ಗುರುವಾರ , ಮೇ 13, 2021
16 °C

ಮಾನವೀಯ ಮುಖವಾಡ, ಧಾರಾಳ ಆಮಿಷ

ಕೆ.ಪಿ. ಸುರೇಶ Updated:

ಅಕ್ಷರ ಗಾತ್ರ : | |

ಕೇಂದ್ರ ಸರ್ಕಾರದ ಹೊಸ ಭೂ ಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಕರಡು ಮಸೂದೆ ಈ ಮೊದಲಿನ ವಸಾಹತುಶಾಹಿ 1894 ರ ಭೂ ಸ್ವಾಧೀನ ಮಸೂದೆಗೆ ಬದಲಾಗಿ ಜಾರಿಗೆ ಬರಲಿದೆ.ತೀರಾ ದಮನಕಾರಿಯಾಗಿದ್ದ ಹಳೇ ಕಾನೂನು ಜಾಗತೀಕರಣದ ಈ ದಿನಗಳಲ್ಲಿ ಆಕ್ರೋಶಭರಿತ ಪ್ರತಿಭಟನೆಗೆ ಕಾರಣವಾಗಿದ್ದರಿಂದ ಕೊಂಚ ಮಾನವೀಯ ಮುಖವಾಡ, ಧಾರಾಳ ಆಮಿಷದ ಹೂರಣ ತುಂಬಿರುವ ಈ ಮಸೂದೆಯನ್ನು ಕೇಂದ್ರ ಸರ್ಕಾರ ತೇಲಿಬಿಟ್ಟಿದೆ. ಈ ಮಸೂದೆಯಲ್ಲಿ ಮಾನವೀಯ ಅಂಶಗಳೆಂದರೆ ಸಾಮಾಜಿಕ ಪರಿಣಾಮದ ಅಧ್ಯಯನದ ಬಳಿಕವಷ್ಟೇ ನೋಟಿಫಿಕೇಶನ್ ಮಾಡಬೇಕೆಂಬ ಕಲಮು ಹಾಗೂ ಸಂಪೂರ್ಣ ಪರಿಹಾರ ನೀಡಿದ ಬಳಿಕವಷ್ಟೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂಬ ನಿರ್ದೇಶನ. ಉಳಿದ ಅಂಶಗಳೆಲ್ಲ ತೀರಾ ಅನುಕಂಪ ರಹಿತ, ವ್ಯಾವಹಾರಿಕ ಗಣನೆ ಮತ್ತು ಲೆಕ್ಕಾಚಾರಗಳನ್ನು ಒಳಗೊಂಡಿವೆ.ಉದಾಹರಣೆಗೆ, ಪರಿಹಾರ ನೀಡುವ ಕಲಮುಗಳಲ್ಲಿ, ಏಕಗಂಟಿನ ಪರಿಹಾರದ ಪಟ್ಟಿ ಇದೆ. ಇದರ ಪ್ರಕಾರ, ದನದ ಕೊಟ್ಟಿಗೆ, ಪೆಟ್ಟಿ ಅಂಗಡಿ ಅಥವಾ ವರ್ಕ್‌ಶಾಪ್‌ಗಳಿಗೆ ನೀಡುವ ಪರಿಹಾರವನ್ನು ಕನಿಷ್ಠ ರೂ 25 ಸಾವಿರವೆಂದು ನಿಗದಿಪಡಿಸಲಾಗಿದೆ.ಆದರೆ ಕಾನೂನು ಜಾರಿಗೆ ಬಂದ ಬಳಿಕ, ವರ್ಷ ವರ್ಷ ಈ ಮೊತ್ತವನ್ನು ಯಾವುದೇ ಸೂಚ್ಯಂಕಕ್ಕೆ ಜೋಡಿಸಿ ಪರಿಹಾರವನ್ನು ಹೆಚ್ಚಿಸಬೇಕೆಂಬ ಯಾವ ನಿರ್ದೇಶನವೂ ಇಲ್ಲ. ಅಂದರೆ, ಇನ್ನು ಹತ್ತು ವರ್ಷದ ಬಳಿಕವೂ ರಾಜ್ಯ ಸರ್ಕಾರಗಳು, ಈ ಕಾನೂನಿನ ಮರೆಯಲ್ಲಿ ರೂ. 