ಬುಧವಾರ, ಜೂನ್ 16, 2021
23 °C

ಮಹಿಳೆಯರು, ಮಕ್ಕಳಿಗೆ ಪೌಷ್ಟಿಕ ಆಹಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಬುಧವಾರ ಪ್ರಜಾ ವಿಮೋಚನಾ ಚಳವಳಿಯ ಜಿಲ್ಲಾ ಘಟಕದಿಂದ ಧರಣಿ ನಡೆಯಿತು.ಪೌಷ್ಟಿಕ ಆಹಾರ ಇಲ್ಲದೆ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ತೊಂದರೆಗೆ ಸಿಲುಕಿದ್ದಾರೆ. ಅಪೌಷ್ಟಿಕತೆಗೆ ತುತ್ತಾಗಿ ಸಾವುಗೀಡಾಗುತ್ತಿದ್ದಾರೆ. ಕೂಡಲೇ, ಪೌಷ್ಟಿಕಾಂಶ ಹೊಂದಿರುವ ಆಹಾರ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರಸ್ತುತ ಜಾರಿಯಲ್ಲಿರುವ ಪಡಿತರ ವ್ಯವಸ್ಥೆಯಲ್ಲಿ ನ್ಯೂನತೆಗಳಿವೆ. ಅಕ್ಕಿ, ಗೋಧಿ, ಸೀಮೆಎಣ್ಣೆ, ಸಕ್ಕರೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಬಡವರಿಗೆ ಸಮರ್ಪಕವಾಗಿ ಪಡಿತರ ನೀಡಬೇಕು ಎಣ್ಣೆ, ಬೇಳೆಕಾಳು ನೀಡುವ ವ್ಯವಸ್ಥೆಯೂ ಜಾರಿಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಅಕ್ರಮ ಮದ್ಯಮಾರಾಟ ನಡೆಯುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರ್ಮಿಕ ಕುಟುಂಬಗಳು ಬೀದಿಪಾಲಾಗುತ್ತಿವೆ. ಜನರು ಕುಡಿತದ ಚಟಕ್ಕೆ ತುತ್ತಾಗುವ ಪರಿಣಾಮ ಮಹಿಳೆಯರು, ಮಕ್ಕಳು ಸಂಕಷ್ಟ ಅನುಭವಿಸುವಂತಾಗಿದೆ.ಕೂಡಲೇ, ಅನಧಿಕೃತ ಮದ್ಯದ ಅಂಗಡಿಗಳಿಗೆ ಕಡಿವಾಣ ಹಾಕಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಸರ್ಕಾರದ ಸಂಸ್ಥೆಗಳ ನಿರ್ವಹಣೆಯನ್ನು ಖಾಸಗಿ ಸಂಘ-ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಗುತ್ತಿಗೆದಾರರ ಕಪಿಮುಷ್ಠಿಗೆ ಸಿಲುಕಿ ವಿದ್ಯಾರ್ಥಿಗಳು ತೊಂದರೆಪಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಂದ ಸ್ವಜನಪಕ್ಷಪಾತ ನಡೆಯುತ್ತಿದೆ. ಯಾವುದೇ, ಸಂಸ್ಥೆಯಲ್ಲೂ ಗುತ್ತಿಗೆ ಪದ್ಧತಿಯನ್ನು ಅನುಷ್ಠಾನಗೊಳಿಸಬಾರದು. ಕೂಡಲೇ, ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ನಡೆಯುತ್ತಿರುವ ಕಪ್ಪುಶಿಲೆ ಗಣಿಗಾರಿಕೆಗೆ ನಿಷೇಧ ಹೇರಬೇಕು. ಯಳಂದೂರು ತಾಲ್ಲೂಕಿನ ಯರಗಂಬಳ್ಳಿ, ಗಂಗವಾಡಿ, ದಾಸನಹುಂಡಿ ಗ್ರಾಮದಲ್ಲಿ ಪರಿಶಿಷ್ಟರ ಜಮೀನು ಗಳು ಬಳ್ಳಾರಿ ಮೂಲದ ಉದ್ಯಮಿಗಳ ಪಾಲಾಗಿವೆ. ಭೂ ಕಬಳಿಕೆ ವಿರುದ್ಧ ಕ್ರಮಕೈಗೊಂಡು ಜಮೀನು ವಾಪಸ್ ಕೊಡಿಸ ಬೇಕು.ಜಿಲ್ಲಾಡಳಿತ ಭವನದ ಮುಂಭಾಗ ಶೀಘ್ರವೇ ಡಾ.ಬಿ. ಆರ್. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಂಗವಾಡಿ ಸೋಮಣ್ಣ, ಬುಲೆಟ್ ಸಿದ್ದರಾಜು, ಎಂ. ಮಹೇಶ್, ರವಿಕುಮಾರ್, ಉಷಾ, ಶಿವಣ್ಣ, ಶಾಂತರಾಜ್ ಇತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.