ಶುಕ್ರವಾರ, ಮೇ 29, 2020
27 °C
ಮಾತ್‌ಮಾತಲ್ಲಿ

ಮಾತಿನ ಜಾದೂ

ನಿರೂಪಣೆ: ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

ಮಾತಿನ ಜಾದೂ

ಜಾದೂಗಾರನಿಗೆ ಮಾತೇ ಬಂಡವಾಳ, ಮಾತಿನ ಮೋಡಿಯನ್ನು ಅರಿತವನು ಮಾತ್ರ ಮೋಡಿ ಮಾಡಬಲ್ಲ ಎಂದು ನಂಬಿದವನು. ಮಾತು ಅಂದರೆ `ಮಾ' ಮತ್ತು `ತು'. ಮರಾಠಿಯಲ್ಲಿ ನಾನು ಮತ್ತು ನೀನು ಎಂದರ್ಥ.ಹುಟ್ಟಿದ್ದು ಬೆಳೆದದ್ದು ಕಡಲತಡಿ ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ ಅಮ್ಮ ಮನೋರಮಾ ಮತ್ತು ಅಪ್ಪ ನಾರಾಯಣ ಕಾಮತ್ ನಾಟಕ ಹಾಗೂ ಸಂಗೀತದಲ್ಲಿ ವಿಪರೀತ ಆಸಕ್ತಿ ಇಟ್ಟುಕೊಂಡಿದ್ದರು. ಹಾಗಾಗಿ ನಾನು ಈ ಕ್ಷೇತ್ರದಲ್ಲಿ ಅನಾಯಾಸವಾಗಿ ಆಸಕ್ತಿ ತಳೆದೆ.ನಾಲ್ಕನೇ ತರಗತಿಯಲ್ಲಿರುವಾಗ ಮನೆಯ ಮುಂದೆ ದೊಂಬರಾಟ ನಡೆಸುವವರು ಢಮ ಢಮ ಶಬ್ದದೊಂದಿಗೆ ಎರಡು ಹಗ್ಗ ಮೂರು ಗುಂಡು ಕಲ್ಲು ಇಟ್ಟುಕೊಂಡು ಕಸರತ್ತು ಮಾಡುತ್ತಿದ್ದರು. ಈ ಘಟನೆ ನನ್ನ ಸುಪ್ತ ಮನಸ್ಸಿನ ಮೇಲೆ ಅದೆಷ್ಟು ಪ್ರಭಾವ ಬೀರಿತೆಂದರೆ, ಇದಾಗಿ ಆರು ವರ್ಷಗಳ ನಂತರ ನನ್ನೊಳಗೆ ಜಾದೂಗಾರ ನೆಲೆ ನಿಲ್ಲಲ್ಲು ಹವಣಿಸಿದ್ದ.ನಾನಿಂದು  ಜಾದೂಗಾರನಾಗಲಿಕ್ಕೆ ಆ ದೊಂಬರಾಟದ ಕುಟುಂಬವೇ ಕಾರಣವೆಂದು ಹೇಳಲು ಹೆಮ್ಮೆ ಎನಿಸುತ್ತದೆ. ಇದರ ಜತೆಯಲ್ಲಿ ತಬಲಾ ಕಲಿತೆ, ಹಾಡುಗಾರನಾಗಿದ್ದೆ, ನಟನೆಯ ಸೆಳೆತವಿತ್ತು. ಐದನೇ ವಯಸ್ಸಿಗೆ ಶಾಲೆಯಲ್ಲಿ `ಧ್ರುವ ಚರಿತ್ರ'ದಲ್ಲಿ ಅಭಿನಯ ನೀಡಿದ್ದೆ. ಜಾದೂ ಕ್ಷೇತ್ರ ಆಕರ್ಷಣೀಯವಾಗಿ ಕಾಣಿಸಿತು. ಹತ್ತನೇ ತರಗತಿಯ ಸುಮಾರಿಗೆ ಈ ಜಾದೂವಿನ ರಹಸ್ಯವನ್ನು ತಿಳಿಯಲು ಪ್ರಯತ್ನಿಸಿ, ಯಶಸ್ವಿಯಾದೆ.ಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್ ಅವರ ಪ್ರದರ್ಶನ ನೋಡಿದ ಮೇಲಂತೂ ಏನೇ ಆಗಲಿ ಜಾದೂಗಾರನಾಗಿ ಸೈ ಅನಿಸಿಕೊಳ್ಳಬೇಕೆನಿಸಿತು. ಗಾಯನ ಒಲಿದಿದ್ದರಿಂದ ಆರ್ಕೆಸ್ಟ್ರಾದ ವೇದಿಕೆಯಲ್ಲೂ ಜಾದೂ ಪ್ರದರ್ಶನ ನೀಡಿದರೆ ಹೇಗೆ ಎಂಬ ಉಪಾಯವೂ ಹೊಳೆಯಿತು. ಹಾಗಾಗಿ ಹಿರಿಯ ಜಾದೂಗಾರ ಪ್ರೊ.