ಮಂಗಳವಾರ, ಮೇ 11, 2021
24 °C

ಮಾಲೀಕನನ್ನು ಬೆದರಿಸಿ ರೂ 12 ಲಕ್ಷ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು ಮಳಿಗೆಯ ಮಾಲೀಕನ ಮೇಲೆ ಹಲ್ಲೆ ನಡೆಸಿ 12 ಲಕ್ಷ ರೂಪಾಯಿ ಹಣ ದರೋಡೆ ಮಾಡಿರುವ ಘಟನೆ ನಗರ್ತಪೇಟೆ ಸಮೀಪದ ಮಕ್ಕಳಪ್ಪ ಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.ಮಕ್ಕಳಪ್ಪ ಲೇಔಟ್‌ನಲ್ಲಿರುವ `ಚಂದ್ರಸೇನ ಸಿಲ್ವರ್ ರಿಫೈನರ್~ ಮಳಿಗೆಯ ಮಾಲೀಕ ಪ್ರಕಾಶ್ ಗಾಡಗಿ ಅವರು ಈ ಸಂಬಂಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಿಲಾರಿ ರಸ್ತೆ ನಿವಾಸಿಯಾದ ಪ್ರಕಾಶ್, ಚಿನ್ನಾಭರಣ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ಆಭರಣಗಳನ್ನು ಪಡೆದುಕೊಂಡು ಅವುಗಳನ್ನು ಕರಗಿಸಿ ಚಿನ್ನದ ಗಟ್ಟಿ ಮಾಡಿಕೊಡುವ ವಹಿವಾಟು ಮಾಡುತ್ತಾರೆ.ಅವರು ಬಾಬಾ ಮಾರುಕಟ್ಟೆಯ ಚಿನ್ನಾಭರಣ ಮಳಿಗೆಯೊಂದರಿಂದ ಏಳು ಲಕ್ಷ ರೂಪಾಯಿ ಹಣ ಪಡೆದುಕೊಂಡು ರಾತ್ರಿ 8.30ರ ಸುಮಾರಿಗೆ ಅಂಗಡಿಗೆ ಬಂದರು. ಆ ಹಣ ಮತ್ತು ದಿನದ ವಹಿವಾಟಿನ ಐದು ಲಕ್ಷ ರೂಪಾಯಿ ಹಣವನ್ನು ಅವರು ಎಣಿಕೆ ಮಾಡುತ್ತಾ ಅಂಗಡಿಯಲ್ಲಿ ಕುಳಿತಿದ್ದರು.ಅದೇ ವೇಳೆಗೆ ಏಕಾಏಕಿ ಅಂಗಡಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು, ಅವರ ಕಣ್ಣಿಗೆ ದ್ರಾವಣವೊಂದನ್ನು ಸಿಂಪಡಿಸಿ ಮತ್ತು ಎಡಗೈಗೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಈ ಘಟನೆ ನಡೆದ ಸಂದರ್ಭದಲ್ಲಿ ಅಂಗಡಿಯ ನೌಕರರೆಲ್ಲ ಮನೆಗೆ ಹೋಗಿದ್ದರು. ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಸಿಕ್ಕಿಲ್ಲ ಎಂದು ಪ್ರಕಾಶ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.`ಪ್ರಕಾಶ್ ಅವರ ಅಂಗಡಿಯಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಇದರಿಂದಾಗಿ ದುಷ್ಕರ್ಮಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣದ ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ~ ಎಂದು ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ `ಪ್ರಜಾವಾಣಿ~ಗೆ ತಿಳಿಸಿದರು. ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಸಿಲಿಂಡರ್ ಸ್ಫೋಟ: ಗಾಯಾಳು ಮಗು ಸಾವು 

ರಾಜಗೋಪಾಲ ನಗರ ಸಮೀಪದ ಹೆಗ್ಗನಹಳ್ಳಿಯ ಮನೆಯೊಂದರಲ್ಲಿ ಏ.20 ರಂದು ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಮೂರು ವರ್ಷದ ಮಗು ಯಶಸ್ವಿನಿ ಸೋಮವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಘಟನೆ ನಡೆದ ಮರುದಿನವೇ ಒಂದು ವರ್ಷದ ಮಗು ನಿಖಿಲ್ ಸಾವನ್ನಪ್ಪಿತ್ತು. ಮೃತ ಮಕ್ಕಳ ತಂದೆ ಗಂಗಾಧರ್, ತಾಯಿ ಉಷಾ ಹಾಗೂ ಸಂಬಂಧಿಕರಾದ ಗಿರೀಶ್ ಮತ್ತು ಲಿಂಗಪ್ಪ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಉಷಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಿಖಿಲ್‌ನ ಒಂದು ವರ್ಷದ ಹುಟ್ಟು ಹಬ್ಬದ ಆಚರಣೆಯ ವೇಳೆ ಈ ದುರಂತ ಸಂಭವಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.