ಶನಿವಾರ, ಮೇ 15, 2021
24 °C

ಮಾರುಕಟ್ಟೆ ಆವರಣದಲ್ಲೇ ಘಮಘಮಿಸುತ್ತಿದೆ ಮಲ್ಲಿಗೆ!

ಪ್ರಜಾವಾಣಿ ವಾರ್ತೆ/ಪ್ರಕಾಶ್ ಸುವರ್ಣ ಕಟಪಾಡಿ Updated:

ಅಕ್ಷರ ಗಾತ್ರ : | |

ಶಿರ್ವ: ಕರಾವಳಿಯಾದ್ಯಂತ ಸುರಿದ ಭಾರಿ ಮಳೆಯ ಕಾರಣದಿಂದಾಗಿ ಉಡುಪಿ ಮಲ್ಲಿಗೆ ಇಳುವರಿ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಮಲ್ಲಿಗೆ ಧಾರಣೆ ಪಾತಾಳಕ್ಕೆ ಕುಸಿದಿದೆ. ಇದೇ ವೇಳೆ ಧಾರ್ಮಿಕ ಹಾಗೂ ಮದುವೆ ಇನ್ನಿತರ ಶುಭಸಮಾರಂಭಗಳು ವಿರಳವಾಗಿರುವುದರಿಂದಲೂ ಕರಾವಳಿಯಲ್ಲಿ ಉಡುಪಿ ಮಲ್ಲಿಗೆ ಬೇಡಿಕೆ ಕಮ್ಮಿಯಾಗಿದೆ.ಸೀಸನ್ ನಲ್ಲಿ 400ರಿಂದ 800ರ ವರೆಗೆ ಕಟ್ಟೆಯಲ್ಲಿ ನಿಗದಿಯಾಗುತ್ತಿದ್ದ ಗರಿಷ್ಠ ದರದ ಬದಲು ಇದೀಗ ಅಟ್ಟಿಯೊಂದಕ್ಕೆ ಕನಿಷ್ಠ 70 ರೂಪಾಯಿ ದರ ನಿಗದಿಯಾಗುತ್ತಿದೆ. ಶಂಕರಪುರ ಕಟ್ಟೆಗಳಲ್ಲಿ ಮಲ್ಲಿಗೆ ಹೇರಳವಾಗಿರುವುದರಿಂದ ಉಡುಪಿ, ಮಂಗಳೂರು, ಕೇರಳ ಮತ್ತು ಮುಂಬೈ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲದಂತಾಗಿದೆ. ಮಲ್ಲಿಗೆ ಬೆಳೆಗಾರರು ಮಳೆಯೊಂದಿಗಿನ ತಂಪನೆಯ ವಾತಾವರಣದ ನಡುವೆ ಬಂಪರ್ ಬೆಳೆಯನ್ನು ಕಂಡುಕೊಂಡರೂ ಸಹ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿಯಾಗಿದೆ.ಕರಾವಳಿಯಲ್ಲಿ ಮುಂಗಾರು ಮಳೆ ಸಕತ್ತಾಗಿ ಸುರಿದು ಏಕಾಏಕಿ ಮಲ್ಲಿಗೆ ಇಳುವರಿಯಲ್ಲಿ ಏರಿಕೆ ಕಂಡಿರುವುದರಿಂದ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಮಲ್ಲಿಗೆ ಬೇಡಿಕೆ ಕಳೆದುಕೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಗೆ ಇಳುವರಿ ಜಾಸ್ತಿಯಾದರೂ ಬೇಡಿಕೆಯಿಲ್ಲದೆ ಮಾರುಕಟ್ಟೆ ಧಾರಣೆ ತೀವ್ರ ಕುಸಿತಕ್ಕೊಳಗಾಗಿದೆ ಎಂಬುದು ಕಟಪಾಡಿಯ ಹೂವಿನ ವ್ಯಾಪಾರಿ ಮಹಮ್ಮದ್ ಆರೀಫ್ ಅವರ ಅಭಿಪ್ರಾಯ. ಜೂನ್ ತಿಂಗಳ ಆರಂಭದಿಂದಲೇ ಮಲ್ಲಿಗೆ ಗಿಡಗಳಲ್ಲಿ  ಹೂ ಬಿಡಲಾರಂಭಿಸಿರುವುದರಿಂದ ಕಳೆದ 20ದಿನಗಳಿಂದಲೂ ಮಲ್ಲಿಗೆ ಬೆಳೆಗಾರರು ಸತತವಾಗಿ ನಷ್ಟವನ್ನು ಎದುರಿಸುತ್ತಿದ್ದಾರೆ. ಜೊತೆಗೆ ಮಲ್ಲಿಗೆ ಹೇರಳವಾಗಿ ಬೇಡಿಕೆಯಿಲ್ಲದೆ ಹೂವಿನ ವ್ಯಾಪಾರಿಗಳೂ ಕೂಡಾ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ಹೊಡೆತ ಎದುರಿಸುತ್ತಿದ್ದಾರೆ. ಸೀಸನ್‌ನಲ್ಲಿ ಸಹಸ್ರಾರು ರೂಪಾಯಿಗೆ ದೊರೆಯುತ್ತಿದ್ದ ಮಲ್ಲಿಗೆ ಅಟ್ಟಿ ಬರೇ 70 ರೂಪಾಯಿಗೆ ಲಭ್ಯವಾಗಿದೆ. ಮಾರುಕಟ್ಟೆಗಳಲ್ಲಿ ಕೂಡಾ ರೇಟಿಲ್ಲದೆ ಬೆಳಿಗ್ಗಿನಿಂದ ಸಂಜೆ ತನಕ ಮಲ್ಲಿಗೆ ಘಮಘಮಿಸುತ್ತಿದೆ. ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಮಲ್ಲಿಗೆ ಬೆಳೆಗಾರರೂ ಕೂಡಾ ಮೊಗ್ಗುಗಳನ್ನು ಕೊಯ್ದು ಕಟ್ಟಿ ಮಾರುಕಟ್ಟೆಗೆ ಒಯ್ಯಲಾರದಷ್ಟು ಮಲ್ಲಿಗೆ ಬೆಳೆದಿರುವುದರಿಂದ ತೀವ್ರ ಅಸಮಾಧಾನಕ್ಕೊಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದ ಕಾರಣ ಮಲ್ಲಿಗೆ ಬೆಳೆಗಾರರಲ್ಲಿ ಆಸಕ್ತಿಯೂ ಕಡಿಮೆಯಾಗಿದೆ. ಅನೇಕ ಮಂದಿ ಧಾರಣೆ ಕುಸಿತವಾಗಿರುವುದರಿಂದ ಹೂಗಳನ್ನು ಕೊಯ್ದು, ಕಟ್ಟುವ ಗೋಜಿಗೆ ಹೋಗದೆ ಗಿಡದಲ್ಲೇ ಬಿಟ್ಟು ಸುಮ್ಮನಾಗಿದ್ದಾರೆ. ಆದರೂ ಮಾರುಕಟ್ಟೆಗಳಲ್ಲಿ ರಾಶಿರಾಶಿ ಮಲ್ಲಿಗೆ ಅಟ್ಟಿ ರಾರಾಜಿಸುತ್ತಿದ್ದು, ಬೇಡಿಕೆಯಿಲ್ಲದೆ ಮಲ್ಲಿಗೆಯ ಸುವಾಸನೆ ಮಾತ್ರ ಮಾರುಕಟ್ಟೆ ಆವರಣದಲ್ಲೇ ಪೋಲಾಗುತ್ತಿದೆ.ಮಲ್ಲಿಗೆ ಗಿಡಗಳಿಗೆ ವಿಪರೀತ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಇಲ್ಲದೇ ಇರುವುದರಿಂದ ಅಗತ್ಯಕ್ಕಿಂತ ಹೆಚ್ಚು ಮಳೆಯಾದರೆ ಗಿಡಗಳಿಗೆ ಹಾನಿಯಾಗಿ, ಕೀಟಬಾಧೆ ಉಂಟಾಗಲಿದೆ. ಮಲ್ಲಿಗೆ ಕಾಂಡರೋಗ ಮತ್ತು ಎಲೆಚುಕ್ಕೆ ರೋಗಗಳು ಬಾಧಿಸುವುದರಿಂದ ಮಲ್ಲಿಗೆ ಗಿಡಗಳು ಮತ್ತೆ ಯಾವುದೇ ಪ್ರಯೋಜನಕ್ಕೆ ಬಾರದಂತಹ ಪರಿಸ್ಥಿತಿಗೆ ತಲುಪಲಿದೆ. ಹಾಗಾಗಿ ಇಳುವರಿ ಕಡಿಮೆಯಾದರೂ ಮಳೆಯಿಲ್ಲದೆ ಹೆಚ್ಚಿನ ಬಿಸಿಲು ಬಂದರೆ ಸಾಕು ಮಲ್ಲಿಗೆ ಗಿಡಗಳನ್ನು ವಿವಿಧ ರೋಗಬಾಧೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಅಚ್ಚಡದ ಮಲ್ಲಿಗೆ ಕೃಷಿಕ ಪೌಸ್ಟಿನ್ ಮೆಂಡೋನ್ಸಾ ಅಭಿಪ್ರಾಯಪಟ್ಟಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.