30-35 ಸಾವಿರ ನೀಡಿ ಕೈತೊಳೆದುಕೊಳ್ಳಬಹುದು. ಇನ್ನು ಆದಿವಾಸಿಗಳ ಬಗ್ಗೆ ಪರಿಹಾರದಲ್ಲಿ ಧಾರಾಳತನ ತೋರುವಂತೆ ಕಂಡರೂ, ಅವರಿಗುಂಟಾಗುವ ಸಾಂಸ್ಕೃತಿಕ ಆಘಾತಕ್ಕೆ ಪರಿಹಾರ ಕಂಡುಕೊಳ್ಳುವ ಯಾವ ವಿವರಗಳೂ ಈ ಕಾನೂನಿನಲ್ಲಿ ಇಲ್ಲ. ಆದಿವಾಸಿ ಗ್ರಾಮದ ಪ್ರಸ್ತಾಪ ಮಾನ್ಯವಾಗುವುದು, ಸ್ವಾಧೀನ ಪಡಿಸಿಕೊಂಡ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿದ್ದರೆ ಮಾತ್ರ.ಇದರ ಕಲಂ 1ಎ ಪ್ರಕಾರ (ಎ), ಸರ್ಕಾರ ತನ್ನ ಉಪಯೋಗಕ್ಕೆ ಜಮೀನು ವಶಪಡಿಸಿಕೊಂಡಾಗ, (ಬಿ) ಸರ್ಕಾರ ವಶಪಡಿಸಿಕೊಂಡು ಅಂತಿಮವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಕಂಪೆನಿಗಳಿಗೆ ಜಮೀನನ್ನು ವರ್ಗಾಯಿಸುವ ಉದ್ದೆೀಶ ಹೊಂದಿದಾಗ, (ಸಿ) ಸಾರ್ವಜನಿಕ ಉದ್ದೇಶವನ್ನು ಘೋಷಿಸುವ ಖಾಸಗಿ ಕಂಪೆನಿಗಳಿಗಾಗಿ ಸರ್ಕಾರ ಜಮೀನು ವಶಪಡಿಸಿಕೊಂಡಾಗ ಈ ಕಾನೂನು  ಅನ್ವಯವಾಗುತ್ತದೆ.ಸಮಸ್ಯೆ ಇಲ್ಲಿಂದಲೇ ಶುರು. ಖಾಸಗಿ ಕಂಪೆನಿಗಳಿಗಾಗಿ ಜಮೀನು ವಶಪಡಿಸಿಕೊಳ್ಳುವ ಅಥವಾ ಅಂತಿಮವಾಗಿ ವರ್ಗಾಯಿಸುವ ತನ್ನ ಉದ್ದೇಶವನ್ನು ಸರ್ಕಾರ ನೇರವಾಗಿ ಘೋಷಿಸುತ್ತದೆ. ಖಾಸಗೀ ಕಂಪೆನಿಗಳಿಗೆ ಜಮೀನು ನೀಡುವುದು ಸಾರ್ವಜನಿಕ ಉದ್ದಿಶ್ಯ ಹೇಗಾಗುತ್ತದೆ ಎನ್ನುವುದೇ ಈಗಿನ ಪ್ರಶ್ನೆ. ಇದಕ್ಕಿಂತಲೂ ಅಪಾಯಕಾರಿ ಅಂಶ ಕಲಮು 2ರಲ್ಲಿದೆ. ಇದರಲ್ಲಿ ಪರಿಹಾರ ಮತ್ತು ಪುನರ್ವಸತಿ ಅಂಶಗಳು ಹೀಗಿವೆ:(ಎ) ಖಾಸಗಿ ಕಂಪೆನಿಗಳು