ಮಂಗಳವಾರ, ಮೇ 11, 2021
23 °C

ಮಾಜಿ ಮೇಯರ್‌ಗಳ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ 

 ಬೆಂಗಳೂರು ನಗರದಲ್ಲಿ ಇಂದು ಲೆಕ್ಕವಿಲ್ಲದಷ್ಟು ಅಕ್ರಮ ಕಟ್ಟಡಗಳು ತಲೆಯೆತ್ತಲು ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ.ನಾನು ಮೇಯರ್ ಆಗಿದ್ದಾಗ ಅಂದಿನ ನೂರು ವಾರ್ಡ್‌ಗಳಲ್ಲಿಯೂ ಕಂದಾಯ ಅಧಿಕಾರಿಗಳ ತಂಡದ ಮೂಲಕ ಸರ್ವೆ ಮಾಡಿಸಿ ಅಧಿಕೃತ ಹಾಗೂ ಅನಧಿಕೃತ ಕಟ್ಟಡಗಳ ಪಟ್ಟಿ ಮಾಡಿಸಿದ್ದೆ. ಅಕ್ರಮ ಕಟ್ಟಡಗಳ ಭಾಗವನ್ನು ಮುಲಾಜಿಲ್ಲದೆ ಒಡೆಸುತ್ತಿದ್ದೆ.ನಗರದಲ್ಲಿ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಬಾಡಿಗೆ ಪಡೆಯುವಂತಹ ಅಕ್ರಮ ಕಟ್ಟಡಗಳ ಮಾಲೀಕರು ಕೂಡ ಬಿಬಿಎಂಪಿಗೆ ತೆರಿಗೆ ವಂಚಿಸುತ್ತಿದ್ದಾರೆ. ಇಂತಹ ಅನೇಕ ಅಕ್ರಮ ಕಟ್ಟಡಗಳಿವೆ. ಪ್ರತಿ ವರ್ಷ ಇಂತಹ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಬೇಕು. ಇದರಿಂದ ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹವಾಗಲಿದೆ.ಈ ಹಿಂದೆ ಬಿಬಿಎಂಪಿ ಎಂಜಿನಿಯರ್‌ಗಳೇ ಎಲ್ಲ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಈಗ ಬೇರೆ ಬೇರೆ ಇಲಾಖೆಗಳಿಂದ ಬಂದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳೇ ಪಾಲಿಕೆಯಲ್ಲಿ ತುಂಬಿ ಹೋಗಿದ್ದಾರೆ.ಅಕ್ರಮ ಕಟ್ಟಡಗಳ ಬಗ್ಗೆ ಗಮನಹರಿಸುತ್ತಿಲ್ಲ. ಬೆಂಗಳೂರು ನಗರದ ಬಗ್ಗೆ ಕಾಳಜಿಯೂ ಇಲ್ಲ. ನಿಮ್ಮ ಅಕ್ರಮ ಕಟ್ಟಡಗಳ ಸರಣಿ ಲೇಖನ ಮಾಲೆಯಲ್ಲೇ ಬೆಳಕು ಚೆಲ್ಲಿದಂತೆ ಪಾಲಿಕೆಯಲ್ಲಿ ಹಣ ಕೊಟ್ಟರೆ ಎಲ್ಲ ಕೆಲಸವೂ ಆಗುತ್ತೆ.ಉದಾಹರಣೆಗೆ ಬಸವೇಶ್ವರ ನಗರದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಒಂದನ್ನು ಪರವಾನಗಿ ಇಲ್ಲದೆ ನಡೆಸಲಾಗುತ್ತಿದೆ.ಅದನ್ನು ಕೆಲವು ದಿನಗಳ ಕಾಲ ಮುಚ್ಚಿಸಲಾಗಿತ್ತು. ಇದೀಗ ಪುನರಾರಂಭಿಸಲಾಗಿದೆ. ಇಂತಹ ಹಲವು ಪ್ರಕರಣಗಳ ಬಗ್ಗೆ ನಾನು ದಾಖಲೆ ಒದಗಿಸಬಲ್ಲೆ. ಆದರೆ, ಹಣ ಪ್ರಭಾವದ ಮುಂದೆ ನಿಯಮಗಳು ಲೆಕ್ಕಕ್ಕಿಲ್ಲದಂತಾಗಿದೆ.

