ಸೋಮವಾರ, ಜನವರಿ 27, 2020
22 °C

ಮಾನವ ಹಕ್ಕು ಸಂಘಟನೆಗಳಿಗೆ ಲಗಾಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾನವ ಹಕ್ಕು ಸಂಘಟನೆಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳುವಂತೆ ಬೇಹುಗಾರಿಕಾ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿವೆ.`ಕೆಲವು ಮಾನವ ಹಕ್ಕು ಸಂಘಟನೆಗಳು ಮಾವೊವಾದಿ ಸಿದ್ಧಾಂತದ ಪ್ರಚಾರಕ್ಕೆ ನೆರವು ನೀಡುತ್ತಿವೆ~ ಎಂದು ಗೃಹ ಸಚಿವಾಲಯಕ್ಕೆ ನೀಡಿದ ಮಾಹಿತಿಯಲ್ಲಿ ಆರೋಪಿಸಲಾಗಿದೆ.ಇಂಥ ಸಂಘಟನೆಗಳ ವಿರುದ್ಧ `ಅಪರಾಧ ಸಂಚಿಗೆ ನೆರವು ಹಾಗೂ ಕುಮ್ಮಕ್ಕು~ ನೀಡಿದ ಆರೋಪ ಹೊರಿಸಬಹುದು ಎಂದು ಬೇಹುಗಾರಿಕಾ ಸಂಸ್ಥೆಗಳು ಅಭಿಪ್ರಾಯ ಪಟ್ಟಿದ್ದಾಗಿ ಗೃಹ ಸಚಿವಾಲಯ ತಿಳಿಸಿದೆ.ನಿಷೇಧಿತ ಮಾವೊವಾದಿ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಮಾನವ ಹಕ್ಕು ಸಂಘಟನೆಗಳು ಹಾಗೂ ಕಾರ್ಯಕರ್ತರ ಹೆಸರುಗಳನ್ನೂ ಗೃಹ ಸಚಿವಾಲಯಕ್ಕೆ ನೀಡಲಾಗಿದೆ. ಐದರಿಂದ ಆರರಷ್ಟಿರುವ ಇಂಥ ಸಂಘಟನೆಗಳು ಮಾವೊವಾದಿಗಳ ಮುಂಚೂಣಿ ಸಂಘಟನೆಗಳಂತೆ ಕಾರ್ಯ ನಿರ್ವಹಿಸುತ್ತಿವೆ ಎಂದೂ ಆರೋಪಿಸಲಾಗಿದೆ.ಮಾನವ ಹಕ್ಕು ಸಂಘಟನೆಗಳ ಚಟುವಟಿಕೆ ಕಳೆದ ಕೆಲವು ವರ್ಷಗಳಲ್ಲಿ ತೀವ್ರಗೊಂಡಿದ್ದು, ಅದು ಮಾನವ ಹಕ್ಕುಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಎಂದು ಬೇಹುಗಾರಿಕಾ ದಳ ಮಾಹಿತಿ ನೀಡಿದೆ ಎನ್ನಲಾಗಿದೆ.ಅಕ್ರಮ ಬಂಧನ, ವಿಚಾರಣೆಗೆ ಒಳಪಡುವ ವ್ಯಕ್ತಿಗಳಿಗೆ  ಕಿರುಕುಳ, ಸಾವು, ನಕಲಿ ಕಾರ್ಯಾಚರಣೆಯಂಥ ವಿಷಯಗಳಿಗೆ ದನಿ ಎತ್ತುವ ಈ ಸಂಘಟನೆಗಳು ನಕ್ಸಲೀಯರಿಗೂ ನೆರವು ನೀಡುತ್ತಿರುವುದಾಗಿ ತಿಳಿದುಬಂದಿದೆ.

ಮಾನವ ಹಕ್ಕು ಕಾರ್ಯಕರ್ತ ವಿನಾಯಕ ಸೆನ್ ಅವರ ವಿರುದ್ಧ ಕೂಡ ಇಂಥದ್ದೇ ಆರೋಪ ಹೊರಿಸಲಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಪ್ರತಿಕ್ರಿಯಿಸಿ (+)