ನೂರು ಎಕರೆಗೂ ಮಿಕ್ಕಿದ ಜಮೀನನ್ನು ಖರೀದಿಸಿದಾಗ (ಬಿ) ಸಾರ್ವಜನಿಕ ಉದ್ದೇಶಕ್ಕೆಂದು ಖಾಸಗಿ ಕಂಪೆನಿ ಜಮೀನು ಕೊಳ್ಳುವಾಗ ಆಂಶಿಕ ಜಮೀನು ಭಾಗವನ್ನು ಸ್ವಾಧೀನ ಪಡಿಸಿಕೊಡುವಂತೆ ಸರ್ಕಾರವನ್ನು ಕೋರಿದಾಗ ಅನ್ವಯವಾಗುತ್ತದೆ. ಅರ್ಥಾತ್, ಕಂಪೆನಿಯೊಂದು ನೂರು ಎಕರೆಗಿಂತ ಕಡಿಮೆ ಜಮೀನು ಕೊಂಡಾಗ ಈ ಪುನರ್ವಸತಿ/ಪರಿಹಾರ ಕಾನೂನು ಅನ್ವಯವಾಗುವುದಿಲ್ಲ.2007 ನೇ ಇಸವಿಯ ಕರಡು ಮಸೂದೆಯಲ್ಲಿ, ಖಾಸಗೀ ಕಂಪೆನಿಗೆ ಸರ್ಕಾರವೇ ಖುದ್ದಾಗಿ ಸ್ವಾಧೀನಪಡಿಸಿಕೊಡುವ ಜಮೀನಿನ ಪ್ರಮಾಣ ಶೇ 30ಕ್ಕೆ ಮಿತಿಗೊಳಿಸಲಾಗಿತ್ತು, ಇಲ್ಲಿ, ಆಂಶಿಕ ಎಂಬ ಪದದ ಮೂಲಕ ಶೇ 50ರಷ್ಟು ಜಮೀನು ನೀಡುವ ಸಾಧ್ಯತೆಗೆ ಕಾನೂನಿನಲ್ಲಿ ಮಾನ್ಯತೆ ನೀಡಲಾಗಿದೆ.ಸಾರ್ವಜನಿಕ ಉದ್ದೇಶ ಎಂಬುದರ ನಿರ್ವಚನದ ಕಲಂ (4) ಈ ರೀತಿ ಇದೆ: ಸಾರ್ವಜನಿಕರ  ಯಾವುದೇ ಅನುಕೂಲಕ್ಕಾಗಿ ಜಮೀನು ಸ್ವಾಧೀನ, ಖಾಸಗೀ ಕಂಪೆನಿಗಳಿಗೆ ಜಮೀನೂ ಸೇರಿ; ಈ ಪ್ರದೇಶದ ಶೇ 80  ಜನರು ಒಪ್ಪಿಗೆ ನೀಡಿದಾಗ.

 

ಖಾಸಗಿ ಕಂಪೆನಿಯೊಂದು ಸಾರ್ವಜನಿಕ ಉದ್ದೇಶದ ಯೋಜನೆಗೆ ಆಂಶಿಕ ಜಮೀನು ಖರೀದಿಸಿ, ಉಳಿದ ಭಾಗದ ಸ್ವಾಧೀನಕ್ಕೆ ಸಂಬಂಧಿತ ಸರ್ಕಾರದ ಮಧ್ಯಪ್ರವೇಶ ಕೋರಿದಾಗ, ಆ ಕಂಪೆನಿಯು ಈ ಕಾನೂನಿಗೆ ಒಳಪಡುತ್ತದೆ. ಈ ಕಲಂ ನಿರಪಾಯಕಾರಿಯಾಗಿ ಮೇಲ್ನೋಟಕ್ಕೆ ಕಂಡರೂ, ಅಪಾಯವಿರುವುದು ಎಲ್ಲೆಂದರೆ, ಖಾಸಗಿ ಕಂಪೆನಿ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸುವ ಬದಲು ಸರ್ಕಾರವನ್ನು ಕೋರಿದರೆ, ಕೊಳ್ಳುವ ಖರ್ಚು ಕಡಿಮೆ, ಯಾಕೆಂದರೆ ಸರ್ಕಾರ ನಿಗದಿತ  ಬೆಲೆ ಮಾರುಕಟ್ಟೆ ದರಕ್ಕಿಂತ ಎಷೋ ಕಡಿಮೆ, (ಜನಾರ್ದನ ರೆಡ್ಡಿಯ ಉಕ್ಕು ಕಾರ್ಖಾನೆಗೆ ಆಂಧ್ರ ಸರ್ಕಾರ ಎಕರೆಗೆ 18 ಸಾವಿರ ರೂ.