ಶುಕ್ರವಾರ, ಏಪ್ರಿಲ್ 16, 2021
22 °C

ಮಾಲಿ ಮುನಿದಿದ್ದಾನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಯಾವುದೇ ಶಾಲೆಗೆ ಹೋದರೂ ಒಂದು ಸಾಮಾನ್ಯ ಚಿತ್ರ ಕಣ್ಣಿಗೆ ಬೀಳಬಹುದು. ತರಗತಿಗಳಲ್ಲಿ ಆವರಿಸಿದ ಗಾಢ ಮೌನ.ನಿಶ್ಯಬ್ದವಾಗಿ ಏನನ್ನೋ ಓದುತ್ತಲೋ, ಬರೆಯುತ್ತಲೋ ಇರುವ ಮಕ್ಕಳು. ಚೇರಿನ ಮೇಲೆ ಸುಖಾಸೀನರಾಗಿ ಯಾವುದೋ ದಪ್ಪನೆಯ ಪುಸ್ತಕದ ಹಾಳೆಗಳಲ್ಲಿ ತೇಲಿ ಹೋಗುತ್ತಿರುವ ಶಿಕ್ಷಕರು....ಈ ಚಿತ್ರ ಕಂಡ ನನಗೆ ಶಿಕ್ಷಣ ಇಲಾಖೆಯ ಸಾವಿರಾರು ಘನ ಯೋಜನೆಗಳಲ್ಲಿ ಇದು ಯಾವುದೋ ಹೊಸ ಯೋಜನೆ ಇರಬಹುದು. `ಓದುವ ಹಬ್ಬ~ ಅಥವಾ ಇನ್ನೇನಾದರೂ ಬೇರೆ ಆಕರ್ಷಕ ಹೆಸರು ಇದಕ್ಕೆ ಇರಬೇಕು ಎಂದು ಊಹಿಸುವ ತೊಂದರೆ ತೆಗೆದುಕೊಳ್ಳಬೇಕಾದೀತು. ಆದರೆ ಇದು `ಓದುವ ಹಬ್ಬ~ವಲ್ಲ ಪರೀಕ್ಷೆಗಳ ಹಬ್ಬ!ಸರ್ಕಾರ ಈಗ ಅಧಿಸೂಚನೆ ಹೊರಡಿಸಿರುವ ವಿವಿಧ ನೇಮಕಾತಿಗಳ ಪ್ರವೇಶ ಪರೀಕ್ಷೆಗಳಿಗೆ ಹಾಗೂ ಇತರ ಉನ್ನತ ವ್ಯಾಸಂಗದ ಪರೀಕ್ಷೆಗಳಿಗೆ ಶಿಕ್ಷಕರು ಶಾಲಾ ಸಮಯದಲ್ಲಿ ಕಷ್ಟಪಟ್ಟು ಓದುತ್ತಿರುವ ಪರಿಯಿದು!ಈಗ ಶಿಕ್ಷಕ ವೃತ್ತಿ ಮೊದಲಿನಂತೆ ಪಾವಿತ್ರ್ಯತೆಯ ಹುದ್ದೆ ಎಂಬ ಭಾವನೆ ಖುದ್ದು ಶಿಕ್ಷಕರಲ್ಲಿಯೇ ಕಣ್ಮರೆಯಾಗುತ್ತಿದೆ. ಇತರೆ ಗುಮಾಸ್ತಗಿರಿಯ ಕೆಲಸಕ್ಕೂ ಶಿಕ್ಷಕನ ಕೆಲಸಕ್ಕೂ ಅಂತಹ ಯಾವ ದೊಡ್ಡ ವ್ಯತ್ಯಾಸವೂ ಉಳಿದಿಲ್ಲ. ಹೊಟ್ಟೆಪಾಡಿಗೆ ಇರುವ ಯಾವುದೇ ಹೆಚ್ಚಿನ ರಿಸ್ಕ್ ಇಲ್ಲದ ಮೇಲ್ ಸಂಪಾದನೆ ಇಲ್ಲದ ಒಂದು ನಿರುಪದ್ರವಿ ಕೆಲಸ ಈ ಶಿಕ್ಷಕ ಕೆಲಸ.ಹಾಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಬಂದವರು ಈ ಹುದ್ದೆಯನ್ನು ಒಂದು ನಿಲ್ದಾಣವೆಂದು ಭಾವಿಸುತ್ತಾರೆಯೇ ಹೊರತು ತಮ್ಮ ಗಮ್ಯವೆಂದು ತಿಳಿಯುವುದಿಲ್ಲ. ಮುಂದಿನ ನಿಲ್ದಾಣಗಳೆಡೆಗೆ ತಲುಪಲು ಮಾಡಬೇಕಾದ ತಯಾರಿಗಳಲ್ಲಿ ಇವರ ಗಮನ ಉಳಿಯುತ್ತದೆ. ಇಂದು ಪ್ರೈಮರಿ ಟೀಚರ್...ನಾಳೆ ಹೈಸ್ಕೂಲ್ ಟೀಚರ್... ನಾಳಿದ್ದು ಪಿಯು ಲೆಕ್ಚರರ್... ಹೀಗೆ ಸಾಧಿಸಬೇಕಾದ ಗುರಿಗಳ ಪಟ್ಟಿ ಶಿಕ್ಷಕರ ಮನಸ್ಸಿನಲ್ಲಿ ನೆಲೆಗೊಳ್ಳುತ್ತದೆ. ಸಿಇಟಿ ಪರೀಕ್ಷೆಯಲ್ಲಿ ಪಾಸಾಗಿ ಆಯ್ಕೆಯಾದ ಇವರು ದಡ್ಡರಲ್ಲ! ಆದರೆ ಇವರ ಇಡೀ ಪ್ರತಿಭೆ, ವಿಷಯ ಸಂಪತ್ತು, ಜ್ಞಾನ ಎಲ್ಲವೂ ಬಹಳ ಸುರಕ್ಷಿತವಾಗಿ ತಮ್ಮ ಮುಂದಿನ ನಿಲ್ದಾಣಗಳಿಗೆ ತಲುಪಲು ಬೇಕಾದ ಟಿಕೆಟ್‌ಗಳಾಗುತ್ತದೆ. ಪರಿಣಾಮ... ಮಕ್ಕಳ ಕಲಿಕೆಯಲ್ಲಿ ನಿರಾಶಾದಾಯಕ ಪ್ರಗತಿ... ಹಾಜರಾತಿ ಹಾಗೂ ದಾಖಲಾತಿ ಪ್ರಮಾಣದಲ್ಲಿ ಇಳಿಕೆ... ಕ್ರಮೇಣವಾಗಿ ಶಿಕ್ಷಣದ ಉದ್ದೇಶಗಳೇ ಉಲ್ಟಾಪಲ್ಟಾ!ತೋಟಗಾರಿಕೆ ಇಲಾಖೆಯವರು ಗಿಡಗಳ ಅಭಿವೃದ್ಧಿಗೆ ಏನೇ ಯೋಜನೆಗಳನ್ನು ಹಮ್ಮಿಕೊಂಡರೂ... ಮಾಲಿಯ ಆರೈಕೆಯಿಲ್ಲದೇ ಯಾವ ಗಿಡವೂ ಹೂ ಬಿಡುವುದಿಲ್ಲ. ಮಾಲಿಯ ಕೆಲಸದಂತೆಯೇ ಇರುವ ಶಿಕ್ಷಕ ಏಕೆ ಈ ರೀತಿ ತನ್ನ ಕರ್ತವ್ಯದ ಮೇಲೆ ಮುನಿಸಿಕೊಂಡು ಅನ್ಯಮನಸ್ಕನಾಗಿದ್ದಾನೆ. ದೋಷ ಶಿಕ್ಷಕನದೇ.

