ಸೋಮವಾರ, ಮೇ 23, 2022
21 °C

ಮಾಲ್‌ಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ನಿಷೇಧಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮಾಲ್‌ಗಳಲ್ಲಿ ಶೀಘ್ರದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆಯನ್ನು ನಿಷೇಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚಿಂತನೆ ನಡೆಸಿದೆ.

ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರು ಈ ಹೇಳಿಕೆ ನೀಡಿದ್ದು, `ಪ್ಲಾಸ್ಟಿಕ್ ಬ್ಯಾಗ್‌ಗಳಿಂದ ಹೆಚ್ಚು ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ಸಂಪೂರ್ಣ ನಿಷೇಧಿಸಲಾಗುವುದು~ ಎಂದರು.

`ಮೈಕ್ರಾನ್ ಆಧಾರದಲ್ಲಿ ನಾವು ಪ್ಲಾಸ್ಟಿಕ್ ಅಳತೆ ಮಾಡುವುದಿಲ್ಲ. ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು. ನಗರದ ಕೆಲವು ಶಾಪಿಂಗ್ ಮಾಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಅವರದ್ದೇ ಆದ ಬ್ಯಾಗ್‌ಗಳ ಬಳಕೆ ಜಾರಿಗೆ ಬಂದಿದೆ. ಪ್ಲಾಸ್ಟಿಕ್ ಬ್ಯಾಗ್ ಸ್ಥಾನದಲ್ಲಿ ಸೆಣಬು ಅಥವಾ ಬಟ್ಟೆಯ ಬ್ಯಾಗ್‌ಗಳ ಬಳಕೆ ಜಾಸ್ತಿ ಆಗಬೇಕು. ನಿಷೇಧದ ಸಂಬಂಧ ಶೀಘ್ರದಲ್ಲಿ ಮಾಲ್‌ಗಳ ಮಾಲೀಕರ ಜತೆ ಸಭೆ ನಡೆಸಲಾಗುವುದು~ ಎಂದರು.

`ನಿಷೇಧಕ್ಕೆ ಮುಂದಾಗಿರುವುದು ಉತ್ತಮ ನಿರ್ಧಾರ. ಆದರೆ ನಾವು ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಬಿಬಿಎಂಪಿ ನಿಷೇಧಿಸಿದರೆ ಸಂಪೂರ್ಣ ಬೆಂಬಲ ನೀಡಲಾಗುವುದು~ ಎಂದು ಪ್ರೆಸ್ಟಿಜ್ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ರಘುನಂದನ್ ತಿಳಿಸಿದರು.

ರಾಯಲ್ ಮೀನಾಕ್ಷಿ ಮಾಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ರಾವ್, `ಸ್ಥಳೀಯಾಡಳಿತ ಸಂಸ್ಥೆಯೊಂದು ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಪ್ಲಾಸ್ಟಿಕ್ ಜಾಗದಲ್ಲಿ ಸೆಣಬು ಅಥವಾ ಕಾಗದವನ್ನು ಬಳಸಬಹುದು. ಇದರಿಂದ ಪ್ರಕೃತಿ ಸಂರಕ್ಷಣೆ ಸಾಧ್ಯವಾಗುತ್ತದೆ. ಆದರೆ ಇಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದುದು. ಗ್ರಾಹಕರು ಬಳಕೆ ಕಡಿಮೆ ಮಾಡಿದರೆ ನಿಯಂತ್ರಣ ಸಾಧ್ಯ~ ಎಂದು ಅಭಿಪ್ರಾಯಪಟ್ಟರು.

`ಆರಂಭಿಕ ಹಂತದಲ್ಲಿ ಮಾಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರ ಕಡೆಗಳಿಗೂ ನಿಷೇಧ ವಿಸ್ತರಿಸಲಾಗುವುದು. ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು~ ಎಂದು ಶಂಕರಲಿಂಗೇಗೌಡ ತಿಳಿಸಿದರು.

`ನಗರದ ಕೆಲವು ಪ್ರಸಿದ್ಧ ಮಳಿಗೆಗಳಲ್ಲಿ ಪ್ರತಿ ಪ್ಲಾಸ್ಟಿಕ್ ಬ್ಯಾಗ್‌ಗೆ 3ರಿಂದ 5 ರೂಪಾಯಿ ಬೆಲೆ ನಿಗದಿಪಡಿಸುವ ಮೂಲಕ ಗ್ರಾಹಕರ ಪ್ರವೃತ್ತಿಗೆ ಕಡಿವಾಣ ಹಾಕಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಗ್ರಾಹಕರು ಮಳಿಗೆಗೆ ಬರುವಾಗ ಚೀಲ ತರಲು ಆರಂಭಿಸಿದರು. ನಿಷೇಧದಿಂದ ಪರಿಸ್ಥಿತಿಯಲ್ಲಿ ಬದಲಾವಣೆ ಆಗಬಹುದು. ಇದರಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದುದು~ ಎಂದು ಅವರು ಅಭಿಪ್ರಾಯಪಟ್ಟರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.