ನಂತೆ ಜಮೀನು ಮಾರಾಟ ಮಾಡಿತ್ತು, ಇದೇ ಜಮೀನು ಅಡವಿಟ್ಟು ರೆಡ್ಡಿ 350 ಕೋಟಿ ಸಾಲ ಪಡೆದಿದ್ದ!!)ಮಾರುಕಟ್ಟೆ ದರವನ್ನು ನಿಗದಿಪಡಿಸುವ ಭಾಗ 3ರ, ಕಲಂ 20ರ ಪ್ರಕಾರ, ಆಯಾಯ ಪ್ರದೇಶದ ಕಳೆದ ಮೂರು ವರ್ಷದ ನೋಂದಣಿ ದಾಖಲೆಗಳ ಪ್ರಕಾರ ಅತ್ಯಂತ ಹೆಚ್ಚು ದರದಲ್ಲಿ ನೋಂದಣಿ ದರವನ್ನು ಮಾನದಂಡವಾಗಿ ಪರಿಗಣಿಸಿ, ಅದರ ಮೂರು ಪಟ್ಟು ದರವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪರಿಹಾರ ದರವಾಗಿ ಎಕರೆಯೊಂದಕ್ಕೆ ನಿಗದಿಪಡಿಸಬಹುದು. ಇದರ ಹಿಕಮತ್ತೆಂದರೆ, ಬಹುತೇಕ ಗ್ರಾಮಾಂತರ ಪ್ರದೇಶಗಳ ಮಾರುಕಟ್ಟೆ ದರ ಸರ್ಕಾರೀ ದರಕ್ಕಿಂತ 10 ಪಟ್ಟು ಜಾಸ್ತಿ ಇದೆ. ಆದ್ದರಿಂದ ಮೂರು ಪಟ್ಟು ಕೂಡಾ ಮಾರುಕಟ್ಟೆ ದರಕ್ಕಿಂತ ಕಡಿಮೆಯೇ ಆಗುತ್ತದೆ. ಹಾಗೆಯೇ, ಜಮೀನು ಪಡೆಯುವ ಖಾಸಗಿ ಕಂಪೆನಿ ಪರಿಹಾರದ ಶೇ 25ರಷ್ಟನ್ನು ತನ್ನ ಅಥವಾ ತನ್ನ ಅಧೀನ ಕಂಪೆನಿಗಳ ಷೇರುಗಳ ಮೂಲಕ ನೀಡಬಹುದು.ಅಂದರೆ, ಅಂಬಾನಿ ತನ್ನ ಪ್ರತಿಷ್ಠಿತ ಕಂಪೆನಿಗೆ ಜಮೀನು ಪಡೆಯುವಾಗ, ನಷ್ಟದಲ್ಲಿರುವ ತನ್ನ ಅಧೀನ ಕಂಪೆನಿಯ ಶೇರುಗಳನ್ನು ಪರಿಹಾರವಾಗಿ ನೀಡಿ ಕೈ ತೊಳೆದುಕೊಳ್ಳಬಹುದು. ಈ ಷೇರುಗಳ ಮೌಲ್ಯ ಸ್ಥಿರತೆ ಬಗ್ಗೆ ರಕ್ಷಣೆ ನೀಡುವ ಯಾವ ಪ್ರಸ್ತಾಪವೂ ಈ ಕಾನೂನಿನಲ್ಲಿ ಇಲ್ಲ.