ಮಂಗಳವಾರ, ಮೇ 24, 2022
27 °C

ಮಾರ್ದನಿಸಿದ ಓಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಇಪ್ಪತ್ತು ಸಾವಿರ ಕಂಠಗಳಿಂದ ಹೊರಬಂದ ಓಂ ನಿನಾದ ಇಡೀ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾರ್ದನಿಸಿತ್ತು. ಮತ್ತೆ ಒಂದೆರಡು ಕ್ಷಣ ನೀರವ ಮೌನ; ಉಸಿರಿನ ಮೆಲು ಸದ್ದು ಬಿಟ್ಟರೆ ಮತ್ತೇನು ಕೇಳುತ್ತಿಲ್ಲ. ಮತ್ತೆ ಮುಂಗಾರು ಮಳೆಯ ಅಬ್ಬರದಂತೆ ಓಂಕಾರ ನಾದ.ಇದು ಆರ್ಟ್ ಆಫ್ ಲಿವಿಂಗ್ ವತಿಯಿಂದ ನಗರದ ವಿಡಿಎಸ್‌ಟಿ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಹಸಿರೋತ್ಸವ- ಸತ್ಸಂಗದ ದೃಶ್ಯ. ಇಲ್ಲಿ  ಶ್ರೀ ರವಿಶಂಕರ ಗುರೂಜಿ, ನೆರೆದಿದ್ದ ಜನರಿಗೆ ಅಧ್ಯಾತ್ಮ ಹೇಳಿಕೊಟ್ಟರು, ಧ್ಯಾನ ಕಲಿಸಿದರು, ಎಲ್ಲರೊಡನೆ ಬೆರೆತು ತಾವು ನರ್ತಿಸಿದರು, ಹಾಡಿದರು, ಎಲ್ಲರನ್ನೂ ಮನೋರಂಜಿಸಿ ಕ್ಷಣ ಕಾಲ ಬೇರೊಂದು ಲೋಕಕ್ಕೆ ಕರೆದೊಯ್ದರು.ಇಡೀ ಸಭೆಯನ್ನು ತಮ್ಮ ಸುಪರ್ದಿಗೆ ತಗೆದುಕೊಂಡಿದ್ದ ಗುರೂಜಿ, ಸಭಿಕರನ್ನು ನಗಿಸುತ್ತಲೇ ದೇಶದ ಸಂಸ್ಕೃತಿ ಹಾಗೂ ಮೌಲ್ಯದ ಬಗ್ಗೆ ಅರಿವು ಮೂಡಿಸಿದರು. ನಾವು ಅನುಸರಿಸುತ್ತಿರುವ ಮಾರ್ಗ ಎಂತಹದು ಎಂದು ಕನ್ನಡಿಯಂತೆ ತೋರಿಸಿಕೊಟ್ಟರು. ಅಧ್ಯಾತ್ಮದಲ್ಲಿ ಪರಮಾತ್ಮನನ್ನು ಕಾಣಬೇಕು ಎಂದು ಕಿವಿಮಾತನ್ನೂ ಹೇಳಿದರು.ನಟರಾಜನ ಸ್ತುತಿಯೊಂದಿಗೆ ಪ್ರಾರಂಭವಾದ ಸತ್ಸಂಗದಲ್ಲಿ ಎತ್ತ ನೋಡಿದರು ಶಿವಮಯವೇ ಆಗಿತ್ತು. ’ಓಂ ನಮಃ ಶಿವಾಯ’  ಮಂತ್ರಾಕ್ಷರ ಇಡೀ ಸಭಾಂಗಣದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತ್ತು. ಶಿವನ ಸ್ತುತಿಗಳಿಗೆ ಧ್ವನಿಗೂಡಿಸಿದ ಗುರೂಜಿ, ಭಕ್ತಿಪರವಶರಾದ ಭಕ್ತರ ಮೇಲೆ ಹೂವಿನ ದಳವನ್ನು ಪ್ರೋಕ್ಷಣೆ ಮಾಡಿದರು.ಇದಕ್ಕೂ ಮೊದಲು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಬೇಸಾಯ ಮಾಡುತ್ತಿರುವ 108 ರೈತರನ್ನು ಆರ್ಟ್ ಆಫ್ ಲಿವಿಂಗ್ ವತಿಯಿಂದ ಸನ್ಮಾನಿಸಲಾಯಿತು.ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ, ಶಿವಕುಮಾರ ಸ್ವಾಮೀಜಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಎಚ್.ಕೆ. ಪಾಟೀಲ ಮತ್ತಿತರರು ಸತ್ಸಂಗದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.