ಶುಕ್ರವಾರ, ಜೂನ್ 25, 2021
29 °C
ಜೆಡಿಎಸ್‌ ಅಭ್ಯರ್ಥಿ ಊರೊಳಗೆ ಒಂದು ಸುತ್ತು

ಮಾಲೂರಿನ ಮಂಗಾಪುರ: ಹೀಗಿದೆ ಗ್ರಾಮದ ಚಹರೆ

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ‘ಇವರು ಇಲ್ಲಿಯವರೇ. ಮಂಗಾಪುರದ ಕೇಶವ ಈ ಜಿಲ್ಲೆಯವರೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಹೇಳುವವರೆಗೆ ಕೋಲಾರದ ಜಿಲ್ಲಾ ನಕ್ಷೆಯಲ್ಲಿದ್ದ ಈ ಊರಿನ ಬಗ್ಗೆ ಎಷ್ಟು ಮಂದಿಗೆ ಕುತೂಹಲವಿತ್ತೋ ತಿಳಿಯದು. ಆದರೆ ಜೆಡಿಎಸ್ ಅಭ್ಯರ್ಥಿ ಮಾಲೂರು ತಾಲ್ಲೂಕು ಮಂಗಾಪುರದವರು ಎಂದು ತಿಳಿದ ತಕ್ಷಣ ಕುತೂಲಕ್ಕೆ ಕೈ, ಕಾಲು, ಕಣ್ಣು ಮೂಡಿತು.ಕುತೂಹಲದ ಬೆನ್ನಟ್ಟಿ ಹೊರಟ ‘ಪ್ರಜಾವಾಣಿ’ ಮಂಗಾಪುರದ ಭೌಗೋಳಿಕ, ಸಾಮಾಜಿಕ ಚಿತ್ರವನ್ನು ತೆರೆದಿಡುವ ಪ್ರಯತ್ನ ಮಾಡಿದೆ.ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಮಂಗಾಪುರ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದ್ದುಕಾಣುತ್ತದೆ.ತಾಲ್ಲೂಕಿನ ಸಂತೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಾಪುರ ಗ್ರಾಮ ಪಟ್ಟಣದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ. 560 ಮತದಾರರನ್ನು ಹೊಂದಿ­ರುವ ಗ್ರಾಮದಲ್ಲಿ 130 ಕುಟುಂಬಗಳಿದ್ದು, ಬಹುತೇಕ ಭೋವಿ ಜನಾಂಗದವರೇ ವಾಸವಾಗಿದ್ದಾರೆ.ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಗ್ರಾಮದಲ್ಲಿ ಬೇಸಿಗೆಯ ಬೇಗೆ ಪ್ರಾರಂಭವಾಗುತ್ತಿದ್ದಂತೆಯೇ ಕುಡಿಯುವ ನೀರಿನ ಸಮಸ್ಯೆ ಭುಗಿಲೇರಿದ್ದು, ಇಲ್ಲಿನ ಗ್ರಾಮಸ್ಥರು ನೀರಿಗಾಗಿ ಕೃಷಿ ಭೂಮಿಗಳಲ್ಲಿ ಅಳವಡಿಸಿರುವ ಕೊಳವೆ ಬಾವಿಗಳ ಬಳಿ ತೆರಳಿ ಮಾಲೀಕರನ್ನು ಗೋಗರೆದು ನೀರು ತರುವ ಪರಿಸ್ಥಿತಿ ಉಂಟಾಗಿದೆ.ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯ 71 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಅಗತ್ಯವಿರುವ ಕುಡಿಯುವ ನೀರಿಗಾಗಿ ಪಕ್ಕದ ಇಟ್ಟಿಗೆ ಕಾರ್ಖಾನೆಯನ್ನು ಅವಲಂಬಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿಯರು.ಇಲ್ಲಿನ ಅಂಗನವಾಡಿ ಶಾಲೆಯಲ್ಲಿ 33 ಮಕ್ಕಳಿದ್ದು, ನೀರಿನ ಕೊರತೆಯಿಂದ ಸೋಮ­ವಾರ ಮಕ್ಕಳಿಗಾಗಿ ಆಹಾರ ತಯಾರು ಮಾಡದೆ ಸಿಬ್ಬಂದಿ ಮನೆಗಳಿಗೆ ಕಳುಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಗ್ರಾಮದ ಒಂದೆರಡು ರಸ್ತೆಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಸ್ತೆಗಳು ಇಲ್ಲಿಯ ತನಕ ಸಿಮೆಂಟ್ ಅಥವಾ ಡಾಂಬರಿನ ವಾಸನೆಯನ್ನು ಕಾಣದ  ರಸ್ತೆಗಳು ಕಲ್ಲುಗಳು ಹಾಗೂ ಹಳ್ಳ–ಕೊಳ್ಳಗಳಿಂದ ಕೂಡಿವೆ. ಪಾದಚಾರಿಗಳ ಅಥವಾ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಇನ್ನು ಚರಂಡಿಗಳ ಸ್ವಚ್ಛತೆ ಹೇಳತೀರದಾಗಿದೆ.ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಹಳೇ ಕೊಳವೆ ಬಾವಿಯಲ್ಲಿ ನೀರಿದ್ದು, ಪಂಪು– ಮೋಟಾರು ಅಳವಡಿಸಲಾಗುತ್ತಿದೆ. ಈಗಾಗಲೇ ಒಂದು ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಮದಲ್ಲಿನ ಸೇದು ಬಾವಿಯಲ್ಲಿ ಹೂಳು ತೆಗೆದಿರುವುದರಿಂದ  ನೀರು ಶೇಖರಣೆಯಾಗಿದೆ.ಪಂಚಾಯತಿ ಮತ್ತು ಶಾಸಕರ ಅನುದಾನದಡಿಯಲ್ಲಿ ಕೊಳವೆ ಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ವೆಂಕಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.