ಶುಕ್ರವಾರ, ಜನವರಿ 17, 2020
22 °C

ಮಾತಿನ ಕಿಮ್ಮತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮಾತಿರ್‌ಬೇಕು ಮಿಂಚ್ ಹೊಳ್‌ದಂಗೆ; ಕೇಳ್ದೋರ್ ಹ್ಞಾ... ಅನ್ನೊ ಹಂಗೆ~ ಜಿ.ಪಿ.ರಾಜರತ್ನಂ ಅವರ ಈ ಸಾಲುಗಳು ಮಾತು ಹೇಗಿರಬೇಕು ಅನ್ನೋದನ್ನ ಸೂಚಿಸುತ್ತದೆ. ನಾವಾಡುವ ಮಾತು ಇತರರ ಮೇಲೆ ಪ್ರಭಾವ ಬೀರುವಂತಿರಬೇಕು. ಅದನ್ನು ಕೇಳಿದವರು ಒಪ್ಪಿ ತಲೆದೂಗುವಂತಿರಬೇಕು. ನನಗೆ ಮಾತು ಕೇವಲ ಶಬ್ದ ಅನಿಸಲ್ಲ; ಅರ್ಥವಿದ್ದರೆ ಮಾತ್ರ ಅದಕ್ಕೆ ಮಾತು ಎನ್ನಬಹುದು.ಗುರು ಡಾ.ಪ್ರಭುಶಂಕರ್ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದರು. ಪದವನ್ನು ಎಲ್ಲೆಲ್ಲಿ, ಹೇಗೆ ಬಳಸಬೇಕು ಎಂಬುದನ್ನು ನಾನು ಅವರಿಂದ ಕಲಿತೆ. ಡಿವಿಜಿ ಒಂದು ಕಡೆ ಹೇಳುತ್ತಾರೆ ಶಬ್ದಕ್ಕೆ ಅರ್ಥ ಶಬ್ದಕೋಶದಿಂದ; ಭಾವಕ್ಕೆ ಅರ್ಥ ಭಗವಂತನಿಂದ ಅಂತ. ಮಾತು ನಮ್ಮ ಭಾವನೆಗಳನ್ನು ಇತರರಿಗೆ ತಲುಪಿಸುವಂತಿರಬೇಕು.ಒಬ್ಬ ಕವಿ, ಲೇಖಕ, ವಿಮರ್ಶಕನ ಮಾತುಗಳು ಸಾಮಾನ್ಯ ಜನರ ಮಾತಿಗಿಂತ ಭಿನ್ನವಾಗಿರುತ್ತದೆ. ಇವರ ಮಾತುಗಳಲ್ಲಿ ಅರ್ಥ ಪ್ರಪಂಚ, ಧ್ವನಿ ಪ್ರಪಂಚ ಹಾಗೂ ಭಾವಪ್ರಪಂಚ ಅಡಕಗೊಂಡಿರುತ್ತದೆ. ಅದಕ್ಕಾಗಿಯೇ ಹೇಳುವುದು ಅನುಭವಿಗಳ ಮಾತಿಗೆ ಕೇವಲ ನಿಘಂಟಿನ ಅರ್ಥ ಒಂದೇ ಇರುವುದಿಲ್ಲ. ಬದಲಾಗಿ ಅದಕ್ಕೆ ಬೇರೊಂದು ಅರ್ಥ ಇರುತ್ತದೆ ಎಂದು.ಕುರುಕ್ಷೇತ್ರ ಯುದ್ಧ ನಡೆಯುತ್ತಿರುತ್ತದೆ. ಮುರಿದುಬಿದ್ದ ರಥದ ಚಕ್ರವನ್ನು ಎತ್ತುತ್ತಿದ್ದ ಕರ್ಣನ ಮೇಲೆ ಬಾಣ ಬಿಡುವಂತೆ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಅದಕ್ಕೆ ಅರ್ಜುನನ ಮನಸ್ಸು ಅಳುಕುತ್ತದೆ. ಇದನ್ನು ಅರಿತ ಕೃಷ್ಣ ಹೇಳುತ್ತಾನೆ- `ಯಾರು ಯಾವಾಗ ಹೆಚ್ಚು ತೊಂದರೆಯಲ್ಲಿರುತ್ತಾರೆಯೋ ಆವಾಗಲೇ ಇನ್ನು ತೊಂದರೆ ನೀಡಬೇಕು~ ಅಂತ. ಈ ಮಾತುಗಳನ್ನು ಕೇಳಿದ ಅರ್ಜುನನ ಮನಸ್ಸು ದುಃಖಿತವಾಗಿ ಮುಖ ಕಪ್ಪಿಡುತ್ತದೆ. ಇದನ್ನು ಕಂಡ ಕೃಷ್ಣ ಹೇಳುತ್ತಾನೆ,ಹಾರವೇನಯ್ಯ ಕಂಗಳಲಿ       