ಶಂಕರ್ ಅವರ ಸಹಕಾರದೊಂದಿಗೆ ದೂರಶಿಕ್ಷಣದಲ್ಲೇ ಜಾದೂವಿಗೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಪೂರೈಸಿದೆ. ಗಾಯನದೊಂದಿಗೆ ಜಾದೂಗಾರನಾದೆ.ಒಬ್ಬ ಜಾದೂಗಾರ ಉತ್ತಮ ನಟನಾಗಿರಬೇಕು, ಸಂಗೀತ, ಸಾಹಿತ್ಯದ ಜ್ಞಾನವಿದ್ದರೆ ಆತ ವೃತ್ತಿಬದುಕಿನಲ್ಲಿ ಶ್ರೇಷ್ಠ ಮಟ್ಟವನ್ನು ಹೊಂದಲು ಸಾಧ್ಯವಿದೆ. ಈವರೆಗೆ `ಅನಾಮಿಕ', `ಮನ್ಮಥರಾಜ', `ಸ್ವಾತಿ', `ಅನಂತನ ಅವಾಂತರ' ಸೇರಿದಂತೆ ಕನ್ನಡದಲ್ಲಿ ಹದಿನೈದು ಸಿನಿಮಾ, ಕೊಂಕಣಿ `ಉಜುವಾಡು' ಚಿತ್ರದಲ್ಲಿ ನಟಿಸಿದ್ದೇನೆ. 1991ರಲ್ಲಿ ನೆರಳಿನಾಟದ ಕಲೆಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದೆ.ಜಾದೂ ಪ್ರದರ್ಶನ ನೀಡುವ ಸಲುವಾಗಿ ಸುಮಾರು 40ಕ್ಕೂ ಅಧಿಕ ದೇಶಗಳನ್ನು ಸುತ್ತಾಡಿದ್ದೇನೆ. `ರಂಗ ತರಂಗ' ಸಾಂಸ್ಕೃತಿಕ ಸಂಸ್ಥೆಯೊಂದಿಗೆ ಹಲವು ಚಟುವಟಿಕೆಗಳನ್ನು ನಡೆಸುತ್ತಿದ್ದೇನೆ. ಜಾದೂ ಕಲೆಗೆ ಯಾವುದೇ ರಾಜಾಶ್ರಯ ದೊರೆಯದೇ ಇದ್ದರೂ, ರಾಜ ಪೇಟ ಹಾಕಿಕೊಂಡು ಜಾದೂ ಮಾಡುವ ಗತ್ತು ಗಮ್ಮತ್ತೇ ಬೇರೆ.ಅಂಧ ಯುವಕನಿಗೆ ಜಾದೂ ಹೇಳಿಕೊಡುವ ಪಣ ತೊಟ್ಟಿದ್ದೇನೆ. ಒಂದು ವರ್ಷದ ಅವಧಿಯಲ್ಲಿ ಆತ ಜಾದೂಗಾರನಾಗುತ್ತಾನೆ. ಅದನ್ನು ನೋಡಿ ಸಂಭ್ರಮಿಸುವುದಕ್ಕಾಗಿ ಕಾತರನಾಗಿದ್ದೇನೆ. ಇದಲ್ಲದೇ ಬುದ್ಧಿಮಾಂದ್ಯ ಮಕ್ಕಳಲ್ಲಿ ಅಡಗಿರುವ ಜಾದೂಗಾರನನ್ನು ಹೊರತೆಗೆಯುವ ಪ್ರಯತ್ನದಲ್ಲೂ ನಿರತನಾಗಿದ್ದೇನೆ. ಈ ಮಧ್ಯೆ ಸಿನಿಮಾ ನಿರ್ಮಾಪಕನಾಗಬೇಕು, ಇನ್ನಷ್ಟು ದೇಶ ಸುತ್ತಬೇಕು, ಜಾದೂ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಬೇಕು ಎಂಬ ಹತ್ತು ಹಲವು ಕನಸುಗಳು ಗರಿಗೆದರಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.