ಭಾನುವಾರ, ಮೇ 9, 2021
27 °C

ಮಾರಶೆಟ್ಟಿ ದೊಡ್ಡಿ: ಅಭಿವೃದ್ಧಿ ಮಾರು ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ರಸ್ತೆ, ಚರಂಡಿ, ಸ್ವಚ್ಛತೆಯನ್ನೇ ಕಾಣದ ತಾಲ್ಲೂಕಿನ ಮಾರಶೆಟ್ಟಿ ದೊಡ್ಡಿ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಕನಿಷ್ಠ ಸೌಲಭ್ಯಗಳಾದ ಚರಂಡಿ, ರಸ್ತೆ, ಸ್ವಚ್ಛತೆ ಕಲ್ಪಿಸಲು ಯಾರೂ ಗಮನ ಹರಿಸಿಲ್ಲ.ಗ್ರಾಮದ ಅನೇಕರು ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಸರ್ಕಾರ ಸೂರು ನೀಡುವ ಆಶ್ರಯ, ಅಂಬೇಡ್ಕರ್, ಇಂದಿರಾ ಆವಾಜ್, ಕಚ್ಚಾ- ಪಕ್ಕಾ, ಬಸವ ಇಂದಿರಾ ಇತ್ಯಾದಿ ಯೋಜನೆ ಜಾರಿಗೆ ತಂದಿದ್ದರೂ, ಈ ಗ್ರಾಮದ ಜನತೆಗೆ ಮಾತ್ರ ಈ ಯೋಜನೆ ತಲುಪಿಲ್ಲ.ಹಿಂದುಳಿದ ಜನಾಂಗಕ್ಕೆ ಸೇರಿದ ಅನಕ್ಷರಸ್ಥರೇ ಹೆಚ್ಚಾಗಿ ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಅಗತ್ಯಗಳ ಬಗ್ಗೆ ಕೇಳುವಷ್ಟು ಆಸಕ್ತಿ ಯಾವ ಜನ ಪ್ರತಿನಿಧಿಗೂ ಇಲ್ಲ ಎಂಬುದು ಇಲ್ಲಿನ ನಾಗರಿಕರ ದೂರು. ಇವರ ಪರವಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟರಾಜು ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ. ಹೊಸ ಯೋಜನೆಗಳು ಬರುತ್ತಲೇ ಇವೆ, ತಾಲ್ಲೂಕಿನಲ್ಲಿ ಆ ಯೋಜನೆಗಳ ಅನುಷ್ಠಾನ ಸಾಗುತ್ತಿದೆ. ಆದರೆ ಈ ಜನತೆಗೆ ಮಾತ್ರ ಎಲ್ಲವೂ ಮರೀಚಿಕೆಯಾಗಿದೆ.`ಬಹಳ ವರ್ಷಗಳಿಂದ ಗುಡಿಸಿಲಿನಲ್ಲೇ ವಾಸಿಸುತ್ತಿದ್ದೇವೆ. ಈ ಗ್ರಾಮಕ್ಕೆ  ರಸ್ತೆ, ಚರಂಡಿ ನಿರ್ಮಿಸದೇ ಇದ್ದರೂ ಪರವಾಗಿಲ್ಲ. ಬಿಸಿಲು, ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ಮನೆ ನಿರ್ಮಿಸಿ ಕೊಡುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ತಕ್ಷಣ ಮನೆ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಇಲ್ಲಿನ ಹಲವು ನಿವಾಸಿಗಳು ಆಗ್ರಹಿಸಿದ್ದಾರೆ.ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನರಿಗೆ ಮೂಲ ಸೌಲಭ್ಯಗಳನ್ನು ದೊರಕಿಸಲು ಮುಂದಾಗಬೇಕಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.