ಶುಕ್ರವಾರ, ಆಗಸ್ಟ್ 6, 2021
21 °C

ಮಾನವ ಶರೀರಕ್ಕೆ ಅಂತ್ಯ ಸಹಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೆಗೂ ಶ್ರೀ ಸತ್ಯಸಾಯಿಬಾಬಾ ಅವರ ದೇಹಾವಸಾನವಾಯಿತು!

ಐವತ್ತು ವರ್ಷಗಳ ಹಿಂದೆ, ನಾನೂ ಮಿತ್ರ ಪೂರ್ಣಚಂದ್ರ ತೇಜಸ್ವಿಯವರೂ ಬಾಬಾ ಅವರನ್ನು ಪುಟ್ಟಪರ್ತಿಯಲ್ಲಿ ಕಂಡಿದ್ದೆವು. ಆಗ ಅದಿನ್ನೂ ಒಂದು ಕುಗ್ರಾಮ; ಒಂದು ಸಣ್ಣ ಆಸ್ಪತ್ರೆಯಷ್ಟೆ ಅಲ್ಲಿತ್ತು (ಅಂದಹಾಗೆ, ತೇಜಸ್ವಿಯವರಿಗೆ ಸಾಯಿಬಾಬಾ ಅವರಲ್ಲಿ ಭಕ್ತಿಯೇನೂ ಇರಲಿಲ್ಲ; ಅವರ ಅಜ್ಜಿ-ತಾಯಿಯ ತಾಯಿ-ಬಾಬಾ ಭಕ್ತೆಯಾಗಿದ್ದುದರಿಂದ, ಸ್ವಲ್ಪ ಆಸಕ್ತಿ ಇತ್ತಷ್ಟೆ. ಆಮೇಲೆ ಅದೂ ಅಳಿಯಿತು.) ತೇಜಸ್ವಿಯವರಿಗೆ ಏನೋ ಅಮೂಲ್ಯವಾದ ವಸ್ತುವನ್ನು (ಉಂಗುರ?) ಬಾಬಾ ಅನುಗ್ರಹಿಸಿದಂತೆ ತೋರುತ್ತದೆ; ಬಡಪಾಯಿ ನನಗೆ ಲಭಿಸಿದ್ದು ಬರಿಯ ಮಾಮೂಲು ಬೂದಿಯೆ! (ಅಲ್ಲದೆ, ಅವರ ಒಂದು ಆಶ್ವಾಸನೆ ಹುಸಿಯಾಯಿತು.)ಅದು ಹಾಗಿರಲಿ. ಇನ್ನೊಂದು ಮುಖ್ಯ ವಿಷಯ:  ಆ ನಂತರ ನಾನು ಕುವೆಂಪು ಅವರೊಡನೆ ಒಮ್ಮೆ ಮಾತನಾಡುವಾಗ, ಬಾಬಾ ಬಗೆಗೆ ಅವರು ಹೇಳಿದರು: ‘ಸಾಯಿಬಾಬಾ ಅವರಲ್ಲಿ ಏನೋ ಶಕ್ತಿಯಿರಬೇಕು. ಅವರೊಬ್ಬ ‘ಡೆಮಿ ಗಾಡ್’ (ಅರ್ಧದೇವತೆ, ಉಪದೇವತೆ) ಇರಬಹುದು!’ಕುವೆಂಪು ಹೀಗೆಂದರೆಂದು ನಾನೊಂದು ಸಭೆಯಲ್ಲಿ ಶ್ರೋತೃವೊಬ್ಬರ ಪ್ರಶ್ನೆಗೆ ಉತ್ತರವಾಗಿ ತಿಳಿಸಿದಾಗ, ಅಲ್ಲಿ ಉಪಸ್ಥಿತರಿದ್ದ ‘ಕುಂಬಳಕಾಯಿ ಆಕಾಂಕ್ಷಿ’ ಡಾ. ಎಚ್. ನರಸಿಂಹಯ್ಯನವರು ತಲೆಯಾಡಿಸಿ ನಕ್ಕರು; ಅವರ ಪಕ್ಕದಲ್ಲಿದ್ದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ‘ಹೌದು, ಹೌದು. ಡಮ್ಮಿ ಗಾಡ್’ (ತೋರಿಕೆಯ ದೇವತೆ) ಎಂದು ವ್ಯಂಗ್ಯವಾಡಿದರು!ಮಾನವ ಶರೀರಕ್ಕೆ ಅಂತ್ಯ ಉಂಟೇ ಉಂಟು. ಅಚ್ಚರಿಯೇನು? ಸಾಯಿಬಾಬಾ ಅವರಿಗೆ 85 ವರ್ಷ ವಯಸ್ಸಾಗಿತ್ತು. ‘ಯಾರು ರಾಮನೋ, ಯಾರು ಕೃಷ್ಣನೋ ಅವನೇ ಈ ದೇಹದಲ್ಲಿ ರಾಮಕೃಷ್ಣನಿದ್ದಾನೆ!’ ಎಂದು ಘೋಷಿಸಿದ ‘ಅವತಾರವರಿಷ್ಠ’ ಶ್ರೀ ರಾಮಕೃಷ್ಣ ಪರಮಹಂಸರು 50ನೆಯ ವಯಸ್ಸಿಗೇ (ಗಂಟಲು ಕ್ಯಾನ್ಸರಿನಿಂದ ನರಳಿ) ಅಸ್ತಂಗತರಾಗಲಿಲ್ಲವೆ? ಇಷ್ಟಕ್ಕೂ, ಸಾಯಿಬಾಬಾ ಅವರ ಬಗೆಗೆ ನನ್ನ ವೈಯಕ್ತಿಕ ಅಭಿಪ್ರಾಯವೇನು? ನಾನೊಬ್ಬ ಸಂದೇಹವಾದಿ ಎಂದಷ್ಟೆ ಹೇಳಬಲ್ಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.