 -ಜೆ ಹುಚ್ಚಪ್ಪಮೊದಲು ಕಾನೂನು ವ್ಯಾಪ್ತಿಗೆ ತನ್ನಿ

ನಗರದ ಅಕ್ರಮ ಕಟ್ಟಡಗಳನ್ನು ಮೊದಲು ಕಾನೂನು ವ್ಯಾಪ್ತಿಗೆ ತರುವ ಕೆಲಸ ಮಾಡಬೇಕು. ಆನಂತರ ಅವುಗಳನ್ನು ಸರ್ಕಾರ ಸಕ್ರಮಗೊಳಿಸಬೇಕು. ಇದರಿಂದ ಪಾಲಿಕೆಗೆ ಹೆಚ್ಚಿನ ವರಮಾನ ಬರಲಿದೆ. ಅಕ್ರಮ ಕಟ್ಟಡಗಳನ್ನು ಒಡೆಯುವುದರಿಂದ ಪ್ರಯೋಜನವಿಲ್ಲ. ಇದರಿಂದ ನಷ್ಟವೇ ಹೊರತು ಯಾರಿಗೂ ಲಾಭವಿಲ್ಲ.ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಂದು ಸ್ಪಷ್ಟ ನೀತಿ ಮುಖ್ಯ. ಬೆಂಗಳೂರು ನಗರ ಇತ್ತೀಚಿನ ವರ್ಷಗಳಲ್ಲಿ ಯೋಜನಾರಹಿತವಾಗಿ ಬೆಳೆಯುತ್ತಿದೆ. ಅಕ್ರಮ ಕಟ್ಟಡಗಳನ್ನು ಗಮನಿಸುವವರೇ ಇಲ್ಲ. ಇನ್ನು ಅಕ್ರಮ ಕಟ್ಟಡಗಳನ್ನು ನಿಯಂತ್ರಿಸುವ ಗೋಜಿಗೇ ಹೋಗುತ್ತಿಲ್ಲ.ಯದ್ವಾತದ್ವ ನಗರೀಕರಣ ಕೂಡ ಯಥೇಚ್ಛ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ದಾರಿಯಾಗಿದೆ. ಇದಕ್ಕೆ ಖಾಸಗಿ ಅಥವಾ ಬಿಡಿಎ ಬಡಾವಣೆಗಳು ಕೂಡ ಹೊರತಾಗಿಲ್ಲ. ಕೇವಲ ನಕ್ಷೆ ಮಂಜೂರಾತಿ ಕೊಡುವುದಷ್ಟೇ ಬಿಬಿಎಂಪಿ ಅಧಿಕಾರಿಗಳ ಕೆಲಸವಲ್ಲ. ಬದಲಿಗೆ, ಕಟ್ಟಡ ನಿರ್ಮಾಣ ಕೆಲಸ ಮುಗಿಯುವವರೆಗೆ ಹದ್ದಿನ ಕಣ್ಣಿಡಬೇಕು. ಆ ಕೆಲಸ ನಡೆಯುತ್ತಿಲ್ಲ.ಪಾಲಿಕೆ ಮುಂದಿರುವ ಏಕೈಕ ಮಾರ್ಗವೆಂದರೆ, ಎಲ್ಲ ಅಕ್ರಮ ಕಟ್ಟಡಗಳನ್ನು ಪರಿಶೀಲಿಸಿ ಕಾನೂನು ವ್ಯಾಪ್ತಿಗೊಳಪಡಿಸುವುದು. ಆನಂತರ ಸಕ್ರಮಗೊಳಿಸುವುದು. ಇನ್ನು ಮುಂದೆ ಅಕ್ರಮ ಕಟ್ಟಡಗಳು ತಲೆಯೆತ್ತದಂತೆ ಎಚ್ಚರಿಕೆ ವಹಿಸುವುದು.