 

ಆದರೆ ಶಿಕ್ಷಕನೊಬ್ಬನದೇ...? ಇಲಾಖೆಯು ಯಾವ ರೀತಿ ಜಡ್ಡುಗಟ್ಟಿದೆ ಎಂದರೆ ಇಂತಹ ಅನ್ಯಮನಸ್ಕ ಶಿಕ್ಷಕರನ್ನು ತಮ್ಮ ಕರ್ತವ್ಯದೆಡೆಗೆ ಮರಳುವಂತೆ ಪ್ರೇರೇಪಿಸುವ, ಸೂಕ್ಷ್ಮವಾಗಿ ದಂಡಿಸುವ ಯಾವ ಅಧಿಕಾರಿಗಳೂ ಇಲಾಖೆಯಲ್ಲಿ ಕಾಣುತ್ತಿಲ್ಲ. ಇಂದು ಶಿಕ್ಷಣದ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಕೋಟಿ ಕೋಟಿಗಳ ಅನುದಾನಗಳೆಡೆಗೆ ಇವರ ಅವಧಾನ ಕೇಂದ್ರೀಕರಣಗೊಂಡಂತಿದೆ.ಈ ಅನುದಾನಗಳ ಪ್ರವಾಹದಲ್ಲಿ ತಾವು ಮಾಡಿಕೊಳ್ಳಬೇಕಾದ ಲಾಭಗಳ ಕಡೆಯೇ ಇವರ ಗಮನ ಇದ್ದಂತಿದೆ. ಈ ಪ್ರವಾಹವನ್ನು ಜೀವಂತವಾಗಿಡಲು ಅನಗತ್ಯ ವಿಶೇಷ ಹುದ್ದೆಗಳ, ವಿಶೇಷ ಯೋಜನೆಗಳ, ವಿಶೇಷ ತರಬೇತಿಗಳ ಸೃಷ್ಟಿ! ಇವುಗಳಲ್ಲೆವುಗಳ ಭರಾಟೆಯಲ್ಲಿ ಶಿಕ್ಷಕನ ಮೇಲೆ ಉಂಟಾಗುತ್ತಿರುವ ಅನಾರೋಗ್ಯಕರ ಒತ್ತಡ. ಅಂತಿಮವಾಗಿ ಈ ಅಪಸವ್ಯಗಳಿಗೆ ಸರ್ಕಾರಿ ಶಾಲೆಯ ಮಕ್ಕಳ ಬಲಿ.ಸಂಪನ್ಮೂಲವೇ ಇಲ್ಲದ ಸಂಪನ್ಮೂಲ ವ್ಯಕ್ತಿಗಳು, ಕೇಂದ್ರಗಳು, ಶಿಕ್ಷಣದ ಒಳನೋಟಗಳೇ ಇಲ್ಲದ ಶಿಕ್ಷಣಾಧಿಕಾರಿಗಳು ಈ ಶಿಕ್ಷಣ ವ್ಯವಸ್ಥೆ ಹಾದಿ ತಪ್ಪುವಲ್ಲಿ ಹಾಗೂ ಶಿಕ್ಷಕರು ಭ್ರಮನಿರಸನರಾಗುವಲ್ಲಿ ತಮ್ಮದೇ ಆದ ಸೇವೆಯನ್ನು ಮಾಡುತ್ತಿದ್ದಾರೆ. ಇವೆಲ್ಲವನ್ನು ಕಂಡ ಶಿಕ್ಷಕರು ತಮ್ಮ ಸುರಕ್ಷಿತ ಜಿಗಿತಗಳ ಕಡೆ ಗಮನ ಕೇಂದ್ರೀಕರಿಸುತ್ತಿದ್ದಾರೆ. ತಮ್ಮ ಮೂಲಭೂತ ಜವಾಬ್ದಾರಿಯ ಕಡೆ ಜಾಣ ಕುರುಡರಾಗುತ್ತಿದ್ದಾರೆ.