ಶುಕ್ರವಾರ, ಮೇ 14, 2021
31 °C

ಮಾಹಿತಿಯೊಡನೆ ಸಜ್ಜಾಗಿರಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಬರ ಪರಿಹಾರ ಕಾಮಗಾರಿಗಳನ್ನು ಪರಾಮರ್ಶಿಸಲು ಏ.7ರಂದು ಮುಖ್ಯಮಂತ್ರಿ ಹಾಗೂ 9ರಂದು ನಗರಾಭಿವೃದ್ಧಿ ಸಚಿವರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳ ಸಮಗ್ರ ಮಾಹಿತಿ ಯೊಡನೆ ಸಜ್ಜಾಗಿರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಸಚಿವರು ಬರ ಪರಿಹಾರ ಕಾಮಗಾರಿಗಳ ಅನುಷ್ಠಾನದಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಲು ತಿಳಿಸಿದರು.ಏ.7ರಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಜಿಲ್ಲೆಗೆ ಭೇಟಿ ನೀಡುತ್ತಿದ್ದು ಅಂದು ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಸಭೆ ನಡೆಸುವರು. 9ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಅವರು ಜಿಲ್ಲೆಯ ನಂಜನಗೂಡು, ದೊಡ್ಡಕವಲಂದೆ, ಇಲವಾಲ ಮತ್ತು ಜಯಪುರ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ಸಚಿವರು ತಿಳಿಸಿದರು.ಇದಕ್ಕೆ ಪೂರ್ವಭಾವಿಯಾಗಿ ತಾವು ಶುಕ್ರವಾರ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು.ಮೈಸೂರು ಜಿಲ್ಲೆಯ ಕುಡಿಯುವ ನೀರು ಹಾಗೂ ಬರಪರಿಹಾರ ಕಾಮಗಾರಿಗಳಿಗಾಗಿ ಒಟ್ಟಾರೆ 3.5 ಕೋಟಿ ರೂ. ಬಿಡುಗಡೆಯಾಗಿದೆ. ಈಗಾಗಲೇ 81 ಲಕ್ಷ ರೂ. ವೆಚ್ಚದ 593 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕೊಳವೆ ಬಾವಿಗಳ ರೀಡ್ರಿಲ್ಲಿಂಗ್, ಕೊಳವೆ ಬಾವಿ ಸ್ವಚ್ಛಗೊಳಿಸುವುದು, ಕೈಪಂಪ್‌ಗಳ ಶುದ್ಧೀಕರಣ ಮತ್ತಿತರ ಕಾಮಗಾರಿ ಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.ಬರಪರಿಹಾರ ಕಾಮಗಾರಿಗಳಿಗೆ ಲಭ್ಯವಿರುವ 3.5 ಕೋಟಿ ಒಟ್ಟಾರೆ ಅನುದಾನದಲ್ಲಿ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 1 ಕೋಟಿ ರೂ., ಪಶುಸಂಗೋಪನಾ ಇಲಾಖೆಗೆ ಮೇವು ಸಂಗ್ರಹಣೆ ಗಾಗಿ 15 ಲಕ್ಷ ರೂ., ಮೈಸೂರು ತಹಶೀಲ್ದಾರರಿಗೆ ಮೇವು ಸಂಗ್ರಹಣೆಗಾಗಿ 7.38 ಲಕ್ಷ ರೂ. ಹಾಗೂ ಕೆ.ಆರ್.ನಗರದ ಜಿಲ್ಲಾ ಪಂಚಾ ಯತ್ ಕಾರ್ಯ ಪಾಲಕ ಅಭಿಯಂತರರಿಗೆ ಮಳೆಹಾನಿ ರಸ್ತೆ ಕಾಮಗಾರಿಗೆ 1.25 ಲಕ್ಷ ರೂ. ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲಾ ಪಂಚಾಯತ್ ವತಿಯಿಂದ ಏಳು ತಾಲ್ಲೂಕುಗಳಲ್ಲಿ ತುರ್ತು ಕಾಮಗಾರಿ ನಿರ್ವಹಣೆಗೆ ಹಾಗೂ ದುರಸ್ತಿಗೆ 318 ಲಕ್ಷ ರೂ.ಗಳ ಕ್ರಿಯಾಯೋಜನೆ ರೂಪಿಸಿಕೊಳ್ಳಲಾಗಿದೆ. ಕುಡಿಯುವ ನೀರು ನಿರ್ವಹಣೆ ಹಾಗೂ 13ನೇ ಹಣಕಾಸು ಯೋಜನೆಯಡಿ 432 ಲಕ್ಷ ರೂ. ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಅನುದಾನವು ನೇರವಾಗಿ ಗ್ರಾಮ ಪಂಚಾಯ್ತಿಗಳಿಗೆ ಬಿಡುಗಡೆಯಾಗುತ್ತದೆ. ಬರ ಪರಿಹಾರ ನಿಧಿಯಿಂದ ಬಿಡುಗಡೆ ಮಾಡ ಲಾಗಿರುವ ಹಣದಿಂದ ಹಾಗೂ ಮತ್ತಿತರ ಮೂಲ ಗಳಿಂದಲೂ ಪರಿಹಾರ ಕಾಮಗಾರಿಗಳಿಗೆ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಯಿತು.ಮೈಸೂರು ನಗರ ಕುಡಿಯುವ ನೀರು ನಿರ್ವಹಣಾ ಸಮಿತಿ-ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಲು ಸಹಾಯಕ ಆಯುಕ್ತರು ಇಲ್ಲವೇ ಹೆಚ್ಚುವರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸುವಂತೆ ಸಚಿವರು ಸೂಚನೆ ನೀಡಿದರು.ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್, ಜಸ್ಕೋ ಪ್ರತಿನಿಧಿಗಳು ಮತ್ತಿತರ ಅಧಿಕಾರಿಗಳನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲಾಗು ವುದು. ಈ ಸಮಿತಿ ಪ್ರತಿದಿನ ಸಭೆ ನಡೆಸಿ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ದೂರುಗಳನ್ನು ಪರಿಹರಿಸುವುದು ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದರು.ಜಿಲ್ಲೆಯ ವಿವಿಧ ಇಲಾಖಾ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯ ನಿರ್ವಹಿಸಿ ಬರಪರಿಹಾರ ಕಾಮಗಾರಿಗಳನ್ನು ಯಾವುದೇ ಲೋಪಕ್ಕೆ ಅವಕಾಶ ಇಲ್ಲದಂತೆ ನಿರ್ವಹಿಸಲು ಸಚಿವರು ಸೂಚನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.