ಮಂಗಳವಾರ, ಮೇ 17, 2022
23 °C

ಮಾಲತಿ ಯೋಜನೆಗಾಗಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಜಿಲ್ಲೆಯ ರೈತರಿಗೆ ಮಾಲತಿ ಯೋಜನೆಯ ಅನುಷ್ಠಾನದಿಂದ ಶಾಶ್ವತ ನೀರಾವರಿಯನ್ನು ಹೊಂದಲು ಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಮಾಲತಿ ಯೋಜನೆಯನ್ನು ಶೀಘ್ರವೇ ಅನುಷ್ಠಾನಗೊಳಿಸಬೇಕು~ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಜಗದೀಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸೋಮವಾರ ಜಿಲ್ಲಾ ಆಡಳಿತ ಕಚೇರಿಗೆ ತೆರಳಿ ನೂರಾರು ರೈತರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದ ಅವರು, ಜಿಲ್ಲೆಯಲ್ಲಿ ತುಂಗಾ ಮೇಲ್ದಂಡೆ ಯೋಜನೆ ಅನುಷ್ಠಾನದಿಂದ ರೈತರು ಕೇವಲ ಒಂದೇ ಬೆಳೆ ಬೆಳೆಯಬಹುದಾಗಿದೆ. ಇದರಿಂದ ರೈತರ ಸಂಕಷ್ಟ ಪರಿಹಾರವಾಗಿಲ್ಲ. ಆದ್ದರಿಂದ ಮಾಲತಿ ಯೋಜನೆ ಜಾರಿಗೆ ತರುವುದರಿಂದ ಜಿಲ್ಲೆಯ ಸಂಪೂರ್ಣ ಕೃಷಿ ಭೂಮಿ ನೀರಾವರಿ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.ಬರದಿಂದ ಪಾರಾಗಲು ಜಿಲ್ಲೆಯ ರೈತರಿಗೆ ಮಾಲತಿ ಯೋಜನೆ ಶಾಶ್ವತವಾಗಿ ವರದಾನವಾಗಲಿದೆ ಎಂದರಲ್ಲದೇ, ಕಳೆದ ಎರಡು ವರ್ಷದಿಂದ ಜಿಲ್ಲೆಯ ರೈತರು ಬರಗಾಲದಿಂದ ತತ್ತರಿಸ್ದ್ದಿದು, ರೈತರ ಸಾಲ ಮನ್ನಾ ಮಾಡಬೇಕು. ತುಂಗಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.ರೈತರು ಬೆಳೆದ ಬೆಳಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು. ರಸಗೊಬ್ಬರಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಬೇಕು. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಮುಷ್ಟೂರು ಗ್ರಾಮವನ್ನು ಸ್ಥಳಾಂತರ ಮಾಡಿ ಗ್ರಾಮಸ್ಥರಿಗೆ ಮನೆ ನಿರ್ಮಿಸಿಕೊಡಬೇಕು.ಬಗರ್ ಹುಕುಂ ಸಾಗುವಳಿ ಮಾಡಿದ ಜಿಲ್ಲೆಯ ಬಸರಿಕಟ್ಟಿ ತಾಂಡಾ ಮತ್ತು ಗಂಗಾಜಲ ತಾಂಡಾದ ರೈತರಿಗೆ ಹಕ್ಕು ಪತ್ರ ನೀಡಬೇಕು. ತಾಂಡಾದಲ್ಲಿ ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಬೇಕು. ಸಮಸ್ಯೆಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಜಯದೇವ ಮನವಿಯಲ್ಲಿ ಒತ್ತಾಯಿಸಿದ್ದಾರೆ.ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಮನವಿ ಸ್ವೀಕರಿಸಿ ಮಾತನಾಡಿ, ಈ ಬೇಡಿಕೆಗಳಿಗೆ  ಸರ್ಕಾರಕ್ಕೆ ಶಿಪಾರಸ್ಸು ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ನಾಗರಾಜ ದೊಡ್ಡಮನಿ, ಗುಡ್ಡಪ್ಪ ಹೊಸಮನಿ, ಹಾಲಪ್ಪ ಲಮಾಣಿ, ಕೀಮಪ್ಪ ಲಮಾಣಿ, ಗುತ್ಯಾಪ್ಪ ಗುಡಿಕಿಂದ್ಲರ, ತಮ್ಮಣ್ಣ ಮುದುಕಣ್ಣನವರ, ದೇವಿರವ್ವ, ನೀಲವ್ವ, ಪುಟ್ಟವ್ವ ಹಾಜರಿದ್ದರು.ಮೂರ್ತಿ ಪುನರ್ ಪ್ರತಿಷ್ಠಾಪನೆ

ಹಾವೇರಿ: `ಶಕ್ತಿ ದೇವತೆಯರಲ್ಲಿ ಒಬ್ಬಳಾಗಿದ್ದು, ನಾನಾ ಹೆಸರುಗಳಿಂದ ಜೀವ ಜಗತ್ತಿಗೆ ಶಕ್ತಿ ತುಂಬುತ್ತಿದ್ದಾಳೆ. ಅಂತಹದೊಂದು ರೂಪವೇ ಈ ಚೌಡೇಶ್ವರಿ ಮಾತೆ~ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶ್ರೀಗಳು ಹೇಳಿದರು.ನಗರದ ನಡುವಿನಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಮಂದಿರದಲ್ಲಿ ಚೌಡೇಶ್ವರಿ ಮೂರ್ತಿಯ ಪುನರ್ ಪ್ರತಿಷ್ಠಾಪನೆ ನೆರವೇರಿಸಿ ಶ್ರೀಗಳು ಮಾತನಾಡಿದರು.ಬೇಡಿ ಬಂದ ಭಕ್ತರಿಗೆ ಬಡತನವಿಲ್ಲವೆಂಬಂತೆ ಕಾಯುವ ಚೌಡೇಶ್ವರಿ ಮೂರ್ತಿ ಪವಾಡ ದೊಡ್ಡದು ಎಂದರು. ಪ್ರತಿಷ್ಠಾಪನೆಯ ವಿಧಿವಿಧಾನಗಳನ್ನು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶ್ರೀಗಳ ನೇತೃತ್ವದಲ್ಲಿ ಬಸವರಾಜ ಶಾಸ್ತ್ರೀಗಳ ವೈದಿಕತ್ವದಲ್ಲಿ ನೇರೆವೇರಿಸಲಾಯಿತು. ಮೂರ್ತಿ ದಾನಿಗಳಾದ ಲಲಿತಮ್ಮ ಶಿವಯ್ಯ ನಡುವಿನಮಠ, ನಾಗರಾಜ ನಡುವಿನಮಠ, ರವಿ ನಡುವಿನಮಠ, ಶಶಿಧರ ನಡುವಿನಮಠ, ಸುರೇಖಾ ಕಬ್ಬಿಣಕಂತಿಮಠ, ರವಿ ಪುತ್ರನ್ ಹಾಗೂ ವಿನಾಯಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ರಂಭಾಪುರಿ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಜಗದ್ಗುರು ರೇಣುಕ ಮಂದಿರದ ಅಧ್ಯಕ್ಷ ಎಸ್.ಎಸ್.ತುಪ್ಪದ, ಕಾರ್ಯದರ್ಶಿ ಜಿ.ಎಸ್.ಮರಿರೇವಣ್ಣನವರ, ಶಿವಯೋಗೆಪ್ಪ ಬೆನಕೊಪ್ಪ, ಹಾಲಯ್ಯ ಹಿರೇಮಠ, ನಗರಸಭಾ ಸದಸ್ಯೆ ನೀಲಮ್ಮ ಹಂಜಗಿ, ರುದ್ರಪ್ಪ ಜಾಬಿನ, ಸೋಮನಾಥಯ್ಯ, ಷಡಕ್ಷರಯ್ಯ ನಡುವಿನಮಠ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.