ಕಸ್ತೂರಿಯೇನಯ್ಯ ಕದಪಿನಲಿ

ಕದನವಿದು ಶೃಂಗಾರವಿದು ವಿಪರೀತವಾಯ್ತು...ಅಂದರೆ, ಕೃಷ್ಣನ ಮಾತುಗಳನ್ನು ಕೇಳಿದಾಗ ಅರ್ಜುನನ ಕಣ್ಣಿನಲ್ಲಿ ಹನಿಗಳು ಮೂಡಿದವು (ಹಾರ), ಕೆನ್ನೆ ಕಪ್ಪಿಟ್ಟಿತು (ಕದಪು), ಇದು ರಣರಂಗ. ಇಲ್ಲಿ ವೀರ ರಸವಿರಬೇಕೆ ಹೊರತು ಶೃಂಗಾರವಲ್ಲ ಎಂದು ಕೃಷ್ಣ ಹೇಳುವ ಮಾತುಗಳನ್ನು ಕವಿ ಕಟ್ಟಿಕೊಡುವುದು ಹೀಗೆ.ಆಡುಮಾತು ಬಳಸಿದರು ಕೂಡ ಅದಕ್ಕೆ ಬೇರೊಂದು ಅರ್ಥವಿರುತ್ತದೆ ಎಂಬುದಕ್ಕೆ ಕೆ.ಎಸ್.ನರಸಿಂಹಸ್ವಾಮಿ ಅವರ ಒಂದು ಕವನದ ಸಾಲು ನೆನಪಾಗುತ್ತದೆ. 

ನೀನಿಷ್ಟು ಚೆಲುವೆ ಎಂದು ನನಗೆ ತಿಳಿದಿದ್ದು ಇಂದು...ಅಂದರೆ ನಿವೃತ್ತಿಯಾದ ಅಧಿಕಾರಿಯೊಬ್ಬ ಸಾರೋಟಿನಲ್ಲಿ ಮನೆಗೆ ಬಂದಿಳಿಯುತ್ತಾನೆ. ಪಡಸಾಲೆಯಲ್ಲಿ ಅಂಚೆ ಹಿಡಿದು ನಿಂತಿದ್ದ ಹೆಂಡತಿಯನ್ನು ಬೆರಗಿನಿಂದ ನೋಡುವ ಅವನ ಬಾಯಿಂದ ಈ ಉದ್ಗಾರ ತನ್ನಿಂತಾನೆ ಹೊರಡುತ್ತದೆ. ಕೆಲಸದ ಜಂಜಾಟದಲ್ಲಿ ಮೈಮರೆತಿದ್ದ ಆ ಅಧಿಕಾರಿಗೆ ತನ್ನ ಹೆಂಡತಿ ಇಷ್ಟೊಂದು ಚೆಲುವು ಎಂದು ಈವರೆಗೆ ತಿಳಿದಿರಲೇ ಇಲ್ಲ. ಈ ಭಾವದಲ್ಲೇ ಆತ `ಎರಡನೇ ಅಂಚೆಯಲ್ಲಿ ಬಂದದ್ದಕ್ಕೆ ಧನ್ಯವಾದಗಳು~ ಎನ್ನುತ್ತಾನೆ. ಅಂದರೆ ಅಂಚೆ ಎಂಬ ಪದಕ್ಕೆ ಇಲ್ಲಿ ಬೇರೊಂದು ಪದವಿದೆ. ಶಬ್ದಗಳು ಕೇವಲ ಸುಮ್ಮನೆ ಬಿದ್ದಿರುತ್ತವೆ. ಅವಕ್ಕೆ ವಿಶೇಷ ಅರ್ಥವನ್ನು ನಾವು ಕೊಟ್ಟಾಗ ಮಾತ್ರ ಮಾತಿಗೆ ಬೆಲೆ ಬರುತ್ತದೆ ಎಂಬುದು ನನ್ನ ಭಾವನೆ.ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಮಾತಿಗೆ ತುಂಬಾ ಮಾರ್ಕೆಟ್ ಇದೆ. ಮಾತು ಕೇವಲ ಮಾತಾಗಿದ್ದರೆ ಅದಕ್ಕೆ ಹೆಚ್ಚಿನ ಬೆಲೆಯಿಲ್ಲ. ಇಲ್ಲಿ ಮಾತಿಗೆ ಕಿಮ್ಮತ್ತು ಸಿಕ್ಕಬೇಕು ಅಂದರೆ ತೂಕ ಮತ್ತು ಅರ್ಥ ಎರಡೂ ಇರಬೇಕು. ಜತೆಗೆ ಮಾತಿಗೆ ಅನುಭವದ ಲೇಪ ಇದ್ದರೆ ಅದಕ್ಕೆ ವಿಶೇಷ ಮಾನ್ಯತೆ ಸಿಕ್ಕುತ್ತದೆ.ಇವತ್ತಿನ ಪರಿಸ್ಥಿತಿಯಲ್ಲಿ ಮಾತಿನ ವೇಗ ಮತ್ತು ಆವೇಗ ಎರಡೂ ಬೆರಗು ಹುಟ್ಟಿಸುತ್ತದೆ. ಕಾಲ ತನ್ನ ಪಾಡಿಗೆ ತಾನು ಸಾಗುತ್ತಿರುತ್ತದೆ. ಅದರ ಗತಿ ಕೂಡ ತೀವ್ರವಾದುದು. ಸಮಾಜ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಹಾಗೆಯೇ ಪ್ರತಿಯೊಬ್ಬರು ಕೂಡ ಮಾತಿನ ಹೊಸಗತಿಗೆ  ಹೊಂದಿಕೊಳ್ಳುವುದಕ್ಕೆ ಧಾವಿಸಬೇಕು. ಇಲ್ಲದಿದ್ದರೆ ಕಾಲ ನಮ್ಮನ್ನು ಹಿಂದೆ ತಳ್ಳಿ ಬಿಡುತ್ತದೆ.

 

ಪ್ರತಿಕ್ರಿಯಿಸಿ (+)