ಭಾನುವಾರ, ಮೇ 9, 2021
25 °C

ಮಾಗಡಿಗೆ ಹೇಮಾವತಿ ನೀರು ಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಕೆರೆ, ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರ ಬದುಕನ್ನು ಹಸನು ಮಾಡಿದ ಕೆಂಪೇಗೌಡರ, ತವರು ಮಾಗಡಿಗೆ ಸರ್ಕಾರ ಹೇಮಾವತಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆಗ್ರಹಿಸಿದರು.ಇಲ್ಲಿನ ಕೋಟೆ ಬಯಲಿನಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿಯು ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 502ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೆಂಪೇಗೌಡರು ನಾಡಿನ ಚೇತನ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವು ದರಿಂದ ನಾಡು ಸಮೃದ್ಧಿ ಹೊಂದಲಿದೆ ಎಂದರು.ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರ ನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರ ಕಾಲದ ಸ್ಮಾರಕಗಳು, ಕೋಟೆ, ಕೊತ್ತಲಗಳು, ಕೆರೆ, ಕಟ್ಟೆಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು.ಬೆಂಗಳೂರು ನಗರದಲ್ಲಿ ತಳ ಸಮುದಾಯಗಳಿಗೆ ಬಳೆಪೇಟೆ, ಚಿಕ್ಕಪೇಟೆ ಮತ್ತಿತರ ಸಣ್ಣ ಸಣ್ಣ ಪಟ್ಟಣಗಳನ್ನು ನಿರ್ಮಿಸಿಕೊಟ್ಟು ಸಾಮರಸ್ಯದಿಂದ ಬದುಕುವಂತೆ ಮಾಡಿದ್ದು ಕೆಂಪೇಗೌಡರು ಎಂದರು. ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಗೌಡ ಮಾತನಾಡಿ, ಕೆಂಪೇಗೌಡರ ತವರಲ್ಲಿ ಅವರ ಜಯಂತಿ ಆಚರಿಸಲು ಅನುಮತಿ ನೀಡಲು ದುಡ್ಡು ಕಟ್ಟಿಸಿಕೊಂಡಿರುವ ಆಡಳಿತ ವ್ಯವಸ್ಥೆಗೆ ಧಿಕ್ಕಾರ ಎಂದು ಆಕ್ಷೇಪಿಸಿದರು.ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಮಾತನಾಡಿ, ನಾನು ಧರ್ಮವನ್ನು ಪಾಲಿಸುತ್ತಾ ಬಂದಿದ್ದೇನೆ.  ಯಾವುದೇ ಪಕ್ಷ ನನಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದರು.ರುದ್ರಮುನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ, ಜಂಗಮ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಟಿ.ಬಿ. ಜಯಚಂದ್ರ, ನೆ.ಲ. ನರೇಂದ್ರಬಾಬು, ಎಂ.ಕೃಷ್ಣಪ್ಪ, ಮಾಜಿ ಸಚಿವ ಆಂಜನ ಮೂರ್ತಿ, ಪ್ರೇಮ ಕಾರಿಯಪ್ಪ, ಕೆಂಪೇಗೌಡರ ಆದರ್ಶಗಳ ಬಗ್ಗೆ ಮಾತನಾಡಿದರು. ಕಮಲಮ್ಮ ಹನುಮಂತೇಗೌಡ, ನ್ಯಾಯವಾದಿ ಕೆ.ದಿವಾಕರ, ಎಸ್.ಎನ್.ರಾಜು, ನಿರ್ಮಾಪಕ ಸಾ.ರಾ.ಗೋವಿಂದು, ಕೆ.ಪಿ.ಸಿ.ಸಿ ಸದಸ್ಯ ಎ.ಮಂಜು, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಮಂಜುನಾಥ್, ಬಿ.ಬಿ.ಎಂ.ಪಿ ಸದಸ್ಯ ಕೆ.ರಂಗಣ್ಣ, ಜಿ.ಪಂ.ಸದಸ್ಯ ಹನುಮಂತರಾಯಪ್ಪ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಜಯಂತ್ಯುತ್ಸವದ ಅಂಗವಾಗಿ ಹುಚ್ಚಹನುಮೇಗೌಡನ ಪಾಳ್ಯದ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ನಡೆಯಿತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.