ಶುಕ್ರವಾರ, ಮೇ 7, 2021
25 °C

ಮಾತನಾಡಿದ ಹುಣಸೇಮರ!

ವೆಂಕಟಾಚಲ,ಮಾನಾಚಿ Updated:

ಅಕ್ಷರ ಗಾತ್ರ : | |

ಮಾತನಾಡಿದ ಹುಣಸೇಮರ!

ಒಂದು ಊರಿನಲ್ಲಿ ಸಿದ್ದಪ್ಪನೆಂಬ ಸೋಮಾರಿ ಯುವಕನಿದ್ದನು. ಅವನು ಯಾವ ಕೆಲಸವನ್ನೂ ಮಾಡದೆ, ಹಸಿವಾದಾಗ ಒಂದಿಷ್ಟು ಹೊಟ್ಟೆ ತುಂಬಿಸಿಕೊಂಡು ಊರಿನ ಕೆರೆಯ ಹಿಂಭಾಗದ ದಿಬ್ಬದ ಮೇಲೆ ವಿಶಾಲವಾಗಿ ಹರಡಿದ್ದ ಹುಣಸೇಮರದ ನೆರಳಿನಲ್ಲಿ ಮೈಚಾಚಿ ಮಲಗಿ ಬಿಡುತ್ತಿದ್ದ.ಒಂದು ಮಧ್ಯಾಹ್ನ ಹುಣಸೇಮರದ ನೆರಳಿನಲ್ಲಿ ಮಲಗಿದ್ದ ಸಿದ್ದಪ್ಪನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಹುಣಸೇಮರ ದೇವತೆಯ ರೂಪದಲ್ಲಿ ಪ್ರತ್ಯೆಕ್ಷಳಾಗಿ, ಸಿದ್ದಪ್ಪನನ್ನು ಕುರಿತು, `ಮಗು, ಹೀಗೆ ಸೋಮಾರಿಯಾಗಿ ಏಕೆ ಕಾಲ ಕಳೆಯುತ್ತಿದ್ದೀಯಾ? ಏನಾದರೊಂದು ಉದ್ಯೋಗ ಮಾಡಬಾರದೇ? ನೋಡು. ಈ ಗಾಳಿ, ಭೂಮಿ, ಚಂದ್ರ, ಸೂರ್ಯ - ಇವು ಮನುಷ್ಯರಿಗೆ ಸದಾ ನೆರವು ನೀಡುತ್ತವಲ್ಲವೇ? ನನ್ನನ್ನೇ ನೋಡು. ನೀನು ಮಲಗಲು ನೆರಳನ್ನು ಮಾಡಿಕೊಟ್ಟಿದ್ದೇನೆ. ಈ ಭೂಮಿಗೆ ಬಂದ ಮೇಲೆ ಯಾವುದಾದರೂ ಪ್ರಯೋಜನಕ್ಕೆ ಬರುವಂತಾಗಬೇಕು.ಸೋಮಾರಿತನ ನಮ್ಮ ಪ್ರಥಮ ಶತ್ರು. ನೀನು ಸಾಲು ಮರದ ತಿಮ್ನಕ್ಕನ ಹೆಸರು ಕೇಳಿಲ್ಲವೇ? ನನ್ನ ಅಣ್ಣ, ಅಕ್ಕ, ತಮ್ಮಂದಿರನ್ನು ಪೋಷಿಸಿ - ನಮ್ಮ ಸಂತತಿಯನ್ನು ಹೆಚ್ಚಿಸಿಲ್ಲವೇ? ಏಳು, ಎದ್ದೇಳು. ನಿನ್ನ ಪಾಳುಬಿದ್ದ ಜಮೀನನ್ನಾದರೂ ನೋಡಿಕೋ. ಭೂ ತಾಯಿಯನ್ನು ನಂಬಿ ಕೆಟ್ಟವರಿಲ್ಲ' - ಎಂದೆಲ್ಲಾ ಹೇಳಿ ಅವನ ಕನಸಿನಿಂದ ಮಾಯವಾದಳು ದೇವತೆ.ಸಿದ್ದಪ್ಪನಿಗೆ ಎಚ್ಚರವಾಯಿತು. ಕನಸಿನಲ್ಲಿ ಬಂದು ಮಾಯವಾದ ಹುಣಸೇಮರದಮ್ಮನನ್ನು ಹೊಸದಾಗಿ ನೋಡುವಂತೆ ನೋಡತೊಡಗಿದ.

