ಶುಕ್ರವಾರ, ಏಪ್ರಿಲ್ 23, 2021
31 °C

ಮಿಸ್ಟರ್ ಪದ್ಧತಿಯಲ್ಲೂ ದೋಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಸ್ಟರ್ ಪದ್ಧತಿಯ ಬಗ್ಗೆ ಪ್ರಜಾವಾಣಿ ಸಂಪಾದಕೀಯ (ಮಾ. 3) ಓದಿದ ಮೇಲೆ ಕೆಲ ಅಧ್ಯಾಪಕರು ಸೇರಿ ಸಮಾಲೋಚನೆ ನಡೆಸಿ ಪ್ರತಿಕ್ರಿಯೆ ನೀಡುತ್ತಿದ್ದೇವೆ. ಸೆಮಿಸ್ಟರ್ ಪದ್ಧತಿ ಬಂದ ಮೇಲೆ ಗಂಭಿರವಾದ ಅಧ್ಯಯನ ಪರಿಸರ ನಿರ್ಮಾಣವಾಗಿದೆ ಎಂಬ ಅಭಿಪ್ರಾಯವನ್ನು ನಾವು ಅತ್ಯಂತ ಸೌಜನ್ಯದಿಂದ ನಿರಾಕರಿಸುತ್ತೇವೆ. ಹಾಜರಿ ತೆಗೆದುಕೊಂಡಾಗ 100ಕ್ಕೆ 50 ವಿದ್ಯಾರ್ಥಿಗಳು ಹಾಜರಿರುವುದಕ್ಕೆ ನಾವು ದಾಖಲೆ ತೋರಿಸುತ್ತೇವೆ. ಪ್ರತಿ ಸೆಮಿಸ್ಟರ್‌ಗೆ ಎರಡು ಕಿರು ಪರೀಕ್ಷೆ (ಟೆಸ್ಟ್) ಗಳಿರುತ್ತವೆ. ಕಿರು ಪರೀಕ್ಷೆಯ ಆಂತರಿಕ ಅಂಕಗಳನ್ನು ನೀಡುವ ಪದ್ಧತಿ ತೆಗೆಯಬೇಕು. ಯಾಕೆಂದರೆ ಆ ಪದ್ಧತಿ ದುರುಪಯೋಗ ಆಗುತ್ತಿದೆ. ಆಗ ಬಹುಪಾಲು ವಿದ್ಯಾರ್ಥಿಗಳು ಹಾಜರಿರುತ್ತಾರೆ ಇದಕ್ಕೇನೆನ್ನಬೇಕು?ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿದ್ದರೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಸೃಷ್ಟಿಸಲು ಸಾಧ್ಯ. ವಿದ್ಯಾರ್ಥಿಗಳನ್ನು ಕೇವಲ ಪಠ್ಯದ ಹುಳಗಳನ್ನಾಗಿ ರೂಪಿಸುವಲ್ಲಿ ಅರ್ಥವಿಲ್ಲ. ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೆಮಿಸ್ಟರ್ ಬಂದ ಮೇಲೆ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿಲ್ಲ. ಕ್ರೀಡೆಯಲ್ಲಿಯೂ ಇದೇ ಕತೆ.ನಾವು ವಾರ್ಷಿಕ ಪದ್ಧತಿಯನ್ನು ನೋಡಿದ್ದೇವೆ, ಸೆಮಿಸ್ಟರ್ ಪದ್ಧತಿಯನ್ನು ನೋಡಿದ್ದೇವೆ. ವೃತ್ತಿಪರ ಶಿಕ್ಷಣದಲ್ಲಿ ಸೆಮಿಸ್ಟರ್ ಪದ್ಧತಿ ಮುಂದುವರಿಸಬಹುದು. ಯಾಕೆಂದರೆ ಅಲ್ಲಿ ಕಡಿಮೆ ವಿದ್ಯಾರ್ಥಿಗಳಿರುತ್ತಾರೆ. ಬಿ.ಎ,, ಬಿ.ಕಾಂ., ಬಿ.ಎಸ್ಸಿ ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಒಂದೊಂದು ಕಾಲೇಜಿನಲ್ಲಿರುತ್ತಾರೆ. ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿದ್ದಾರೆ. ಇವರಿಗೆ ವರ್ಷಕ್ಕೆ ಎರಡು ಸಲ ಪರೀಕ್ಷೆ ನಡೆಸುವುದು, ಎರಡು ಸಲ ಮೌಲ್ಯಮಾಪನ ಮಾಡುವುದು ವಿಶ್ವವಿದ್ಯಾಲಯಗಳಿಗೆ, ಅಧ್ಯಾಪಕರಿಗೆ ಕಷ್ಟದ ಕೆಲಸ. ಈ ಸಲ ಜನವರಿಯಲ್ಲಿ 2ನೇ, 4ನೇ, 6ನೇ ಸೆಮಿಸ್ಟರ್ ಪಾಠಗಳು ಪ್ರಾರಂಭವಾಗಬೇಕಾಗಿತ್ತು. ಮೌಲ್ಯಮಾಪನ, ಚುನಾವಣೆಯಿಂದಾಗಿ ಪಾಠಗಳು ಒಂದು ತಿಂಗಳು ತಡವಾಗಿ ಫೆಬ್ರುವರಿ 1 ರಿಂದ ಪ್ರಾರಂಭವಾಗಿವೆ. ಪ್ರತಿ ಸೆಮಿಸ್ಟರಿಗೆ 4 ತಿಂಗಳು ಪಾಠ ಮಾಡಲು ಅವಕಾಶವೇ ಸಿಗುತ್ತಿಲ್ಲ.ವಾರ್ಷಿಕ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಕನಿಷ್ಠವೆಂದರೂ ಒಂದು ತಿಂಗಳು ಅವಧಿ ಸಿಗುತ್ತಿತ್ತು, ಈಗ ಸಾಧ್ಯವಿಲ್ಲ. ಶಿಕ್ಷಣ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗಂಭೀರ ವಿಷಯ ಎಂಬ ನಿಮ್ಮ ಸಂಪಾದಕೀಯದ ಮಾತನ್ನು ಸ್ವಾಗತಿಸುತ್ತಲೇ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ನಮ್ಮ ಅಭಿಪ್ರಾಯಗಳನ್ನು ಮುಕ್ತ ಚರ್ಚೆಗೆ ಇಡಬೇಕೆಂದು ವಿನಂತಿಸುತ್ತೇವೆ.- ಅಲ್ಲಮಪ್ರಭು ಬೆಟ್ಟದೂರು, ಪ್ರಾಚಾರ್ಯರು ಮತ್ತು 15 ಮಂದಿ ಅಧ್ಯಾಪಕರು,

ಶ್ರೀ ಗವಿ ಸಿದ್ಧೇಶ್ವರ ಪದವಿ ಕಾಲೇಜ್, ಕೊಪ್ಪಳ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.