ಶುಕ್ರವಾರ, ಮೇ 27, 2022
21 °C

ಮಾವಿನ ಮುಡಿಗೆ ಹೂವಿನ ಸಿಂಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಪ್ಪನ್‌ಪೇಟೆ: ಮಲೆನಾಡ ಭಾಗವಾದ ಈ ಪ್ರದೇಶವು ಹೇಳಿ ಕೇಳಿ ಹೊಳೆ ಸಾಲಿನ ಅಪ್ಪೆ ಮಿಡಿ ಹಾಗೂ ಜೀರಿಗೆ ಮಾವಿನ ಮಿಡಿ ಉಪ್ಪಿನಕಾಯಿಗೆಹೆಸರುವಾಸಿ. ಪ್ರತಿ ಎರಡು ವರ್ಷಕ್ಕೊಮ್ಮೆ ಹೂವು ಬಿಟ್ಟು ಮಿಡಿಯಾಗುವ ಅಪ್ಪೆ ಮಾವಿನ ಮರಗಳು ಈ ಬಾರೀ ನಿರೀಕ್ಷೆಗೂ ಮೀರಿ ಹೂವು ಬಿಟ್ಟಿವೆ. ಕಳೆದ ಹತ್ತು ವರ್ಷದಿಂದ ಈಚೆಗೆ ಹವಾಮಾನ ವೈಪರೀತ್ಯದಿಂದ ಮಿಡಿ ಮಾವು ಫಸಲು ಕಡಿಮೆಯಾಗಿತ್ತು.ಆದರೆ, ಈ ಬಾರಿ ಹೂವು ಬಿಟ್ಟ ಪ್ರಮಾಣ ಹೆಚ್ಚು. ಚಳಿ, ಇಬ್ಬನಿ, ವಿಪರೀತ ಬಿಸಿಲಿಗೆ ಹೂವು ಕರಟಿ ಹೋಗುವ ಸಾದ್ಯತೆ ಇದ್ದರೂ, ತಡವಾಗಿ ಹೂವು ಬಿಟ್ಟ ಕಾರಣ ಇಳುವರಿಗೆ ಧಕ್ಕೆ ಇಲ್ಲ ಎನ್ನುವುದು ಕೃಷಿ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.ಅರಸಾಳು ಕುಮದ್ವತಿ ನದಿ ತಟದಲ್ಲಿ ಹಾಗೂ ಗವಟೂರು ಶರಾವತಿ ನದಿತಟದ ಹೊಳೆ ಸಾಲಿನ ಮಿಡಿಗಳು ದೇಶ-ವಿದೇಶದಲ್ಲಿ ಪ್ರಖ್ಯಾತಿ ಪಡೆದಿದೆ.ಒಟ್ಟಾರೆ ಈ ವರ್ಷ ನಿರೀಕ್ಷೆಗೂ ಮೀರಿ ಅಪ್ಪೆ ಮಿಡಿ ಇಳುವರಿ ಪಡೆಯಬಹುದು ಎನ್ನಲಾಗಿದೆ. ಈ ಮಾವಿನ ಹೂವು ಸಿಂಗಾರ ಈಗಾಗಲೇ ಜೀರಿಗೆ ಮತ್ತು ಅಪ್ಪೆ ಮಿಡಿ ಉಪ್ಪಿನಕಾಯಿ ಪ್ರಿಯರ ಬಾಯಲ್ಲಿ ನೀರೂರಿಸಿದೆ. ಇನ್ನೊಂದೆಡೆ ಬಂಡವಾಳವಿಲ್ಲದೇ ಮಿಡಿಕೊಯ್ಯುವವರು ಹಾಗೂ ಮಧ್ಯವರ್ತಿಗಳಿಗೆ ಕಾಸು ಮಾಡಲು ಆಸೆ ಹುಟ್ಟಿಸಿದೆ.ಪ್ರತಿವರ್ಷ ಗ್ರಾಮಾಂತರ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಮಿಡಿ ಮಾವು ಕೊಯ್ಯುವವರು ರೆಂಬೆ, ಕೊಂಬೆ ಕಡಿತಲೆ ಮಾಡುವುದರಿಂದ ಮಿಡಿ ಮಾವು ಬಿಕರಿ ಪ್ರಕ್ರಿಯೆಯಲ್ಲಿ ಈ ಮರಗಳು ಅವಸಾನದ ಅಂಚಿಗೆ ಸಾಗಿವೆ. ವೈವಿಧ್ಯತೆ ಮಾವಿನ ಮಿಡಿ ಬಿಡುವ ಎಷ್ಟೋ ಮರಗಳು ಇಂದು ಕಣ್ಮರೆಯಾಗಿವೆ.ಬಹುತೇಕ ರಸ್ತೆ ಇಕ್ಕೆಲಗಳ ಮಾವಿನ ಮರಗಳು ಹಾಗೂ ಹೊಳೆಸಾಲು ಮಾವಿನ ಮರಗಳು ಹೆಸರುವಾಸಿ ಅಪ್ಪೆ ಮಾವಿನ ಮಿಡಿ ತಳಿಗಳಾಗಿರುವುದು ಇಲ್ಲಿನ ವಿಶೇಷ. ಇವುಗಳೆಲ್ಲ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳ ಪಡುವುದರಿಂದ ಮಿಡಿಗಾಗಿ ಮರಕಡಿತಲೆ ಮಾಡುವವರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಈ ಮರಗಳು ಚಿರಕಾಲ ಉಳಿಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಜನರು ಬಾಯಿ ಚಪಲಕ್ಕಾಗಿ ಮುಂದಿನ ಪೀಳಿಗೆಗೆ ಇವು ದಕ್ಕದೇ ಮಾನವನ ದುರಾಸೆಗೆ ಮರಗಳು ಅಳಿವಿನಂಚಿಗೆ ಸರಿದಾವು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.