ನನ್ನ ಕಣ್ಣು ತೆರೆಸಿದ ದೇವತೆ' ಎಂದು ಹುಣಸೇಮರಕ್ಕೆ ನಮಸ್ಕರಿಸುತ್ತಾ, `ಅಮ್ಮಾ ನನಗೆ ನೀನು ಜ್ಞಾನೋದಯ ಮಾಡಿದ್ದೀಯಾ. ಇನ್ನು ಮುಂದೆ ಈ ರೀತಿ ಸೋಮಾರಿಯಾಗಿ ಕಾಲ ಕಳೆಯುವುದಿಲ್ಲ' ಎಂದು ಅಲ್ಲಿಂದ ಎದ್ದು ತನ್ನ ಜಮೀನಿನತ್ತ ಹೊರಟ.ಮಾರನೆಯ ದಿನದಿಂದ ಸಿದ್ದಪ್ಪನ ದಿನಚರಿ ಬದಲಾಯಿತು. ತನ್ನ ಹೊಲವನ್ನು ಹಸನು ಮಾಡಿದ. ಊರಿನ ಶಿವಪ್ಪನಿಂದ ನೇಗಿಲು, ಎತ್ತುಗಳನ್ನು ಎರವಲು ಪಡೆದು ಹೊಲವನ್ನು ಉತ್ತು ಬಿತ್ತಿದನು. ಆ ವರ್ಷ ಅವನ ಹೊಲದಲ್ಲಿ ಅದ್ಭುತ ಬೆಳೆ ಬಂದಿತು. ಸಿದ್ದಪ್ಪನ ಪರಿವರ್ತನೆಯನ್ನು ಕಂಡ ಅವನ ವೃದ್ಧ ತಂದೆ ತಾಯಿ ಸಂತಸಪಟ್ಟರು.ಸಿದ್ದಪ್ಪ ಬಿಡುವಿನ ವೇಳೆಯಲ್ಲಿ ಮನೆಯ ಹಿತ್ತಲಿನಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಆರೈಕೆ ಮಾಡತೊಡಗಿದನು. ಮುಂಜಾನೆ ಎದ್ದು ತರಕಾರಿಗಳನ್ನು ಬಿಡಿಸಿ, ಸಂತೆಗೆ ಒಯ್ದು ತರಕಾರಿಗಳನ್ನು ಮಾರಿ ಹಣ ಸಂಪಾದನೆ ಮಾಡತೊಡಗಿದನು.ಆದರೂ ತಾನು ಹುಣಸೇ ಮರದಮ್ಮ ಹೇಳಿದಂತೆ ನಾಲ್ಕಾರು ಜನಕ್ಕೆ ಪ್ರಯೋಜನವಾಗುವಂತಹ ಕೆಲಸ ಮಾಡಬೇಕು ಎಂದುಕೊಂಡು ಊರ ಶಾಲೆಯ ಉಪಾಧ್ಯಾಯರ ಬಳಿ ಬಂದು, ಅವರಿಗೆ ನಮಸ್ಕರಿಸಿ, `ನನಗೆ ಸಾಲುಮರದ ತಿಮ್ಮಕ್ಕನ ಕತೆ ಹೇಳಿ' ಎಂದ. ಶಾಲಾ ಅಧ್ಯಾಪಕರು ಅವನನ್ನು ಶಾಲೆಯ ಒಳಕ್ಕೆ ಕರೆದು ಕುಳ್ಳಿರಿಸಿ, ಮಕ್ಕಳಿಗೆಲ್ಲಾ ಅಂದು ಸಾಲಮರದ ತಿಮ್ಮಕ್ಕನ ಕತೆ ಹೇಳುತ್ತಾ, `ಮಕ್ಕಳೇ ಇಂದಿನಿಂದ ನೀವು ಸಹ ಒಂದೊಂದು ಗಿಡ ನೆಡಿ. ಪರಿಸರ ರಕ್ಷಿಸುವ ಜವಾಬ್ದಾರಿ ನಿಮ್ಮ ಮೇಲಿದೆ' ಎಂದು ಶಾಲೆಯ ಕೈತೋಟಕ್ಕೆ ಕರೆದುಕೊಂಡು ಹೋಗಿ, ಮಕ್ಕಳಿಗೆಲ್ಲಾ ಒಂದೊಂದು ಸಸಿ ವಿತರಿಸಿದರು.