ಇನ್ನೊಂದೆಡೆ ಸಮಾಜದ ಬುದ್ಧಿವಂತ ವರ್ಗ ಈ ಮೂಲಭೂತ ಸಮಸ್ಯೆಯನ್ನು ನಿರ್ಲಕ್ಷಿಸಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಶಿಕ್ಷಣ ಹಕ್ಕು, ಮಕ್ಕಳ ಹಕ್ಕು, ಶಾಲೆಗಳ ವಿಲೀನ... ಇತ್ಯಾದಿ ಸದ್ದು ಮಾಡುವ ವಿವಾದಗಳಲ್ಲಿ ಮುಳುಗಿದೆ. ಇನ್ನೊಂದೆಡೆ ಶಿಕ್ಷಕರ ಬಹುಸಂಖ್ಯೆಯ ಓಟುಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಶಕ್ತಿಗಳು ಬೇರೆ ಕಾರ್ಯತಂತ್ರಗಳಲ್ಲಿ ನಿರತವಾಗಿವೆ.ಇನ್ನು ಶಿಕ್ಷಕರ ಸಂಘಗಳಂತೂ ಸಂಬಳ - ಭತ್ಯೆ - ರಜೆ ಇವು ಬಿಟ್ಟರೆ ಇವರಿಗೆ ಇನ್ನಾವ ಅರ್ಥಪೂರ್ಣ ಆದ್ಯತೆಗಳಾಗಲಿ ಸಾಮಾಜಿಕ ಜವಾಬ್ದಾರಿಗಳಾಗಲಿ ಇದ್ದಂತೆ ಕಾಣುವುದಿಲ್ಲ. ಒಟ್ಟಾರೆ ಇದೆಲ್ಲದರ ಲಾಭ ಖಾಸಗಿ ಶಿಕ್ಷಣ ಸಂಸ್ಥೆಗಳ ಖಜಾನೆಗಳನ್ನು ಬಲಪಡಿಸುತ್ತಿವೆ.

 

ಶೈಕ್ಷಣಿಕ ಮೌಲ್ಯಗಳ ಅ ಆ ಇ ಈ ಬೇಕಿಲ್ಲದ ಬರೀ ಬಿಜಿನೆಸ್ ಸ್ಟ್ರಾಟೆಜಿಗಳನ್ನು ಮಾತ್ರ ಇಟ್ಟುಕೊಂಡ ಈ ಸಂಸ್ಥೆಗಳು ಸುಲಭವಾಗಿ ಹಾಗೂ ಶೀಘ್ರವಾಗಿ ಬೊಜ್ಜು ಬೆಳೆಸಿಕೊಳ್ಳುತ್ತಿವೆ. ಈ ಫ್ಯಾಕ್ಟರಿಗಳಿಂದ ಮೌಲ್ಯಹೀನ, ಅಭಿರುಚಿ ಹೀನ, ಸಂವೇದನಾಹೀನ ಸಾಫ್ಟ್‌ವೇರ್ ಸಂತತಿಗಳು ಹಿಕ್ಕೆಯಂತೆ ಹೊರಬೀಳುತ್ತಿವೆ. ಇದು ನಮ್ಮ ಶಿಕ್ಷಣ ವ್ಯವಸ್ಥೆ!ದೇಶದ ಬಹುಪಾಲು ಮಕ್ಕಳು, ಸಾಮಾಜಿಕವಾಗಿ ಆರ್ಥಿಕವಾಗಿ ಬಲಹೀನರಾದವರ ಮಕ್ಕಳು ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಸರ್ಕಾರಿ ಶಾಲೆಗಳ ಲಕ್ಷಾಂತರ ಶಿಕ್ಷಕರು ಒಮ್ಮೆ ಮೈ ಕೊಡವಿ ಎದ್ದರೆ ಸಾಕು. ಇನ್ನು ಹತ್ತು ವರ್ಷಗಳಲ್ಲಿ ನಮ್ಮ ದೇಶ ಹೇಗಾಗಬಹುದು? ದೇಶವೆಂದರೆ ಜನತೆ ಅಥವಾ ಮಾನವ ಸಂಪನ್ಮೂಲ. ಅಂತಹ ಮಾನವ ಸಂಪನ್ಮೂಲವನ್ನು ಯುಕ್ತ ರೀತಿಯಲ್ಲಿ ರೂಪಿಸುವುದೇ ಶಿಕ್ಷಣ. ಈ ಕೆಲಸ ಎಚ್ಚರಗೊಂಡ ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕ ಎಚ್ಚರಗೊಳ್ಳದೇ ಸರ್ಕಾರ ವ್ಯಯಿಸುವ ಕೋಟಿ ಕೋಟಿ ಸಂಪತ್ತು ಗಟಾರ ಸೇರುತ್ತದೆ ಅಷ್ಟೇ.ಆದ್ದರಿಂದ ನಮ್ಮ ಶಿಕ್ಷಣ ಸುಧಾರಣೆಗಳು ತೀವ್ರಗೊಳ್ಳಬೇಕಿದೆ. ಇವುಗಳ ಮೊದಲ ಹೆಜ್ಜೆಯಾಗಿ ಶಿಕ್ಷಕರ ಮನೋಭಾವಗಳಲ್ಲಿ ಬದಲಾವಣೆ ತರಬೇಕಿದೆ. ಮುನಿದಿರುವ ಶಿಕ್ಷಕನನ್ನು ಹೇಗೆ ಮತ್ತೆ ಕೆಲಸಕ್ಕೆ ಹಚ್ಚುವುದು ಎಂಬುದನ್ನು ನಾವು ತೀವ್ರವಾಗಿ ಚಿಂತಿಸಬೇಕಿದೆ. ಶಿಕ್ಷಕ ಹುದ್ದೆಗೆ ಒಂದು ಆಕರ್ಷಣೆ ಮೂಡಿಸಬೇಕಿದೆ. ಹಾಗೆಯೇ ಅದಕ್ಕೊಂದು ಅಕೌಂಟಬಲಿಟಿಯನ್ನು ಕೂಡ ನೆಲೆಗೊಳಿಸಬೇಕಿದೆ.

 

ಉತ್ತಮರನ್ನು ಒಳ್ಳೆಯ ರೀತಿಯಲ್ಲಿ ಪ್ರೋತ್ಸಾಹಿಸುವ ಸೋಮಾರಿಗಳನ್ನು ದಂಡಿಸಬಲ್ಲ ದಕ್ಷ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಬೇಕಿದೆ. ಸರ್ಕಾರಿ ಶಾಲೆಗೆ ಕಳುಹಿಸುತ್ತಿರುವ ಸಮಾಜದ ಕಟ್ಟ ಕಡೆಯ ಪೋಷಕ ವರ್ಗವೂ ಎಚ್ಚೆತ್ತು ವ್ಯವಸ್ಥಿತ ಹಾಗೂ ಜವಾಬ್ದಾರಿಯುತ ಶಾಲಾ ನಿರ್ವಹಣೆ ತಮ್ಮ ಹಕ್ಕು ಎಂಬುದನ್ನು ಅರಿಯಬೇಕಿದೆ. ಹಾಗಾದಾಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಒಂದಷ್ಟು ಜೀವರಸ ಉಕ್ಕಲು ಸಾಧ್ಯ! ಇಲ್ಲದಿದ್ದರೆ ಆತ್ಮವಂಚನೆಯ ಈ ಕ್ರಿಯೆಗಳಿಗೆ ಮಿತಿಯೇ ಇಲ್ಲದಂತಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.