ಈ ಕರಡಿನ 9ನೇ ಅಧ್ಯಾಯದಲ್ಲಿರುವ 61ನೇ ಕಲಂ ಪ್ರಕಾರ, ಸರ್ಕಾರವು ತಾನು  ನೋಟಿಫೈ ಮಾಡಿಯೂ ವಶಪಡಿಸಿಕೊಳ್ಳದೇ ಬಿಟ್ಟ ಜಮೀನನ್ನು ಅದರ ಒಡೆಯನಿಗೆ ಮರಳಿಸುವ ಸ್ವಾತಂತ್ರ್ಯ ಹೊಂದಿದೆ. ಇಂಥಾ ಸಂದರ್ಭದಲ್ಲಿ ಸರ್ಕಾರವು ಈ ವ್ಯಕ್ತಿಗೆ ನಿರ್ಧರಿತ ಪರಿಹಾರ ನೀಡಬೇಕು. ಈ ಕಲಂ ಪರೋಕ್ಷವಾಗಿ ಡಿನೋಟಿಫಿಕೇಶನ್ನನ್ನು ಸಕ್ರಮಗೊಳಿಸುತ್ತದೆ.ಹಾಗೇ  ಕಲಂ 69ರ ಪ್ರಕಾರ ಸ್ವಾಧೀನಗೊಳಿಸಿದ ಜಮೀನನ್ನು 5ವರ್ಷಗಳ ಕಾಲ ಉಪಯೋಗಿಸದೇ ಬಿಟ್ಟರೆ, ಅಂಥಾ ಜಮೀನನ್ನು ಅದರ ಒಡೆಯನಿಗೆ  ಮರಳಿ ನೀಡಬೇಕಾಗುತ್ತದೆ.  ನಮ್ಮ ಬಿಡಿಎ  ಅಥವಾ ಕೆಐಎಡಿಬಿ ಈ ರೀತಿಯ ಕೃತ್ಯಗಳಲ್ಲಿ ತೊಡಗಲು ಈ ಕಾನೂನು ಅಧಿಕೃತತೆ ನೀಡುತ್ತದೆ.ಐದು ವರ್ಷ ಸುಮ್ಮನೆ ಇಟ್ಟುಕೊಂಡು, ಬಳಿಕ ಬೇಕಾಬಿಟ್ಟಿ  ಮರಳಿಸುವ ಮೂಲಕ ವ್ಯಾಪಕ ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಸಾಧ್ಯತೆಗೆ ಈ ಕಾನೂನು ರಹದಾರಿ ನೀಡುತ್ತದೆ (ಲೋಕಸಭೆಯಲ್ಲಿ ಮಂಡಿಸಿದ ಕರಡು ಪ್ರತಿಯಲ್ಲಿ ಈ ಕಲಮನ್ನು ಕೊಂಚ ಬದಲಾಯಿಸಲಾಗಿದೆ. ಇದರ ಪ್ರಕಾರ 10 ವರ್ಷಗಳ ಬಳಿಕವೂ ಜಮೀನು ಹಾಗೇ ಉಳಿದರೆ, ಈ ಜಮೀನನ್ನು ಸರ್ಕಾರದ ಭೂ ಬ್ಯಾಂಕ್ ಗೆ ವರ್ಗಾಯಿಸಬೇಕು)ಇದೇ ಅಧ್ಯಾಯದ ಶೆಡ್ಯೂಲ್ 2 ಪರಿಹಾರದ ವಿಧಗಳನ್ನು ಪಟ್ಟಿ ಮಾಡುತ್ತದೆ. ಇದರ ಕಲಂ1(1)ರ ಪ್ರಕಾರ ಮನೆ ಕಳಕೊಂಡ ಕುಟುಂಬಕ್ಕೆ ಗ್ರಾಮಾಂತರ ಪ್ರದೇಶದಲ್ಲಿ 150 ಚ.ಮೀ ಹಾಗೂ ನಗರ ಪ್ರದೇಶದಲ್ಲಿ 50 ಚ. ಮೀ ಮನೆ ನೀಡಲಾಗುತ್ತದೆ.ನಗರ ಪ್ರದೇಶದಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್‌ಗಳ ಮೂಲಕವೂ ಸರ್ಕಾರ ಇದನ್ನು ಒದಗಿಸಬಹುದು. ಈ ಮನೆ ಬೇಡ ಅನ್ನುವ ಕುಟುಂಬಗಳಿಗೆ ರೂ. 