ಸಿದ್ದಪ್ಪ ಶಾಲಾ ಮಾಸ್ತರಿಗೆ ವಂದಿಸಿ, ತನ್ನ ಕಿಸೆಯಲ್ಲಿದ್ದ ನಾಣ್ಯಗಳನ್ನು ಅವರಿಗೆ ನೀಡುತ್ತಾ, `ಪೇಟೆಯಿಂದ ನನಗೊಂದಿಷ್ಟು ಗಿಡಗಳನ್ನು ತರಿಸಿಕೊಡಿ' ಎಂದು ಕೇಳಿಕೊಂಡ.ಮಾರನೆಯ ದಿನದಿಂದ ಸಿದ್ದಪ್ಪ ಊರ ರಸ್ತೆಯ ಇಕ್ಕೆಲಗಳಲ್ಲಿ ಸನಿಕೆಯಿಂದ ಅಳವಾದ ಗುಂಡಿಗಳನ್ನು ತೆಗೆದ. ಸುಮಾರು ದಿನಗಳ ಅಗೆದ ಪರಿಣಾಮವಾಗಿ ನೂರು ಗುಂಡಿಗಳಾದವು. ಗುಂಡಿಗಳ ಬಳಿ ಮಾಸ್ತರರನ್ನು ಕರೆದುಕೊಂಡು ಬಂದು, `ಇವುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುತ್ತೇನೆ, ನೀವು ಗಿಡಗಳನ್ನು ತರಿಸಿಕೊಡಿ' ಎಂದನು.ಮಾಸ್ತರು ಸಂತೋಷದಿಂದ ಪೇಟೆಯಿಂದ ವಿವಿಧ ಬಗೆಯ ಗಿಡಗಳನ್ನು ತರಿಸಿಕೊಟ್ಟರು. ಸಿದ್ದಪ್ಪನ ಪೋಷಣೆಯಲ್ಲಿ ನೂರಾರು ಗಿಡಗಳು ಸೊಂಪಾಗಿ ಬೆಳೆಯತೊಡಗಿದುವು.ವರ್ಷಗಳು ಕಳೆದ ಹಾಗೆ ಗಿಡಗಳು ದೊಡ್ಡ ಮರಗಳಾಗಿ ಬೆಳೆದು ದಾರಿಹೋಕರಿಗೆ ನೆರಳನ್ನು, ಫಲಗಳನ್ನು ನೀಡತೊಡಗಿದುವು. ಮಾಸ್ತರರು ಶಾಲಾ ವನಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಸಿದ್ದಪ್ಪನು ಮಾಡಿದ ಕೆಲಸವನ್ನು ಮಕ್ಕಳಿಗೆ ಪರಿಚಯ ಮಾಡಿಕೊಟ್ಟು ಅವನನ್ನು ಸನ್ಮಾನಿಸಿದರು. ಸಿದ್ದಪ್ಪ ಊರಿನ ಎಲ್ಲರಿಂದ ಗೌರವ ಪಡೆದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.