 -ಪಿ.ಆರ್. ರಮೇಶ್ಚಂಡೀಘಡ ಮಾದರಿ ಅನುಸರಿಸಲಿ

ಚಂಡೀಘಡ ಮಾದರಿಯಲ್ಲಿ ಒಂದೊಂದು ಪ್ರದೇಶಕ್ಕೆ ಅನುಗುಣವಾಗಿ ನಿರ್ದಿಷ್ಟವಾದ ಒಂದೇ ಅಳತೆ ಗೋಲಿನಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಬೇಕು. ಇದರಿಂದ ಯಾವ ಕಟ್ಟಡ ನಿಯಮ ಉಲ್ಲಂಘಿಸಿದೆ ಎಂಬುದು ತಕ್ಷಣ ಗೊತ್ತಾಗಲಿದೆ.ಬಿಬಿಎಂಪಿಗೆ ನಗರದ ಸುತ್ತಲಿನ ನಗರಸಭೆ ಹಾಗೂ ಪುರಸಭೆಗಳು ಸೇರ್ಪಡೆಗೊಂಡ ನಂತರವಂತೂ ಆ ಭಾಗಗಳ ಕಟ್ಟಡಗಳ ಮೇಲೆ ಯಾರಿಗೂ ಹಿಡಿತವಿಲ್ಲದಂತಾಗಿದೆ. ಶೇ 80ರಿಂದ 90ರಷ್ಟು ಕಟ್ಟಡಗಳು ನಿಯಮ ಉಲ್ಲಂಘಿಸುತ್ತಿವೆ.ಬೇರೆ ಇಲಾಖೆಗಳ ಅಧಿಕಾರಿಗಳು ದುಡ್ಡು ಮಾಡುವುದಕ್ಕಾಗಿಯೇ ಬಿಬಿಎಂಪಿಗೆ ಬರುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಣವೇ ಎಲ್ಲವನ್ನೂ ನಿರ್ಧರಿಸುತ್ತಿದೆ. ಇನ್ನು ಅಕ್ರಮ ಕಟ್ಟಡಗಳನ್ನು ಕೇಳುವರ‌್ಯಾರು?

ರಾತ್ರಿ ವೇಳೆ ರಸ್ತೆಯಲ್ಲಿ ನಿಲುಗಡೆ ಮಾಡುವಂತಹ ಕಾರುಗಳಿಂದಲೂ ಶುಲ್ಕ ಸಂಗ್ರಹಿಸಲು ಪಾಲಿಕೆ ಚಿಂತಿಸುತ್ತಿದೆ.ಇದರರ್ಥ ಕಾರು ನಿಲ್ಲಿಸುವುದಕ್ಕೂ ಜಾಗವಿಲ್ಲದೆ ಜನ ಮನೆ ನಿರ್ಮಿಸಿದ್ದಾರೆ. ಇದರಿಂದ ಕಟ್ಟಡ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದ್ದೇವೆ ಎಂಬುದನ್ನು ಪಾಲಿಕೆಯೇ ಒಪ್ಪಿಕೊಂಡಂತಾಗಿದೆ. ಅದರ ಬದಲು ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿದಲ್ಲಿ ಪಾಲಿಕೆಗೆ ಹೆಚ್ಚಿನ ವರಮಾನ ಹರಿದು ಬಂದು ಸಂಸ್ಥೆಯ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ.

