ಶುಕ್ರವಾರ, ಮೇ 14, 2021
32 °C
ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ನಮ್ಮ ಮೆಟ್ರೊ

ಮಾರ್ಗ ಬದಲು ಅನಗತ್ಯ: ತಜ್ಞರ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್.ವಿ. ರಸ್ತೆ-ಬೊಮ್ಮನಹಳ್ಳಿ (ರೀಚ್ 5) ಹಾಗೂ ನಾಗವಾರ-ಗೊಟ್ಟಿಗೆರೆ (ರೀಚ್6) ನಡುವಿನ ಮೆಟ್ರೊ ಮಾರ್ಗಗಳನ್ನು ಮೊದಲು ಉದ್ದೇಶಿಸಿದ ಮಾದರಿಯಲ್ಲೇ ಕಾಮಗಾರಿ ನಡೆಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.`ಜಯದೇವ ಹೃದ್ರೋಗ ಆಸ್ಪತ್ರೆಯ ಬಳಿ ಪಥ ಬದಲಾವಣೆ ಮಾಡುವುದರಲ್ಲಿ ಅರ್ಥ ಇಲ್ಲ' ಎಂದು ನಗರಾಭಿವೃದ್ಧಿ ತಜ್ಞರು ಪ್ರತಿಪಾದಿಸಿದ್ದಾರೆ. `ನಮ್ಮ ಮೆಟ್ರೊ' ಎರಡನೇ ಹಂತದ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ತಯಾರಿಸಿಕೊಟ್ಟಿರುವ ದೆಹಲಿ ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಸಹ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ಮೆಟ್ರೊ ರೈಲು ನಿಗಮದ ಸಲಹೆಗಾರ ಎಸ್.ಎನ್. ವೆಂಕಟ ರಾವ್ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, `ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆಯ ಸಂಸ್ಥೆಯ ಒಳ ಆವರಣದಲ್ಲಿ ನಿಲ್ದಾಣ ಸ್ಥಾಪಿಸುವುದರಿಂದ ಮೂರು ಬಗೆಯ ಸಮಸ್ಯೆ ಆಗುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

ಆತಂಕಪಡುವ ಅಗತ್ಯ ಇಲ್ಲ. ಸಾಕಷ್ಟು ಅಧ್ಯಯನ ನಡೆಸಿ ಜನರಿಗೆ ಹೆಚ್ಚು ತೊಂದರೆಯಾಗದಂತೆ ಮೂಲ ಯೋಜನೆಯನ್ನು ರೂಪಿಸಲಾಗಿತ್ತು. ಪಥ ಬದಲಾವಣೆಯಿಂದ ನಕಾರಾತ್ಮಕ ಪರಿಣಾಮಗಳು ಬೀರುವ ಸಾಧ್ಯತೆ ಇದೆ' ಎಂದು ಎಚ್ಚರಿಸಿದರು.`ನಿಲ್ದಾಣ ನಿರ್ಮಾಣದಿಂದ ಆಸ್ಪತ್ರೆಯ ಹೃದಯ ಭಾಗಕ್ಕೆ ಪೆಟ್ಟು ಬೀಳಲಿದೆ ಎಂಬ ಆತಂಕದಲ್ಲಿ ಸತ್ಯ ಇಲ್ಲ. ಆವರಣದೊಳಗೆ ಸಣ್ಣ ಪ್ರಮಾಣದ ಭೂಮಿಯನ್ನು ಪಡೆಯಲಾಗುತ್ತದೆ. ಅತ್ಯುತ್ತಮ ತಂತ್ರಜ್ಞಾನಗಳನ್ನು ಬಳಸುವುದರಿಂದ ದೂಳು ಹಾಗೂ ಸದ್ದುಗದ್ದಲದ ಸಮಸ್ಯೆ ಎದುರಾಗುವುದಿಲ್ಲ. ರಸ್ತೆಯ ದೂಳಿಗಿಂತ ಮೆಟ್ರೊ ಕಾಮಗಾರಿಯ ದೂಳಿನ ಪ್ರಮಾಣ ಕಡಿಮೆ ಇರಲಿದೆ' ಎಂದು ಸ್ಪಷ್ಪಪಡಿಸಿದರು.ಸಾರಿಗೆ ತಜ್ಞ ಎಂ.ಎನ್.ಶ್ರೀಹರಿ ಸಹ ಇದೇ ಬಗೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. `ಕೆಲವು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಥ ಬದಲಾವಣೆ ಮಾಡಲಾಗಿದೆ. ಮೊದಲು ಉದ್ದೇಶಿಸಿದ ಮಾದರಿಯೇ ಸೂಕ್ತವಾಗಿತ್ತು' ಎಂದು ಅವರು ತಿಳಿಸಿದರು.`ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ'ಯ ಹಿತದೃಷ್ಟಿಯಿಂದ `ನಮ್ಮ ಮೆಟ್ರೊ' ಎರಡನೇ ಹಂತದ ಎರಡು ಮಾರ್ಗಗಳ ಪಥವನ್ನು ಬದಲಾಯಿಸಲು ಮತ್ತು ಸಂಸ್ಥೆಯ ಒಳ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಿಲ್ದಾಣವನ್ನು ಹೊರ ಭಾಗಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಈ ನಿರ್ಧಾರದ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತವಾಗಿತ್ತು. ಈ ನಡುವೆ, `ಎತ್ತರಿಸಿದ ಮಾರ್ಗದಲ್ಲೇ ಪಥ ನಿರ್ಮಾಣದಿಂದ ಯೋಜನೆಯ ವೆಚ್ಚ ದುಬಾರಿ ಆಗುವುದಿಲ್ಲ. ಸುರಂಗ ಮಾರ್ಗಕ್ಕೆ ಖರ್ಚು ಹೆಚ್ಚು ಆಗುತ್ತದೆ' ಎಂದು ಮೆಟ್ರೊ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.