1.5 ಲಕ್ಷ  ಹೆಚ್ಚಿನ ಪರಿಹಾರ ನೀಡಲಾಗುತ್ತದೆ. ಲೆಕ್ಕ ಹಾಕಿದರೆ ಈ ಮನೆಯ ಅಳತೆ ಗ್ರಾಮಾಂತರದಲ್ಲಿ 60:40 ಅಡಿಯೂ ಆಗುವುದಿಲ್ಲ. ಸಂತ್ರಸ್ತನ ಮನೆ ಯಾವ ಅಗತ್ಯಗಳನ್ನು ಪೂರೈಸುವಷ್ಟು ದೊಡ್ಡದಿತ್ತು ಎಂಬುದರ ಮೇರೆಗೆ ಈ  ಪರಿಹಾರ ರೂಪದ ಮನೆ ಇಲ್ಲದಿದ್ದರೆ ಅದೊಂದು ಸಾಂಸ್ಕೃತಿಕ, ಮಾನಸಿಕ ಆಘಾತವೆಂಬುದು ಸರ್ಕಾರಕ್ಕೆ ಗೊತ್ತಿಲ್ಲವೇ? ನಗರ ಪ್ರದೇಶದಲ್ಲಿ ಈ ಪರಿಹಾರ ಇನ್ನೂ ಕ್ರೂರವಾಗಿದೆ. ಈ 50 ಚ. ಮೀ ಅಂದರೆ ಸುಮಾರು 500 ಚದರ ಅಡಿ ಆಗುತ್ತದೆ. ಇದನ್ನು ಮನೆಯೆಂದು ಕರೆಯುವುದೂ ಬಲು ಕ್ರೂರವೇ ಸರಿ.ಅಡಕ 8ರ ಪ್ರಕಾರ ಸದರಿ ಜಮೀನು ಬಳಕೆ ಮಾಡುವ ಕಂಪೆನಿಯು, ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ನೀಡಬೇಕೆಂದು ಹೇಳುವ ಸರ್ಕಾರ, ಅದಕ್ಕೊಂದು ಕುಂಟು ಪಂಕ್ತಿಯ ಟಿಪ್ಪಣಿಯ ಮೂಲಕ  ಅದನ್ನು ನಿಷ್ಫಲಗೊಳಿಸುತ್ತದೆ.ಈ ಟಿಪ್ಪಣಿಯ ಪ್ರಕಾರ ಕಂಪೆನಿಯು ಉದ್ಯೋಗ ನೀಡಲು ವಿಫಲವಾದರೆ, ಸರ್ಕಾರವು ಆ ಕುಟುಂಬಕ್ಕೆ ರೂ. 2 ಲಕ್ಷ ರೂಪಾಯಿಗಳ ಪರಿಹಾರ ನೀಡುತ್ತದೆ.ವಿಚಿತ್ರವೆಂದರೆ, ವಚನಭ್ರಷ್ಟ ಕಂಪೆನಿಯನ್ನು ಹೊಣೆಗಾರನನ್ನಾಗಿಸುವ ಬದಲು ಸರ್ಕಾರವೇ ದಂಡ ನೀಡುವುತ್ತಿರುವುದು. ಜಾಗತೀಕರಣದ  ಸ್ವಭಾವವೇ ಪ್ರಭುತ್ವ ಮತ್ತು ಅಧಿಕಾರಶಾಹಿಯನ್ನು ಖಾಸಗಿ ಕಂಪೆನಿಗಳ ಹಿತಾಸಕ್ತಿಯ ರಕ್ಷಕರನ್ನಾಗಿ ಮಾಡುವುದು. ಈ ಕಾನೂನಿನಲ್ಲೂ ಈ ಲಕ್ಷಣ ಎಗ್ಗಿಲ್ಲದೇ ಜಾಹೀರಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.