 ಎಂ.ರಾಮಚಂದ್ರಪ್ಪ

  

ಕಂದಾಯ ಇಲಾಖೆ ಎಚ್ಚೆತ್ತುಕೊಳ್ಳಲಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದಂತಹ ವಾರ್ಡ್‌ಗಳಲ್ಲಿ ಸಾವಿರಾರು ಅಕ್ರಮ ಕಟ್ಟಡಗಳು ತಲೆಯೆತ್ತಿವೆ. ಬಿಬಿಎಂಪಿಯ ಕಂದಾಯ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ಕಟ್ಟಡಗಳನ್ನು ಮೊದಲು ಕಾನೂನು ವ್ಯಾಪ್ತಿಗೆ ಒಳಪಡಿಸಬೇಕು.ಈಗಾಗಲೇ ಬಿಬಿಎಂಪಿ ಮೂರು ಸಾವಿರ ಕೋಟಿ ರೂಪಾಯಿ ಸಾಲದಲ್ಲಿದೆ. ಇನ್ನು ಅಭಿವೃದ್ಧಿ ಕೆಲಸ ಕೈಗೊಳ್ಳಲು ಹಣ ಎಲ್ಲಿದೆ? ಈಗ ಬರುತ್ತಿರುವ ವರಮಾನದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೇತನ ನೀಡುವುದಕ್ಕಾಗಿಯೇ ಹೆಚ್ಚು ಹಣ ಖರ್ಚಾಗುತ್ತಿದೆ.ಇಂತಹ ಪರಿಸ್ಥಿತಿಯಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ ಹೆಚ್ಚಿನ ಆದಾಯ ಗಳಿಸುವ ಮಾರ್ಗ ಕಂಡುಕೊಳ್ಳುವುದು ಸೂಕ್ತ. ಈಗಾಗಲೇ ಸಾವಿರಾರು ಅಕ್ರಮ ಕಟ್ಟಡಗಳು ತಲೆಯೆತ್ತಿವೆ. ಅವುಗಳಿಗೆ ನಮ್ಮ ಅಧಿಕಾರಿಗಳೇ ಮಂಜೂರಾತಿ ನೀಡಿದ್ದಾರೆ. ಅವೆಲ್ಲವನ್ನೂ ಒಡೆಯುವುದು ಅಸಾಧ್ಯ.

 -ಕೆ.ಎಚ್.ಎನ್. ಸಿಂಹಕೆಳಹಂತದಿಂದಲೇ ಸರಿಯಾಗಬೇಕಿತ್ತು

ಕೆಳಗಿನ ಹಂತದಿಂದಲೇ ವ್ಯವಸ್ಥೆ ಸರಿ ಹೋಗಬೇಕಿತ್ತು. ಕೆಳಹಂತದ ಅಧಿಕಾರಿಗಳು ಜನರಿಗೆ ಸರಿಯಾದ ಮಾಹಿತಿ ನೀಡದಿರುವುದರಿಂದಲೂ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ದಾರಿಯಾಗುತ್ತಿದೆ.ಇದೀಗ ಅವರಿಗೆ ನೋಟಿಸ್ ಜಾರಿಗೊಳಿಸಿ ಕಿರುಕುಳ ನೀಡುವುದರ ಬದಲಿಗೆ ಕಾನೂನುರೀತ್ಯ ಸಕ್ರಮಗೊಳಿಸುವುದು ಸೂಕ್ತ.ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿರುವಂತಹ ಸಾಮರ್ಥ್ಯವುಳ್ಳ ಬಿಲ್ಡರ್‌ಗಳು ಪಾರಾಗಲು ಬೇರೆ ಬೇರೆ ರೀತಿಯ ಮಾರ್ಗಗಳಿವೆ.ಆದರೆ, ಸಾಲ ಸೋಲ ಮಾಡಿ ಮನೆ ನಿರ್ಮಿಸಿದಂತಹ ಮಧ್ಯಮ ವರ್ಗದವರಿಗೆ ಕಷ್ಟ. ಹೀಗಾಗಿ, ಮಾನವೀಯತೆ ನೆಲೆಗಟ್ಟಿನಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವುದು ಸರಿ ಎಂಬುದು ನನ್ನ ಅನಿಸಿಕೆ.

 ಲಕ್ಕಣ್ಣ

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.