ಗುರುವಾರ , ಮೇ 13, 2021
16 °C

ಮಾರ್ಚ್‌ಗೆ ವರದಿ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಲುವಾಗಿ ನೇಮಿಸಿರುವ `ಅಧಿಕಾರಿಗಳ ವೇತನ ಸಮಿತಿ~ ಅಧ್ಯಕ್ಷರೂ ಆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೀರ್ ಹರಿಸಿಂಗ್ ಅವರು ಈ ಸಂಬಂಧ ಮಾರ್ಚ್ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಕುರಿತು ವೇತನ ಸಮಿತಿ ಜತೆ ಶುಕ್ರವಾರ ಚರ್ಚೆ ನಡೆಸಿದರು. ಈ ಸಭೆ ನಂತರ ಹರಿಸಿಂಗ್ ಸುದ್ದಿಗಾರರ ಜತೆ ಮಾತನಾಡಿದರು.

ವೇತನ ಪರಿಷ್ಕರಣೆ ಕುರಿತು ವರದಿ ಸಲ್ಲಿಸಲು ಮಾರ್ಚ್‌ವರೆಗೆ ಸಮಯ ಇದೆ. ಆ ವೇಳೆಗೆ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.ಸರ್ಕಾರಿ ನೌಕರರ ಅಭಿಪ್ರಾಯಗಳನ್ನು ಪಡೆದು, ಎಷ್ಟು ಪ್ರಮಾಣದ ವೇತನ ಹೆಚ್ಚಿಸಬಹುದು ಎನ್ನುವುದರ ಬಗ್ಗೆ ಸರ್ಕಾರಕ್ಕೆ ಸಲಹೆಗಳನ್ನು ನೀಡಲಾಗುವುದು ಎಂದು ನುಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬೈರಪ್ಪ ಮಾತನಾಡಿ, `ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೌಕರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕನಿಷ್ಠ ಶೇ 30ರಷ್ಟು ಮಧ್ಯಂತರ ಪರಿಹಾರ ನೀಡಬೇಕು~ ಎಂದು ಆಗ್ರಹಪಡಿಸಿದರು.`ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸಬೇಕು. ಕನಿಷ್ಠ ವೇತನವನ್ನು ರೂ 4,800ರಿಂದ ರೂ 10 ಸಾವಿರಕ್ಕೆ ಹೆಚ್ಚಿಸಬೇಕು. ಗರಿಷ್ಠ ವೇತನವನ್ನು ರೂ 39 ಸಾವಿರದಿಂದ ರೂ 90 ಸಾವಿರಕ್ಕೆ ಹೆಚ್ಚಿಸಬೇಕೆನ್ನುವ ಬೇಡಿಕೆ ಇಟ್ಟಿರುವುದಾಗಿ ಬೈರಪ್ಪ ಹೇಳಿದರು.ಪ್ರಸ್ತುತ 25 ವೇತನ ಶ್ರೇಣಿಗಳಿದ್ದು, ಅವುಗಳನ್ನು 28ಕ್ಕೆ ಹೆಚ್ಚಿಸಬೇಕು. ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಇರುವ ಹಾಗೆ ಕಾಲಕಾಲಕ್ಕೆ ಬಡ್ತಿ ನೀಡಬೇಕು. ಕೇಂದ್ರ ಸರ್ಕಾರದಲ್ಲಿ 20 ವರ್ಷ ಸೇವೆ ಸಲ್ಲಿಸಿದವರಿಗೆ ಶೇ 50ರಷ್ಟು ಪಿಂಚಣಿ ಸಿಗುತ್ತಿದ್ದು, ಅದೇ ರೀತಿ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು. ಪ್ರಸ್ತುತ ರಾಜ್ಯದಲ್ಲಿ 33 ವರ್ಷ ಸೇವೆ ಸಲ್ಲಿಸಿದವರಿಗೆ ಶೇ 50ರಷ್ಟು ಪಿಂಚಣಿ ನೀಡಲಾಗುತ್ತಿದೆ. ಇದನ್ನು ಬದಲಿಸಬೇಕು ಎಂದು ವಿವರಿಸಿದರು.ಕೊಪ್ಪಳ ಉಪಚುನಾವಣೆ ನಂತರ ಮಧ್ಯಂತರ ಪರಿಹಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಅವರು ನೀಡಿದ್ದು, ಅದನ್ನು ಎದುರು ನೋಡುತ್ತಿರುವುದಾಗಿ ಬೈರಪ್ಪ ಹೇಳಿದರು.ಅಧಿಕಾರಿಗಳ ವೇತನ ಸಮಿತಿಯ ಸಭೆಯಲ್ಲಿ ಸಮಿತಿ ಸದಸ್ಯರಾದ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ವಿ.ನಾಗರಾಜನ್, ಕಾರ್ಯದರ್ಶಿ ಅನಿಲ್ ಕುಮಾರ್ ಝಾ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸುಭಾಷ್ ಕುಂಠಿಯಾ, ಸಮಿತಿಯ ಸದಸ್ಯ ಕಾರ್ಯದರ್ಶಿ ಶಶಿಧರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.