್ಡರ್ ದೀಪಿಕಾ ಪಂದ್ಯದ ಏಕೈಕ ಗೋಲು ಗಳಿಸಿದರು.

ಭಾರತದ ರಕ್ಷಣಾ ಆಟಗಾರ್ತಿಯರು ಗಮನಾರ್ಹ ಸಾಮರ್ಥ್ಯ ತೋರಿದರು.ಅಮೆರಿಕಾದ ಆಟಗಾರ್ತಿಯರು ಭಾರತದ ಆವರಣ ಪ್ರವೇಶಿಸುತ್ತಿದ್ದಂತೆಯೇ ಅವರ ಮೇಲೆ ಜಯ್‌ದೀಪ್ ಕೌರ್, ಅಸುಂತಾ ಲಾಕ್ರಾ, ದೀಪಿಕಾ ಮತ್ತು ರಿತು ರಾಣಿ ಮುಗಿ ಬೀಳುತ್ತಿದ್ದುದು ಎದ್ದು ಕಾಣುತಿತ್ತು. ಆದರೆ ಭಾರತದ ಫಾರ್ವರ್ಡ್‌ಗಳ ಗೋಲು ಗಳಿಸುವ ಕೆಲವು ಪರಿಣಾಮಕಾರಿ ಯತ್ನಗಳು ವಿಫಲವಾದವು.ಭಾರತದ ಗೋಲ್‌ಕೀಪರ್ ಯೋಗಿತಾ ಬಾಲ್ ಕೂಡಾ ಭಾರತವನ್ನು ಹಲವು ಸಲ ಗೋಲುಗಳ ಅಪಾಯದಿಂದ ಪಾರು ಮಾಡಿದರು. ಈ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದ ಯೋಗಿತಾ ಅವರಿಗೆ ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿ ನೀಡಲಾಯಿತು.ಮೊದಲ ಹಂತದ ಟೂರ್ನಿ ಕಳೆದ ವಾರ ಆಕ್ಲೆಂಡ್‌ನಲ್ಲಿ ನಡೆದಿದ್ದು, ಕಂಚಿನ ಪದಕಕ್ಕಾಗಿ ನಡೆದಿದ್ದ ಕೊನೆಯ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ಅಮೆರಿಕಾದ ಎದುರು ಸೋಲನುಭವಿಸಿತ್ತು. ಆದರೆ ಎರಡನೇ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಆ ಸೋಲಿನ ಸೇಡು ತೀರಿಸಿಕೊಂಡಂತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.