ಮಂಗಳವಾರ, ಮೇ 24, 2022
23 °C

ಮಾನೆ ಕುಟುಂಬಕ್ಕೆ ಡಿಜಿಪಿ ಸಾಂತ್ವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ನಕ್ಸಲ್ ನಿಗ್ರಹ ಪಡೆಯ (ಎಎನ್‌ಎಫ್) ಕಾನ್‌ಸ್ಟೇಬಲ್ ಮಹದೇವ ಎಸ್. ಮುತ್ತಪ್ಪ ಮಾನೆ ಅವರ ಕುಟುಂಬ ಸದಸ್ಯರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಂ ಅಚ್ಯುತರಾವ್ ಅವರು ನಗರದಲ್ಲಿ ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.



ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ವಸತಿ ಸಮುಚ್ಚಯದ ಕುವೆಂಪು ಬ್ಲಾಕ್‌ನಲ್ಲಿರುವ ಮಾನೆ ಅವರ ನಿವಾಸಕ್ಕೆ ಬೆಳಿಗ್ಗೆ ಭೇಟಿ ನೀಡಿದ ಅಚ್ಯುತರಾವ್ ಹಾಗೂ ಕೆಎಸ್‌ಆರ್‌ಪಿ ಐಜಿಪಿ ಕೆ.ಎಲ್.ಸುಧೀರ್ ಅವರು ಮೃತರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.



ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧೀರ್, `ಮಾನೆ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ವಇಚ್ಛೆಯಿಂದಲೇ ಅವರು ಎಎನ್‌ಎಫ್‌ಗೆ ಹೋಗಿದ್ದರು. ಇಲಾಖೆಯಿಂದ ಸಿಗಬೇಕಾದ ಎಲ್ಲ ರೀತಿಯ ಸರ್ಕಾರಿ ಸವಲತ್ತುಗಳನ್ನು ಅವರ ಕುಟುಂಬ ಸದಸ್ಯರಿಗೆ ಆದಷ್ಟು ಶೀಘ್ರವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.



ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕಿನ ಬಾಳಗಾಂವ ಗ್ರಾಮದಲ್ಲಿ 1970ರ ಅ.18ರಂದು ಜನಿಸಿದ್ದ ಮಾನೆ ಅವರು 1993ರ ಮೇ 24ರಂದು ರಾಜ್ಯ ಪೊಲೀಸ್ ಇಲಾಖೆಗೆ ಸೇರಿದ್ದರು. ಶಿವಮೊಗ್ಗದಲ್ಲಿ ಒಂದು ವರ್ಷ ತರಬೇತಿ ಪಡೆದ ಬಳಿಕ 1994ರ ಜುಲೈ 1ರಂದು ಕೆಎಸ್‌ಆರ್‌ಪಿ ಒಂಬತ್ತನೇ ತುಕಡಿಗೆ ವರ್ಗಾವಣೆಯಾಗಿ ಬೆಂಗಳೂರಿಗೆ ಬಂದಿದ್ದರು.



ಕಮಾಂಡೊ ತರಬೇತಿ ಮತ್ತು ಹರಿಯಾಣದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ತರಬೇತಿ ಪಡೆದಿದ್ದರು. ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಗೆ ರಚಿಸಲಾಗಿದ್ದ ವಿಶೇಷ ಕಾರ್ಯ ಪಡೆಯಲ್ಲೂ (ಎಸ್‌ಟಿಎಫ್/ 2000-2003) ಅವರು ಕಾರ್ಯ ನಿರ್ವಹಿಸಿದ್ದರು. ಆ ನಂತರ 2010ರ ಜುಲೈ 22ರಂದು ಎರವಲು ಸೇವೆ ಮೇಲೆ ಎಎನ್‌ಎಫ್‌ಗೆ ಹೋಗಿದ್ದರು.



ಅವರ ಪತ್ನಿ ಶೋಭಾ, ಮಕ್ಕಳಾದ ಸಂದೀಪ್ ಮತ್ತು ಪ್ರದೀಪ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾನೆ ಅವರು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಅವರ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದಂತೆ ಸ್ನೇಹಿತರು, ಸಂಬಂಧಿಕರು ಹಾಗೂ ಇಲಾಖೆಯ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದ ದೃಶ್ಯ ಕಂಡುಬಂತು. ಮಾನೆ ಅವರ ಪತ್ನಿ ಮತ್ತು ಮಕ್ಕಳು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.



ದುಃಖವಾಗುತ್ತಿದೆ: `ಮಾನೆ ಅವರು ಇಲಾಖೆಗೆ ಸೇರಿದ ದಿನದಿಂದಲೂ ನನಗೆ ಪರಿಚಿತರು. ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಸ್ವಇಚ್ಛೆಯಿಂದಲೇ ಎಎನ್‌ಎಫ್‌ಗೆ ಹೋಗಿದ್ದರು. ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಅವರು ಸಾವನ್ನಪ್ಪಿರುವ ವಿಷಯ ತಿಳಿದು ತುಂಬಾ ದುಃಖವಾಗುತ್ತಿದೆ~ ಎಂದು ಮಾನೆ ಅವರ ಪಕ್ಕದ ಮನೆಯಲ್ಲೇ ನೆಲೆಸಿರುವ ಕೆಎಸ್‌ಆರ್‌ಪಿ ಮುಖ್ಯ ಕಾನ್‌ಸ್ಟೇಬಲ್ ನಾರಾಯಣಪ್ಪ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.