ಶನಿವಾರ, ಮೇ 15, 2021
24 °C

ಮೀನುಗಾರಿಕೆ ದೋಣಿ ಮುಳುಗಿ 6 ಮಂದಿ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನೇತ್ರಾವತಿ-ಗುರುಪುರ ನದಿಗಳು ಸಂಗಮಗೊಂಡು ಅರಬ್ಬಿ ಸಮುದ್ರ ಸೇರುವ ಬೆಂಗ್ರೆಯ ಅಳಿವೆ ಬಾಗಿಲಿನ ಸಮೀಪ ಗುರುವಾರ ನಸುಕಿನ ಮೂರು ಗಂಟೆ ಸುಮಾರಿಗೆ `ಟ್ರಾಲ್~ ದೋಣಿಯೊಂದು ಮುಳುಗಿ ಅದರಲ್ಲಿದ ಏಳು ಮಂದಿಯ ಪೈಕಿ ಆರು ಜನ ಕಣ್ಮರೆಯಾಗಿದ್ದಾರೆ. ಒಬ್ಬನನ್ನು ಬೆಳಿಗ್ಗೆ 11 ಗಂಟೆ ಸುಮಾರಿಗೆ ರಕ್ಷಿಸಲಾಗಿದೆ.ಎರಡು ದಿನಗಳಿಂದ ಸಮುದ್ರ ಪ್ರಕ್ಷುಬ್ಧವಾಗಿದೆ. ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ದಡಕ್ಕೆ ಬರುತ್ತಿವೆ. ಎಂಟು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ `ಓಷನ್ ಫಿಷರೀಸ್-11~ ಹೆಸರಿನ ಈ ದೋಣಿ ಹೀಗೆ ಮರಳುತ್ತಿದ್ದಾಗ ಅಳಿವೆ ಬಾಗಿಲಿನಲ್ಲಿ ಮರಳಿನ ದಿಣ್ಣೆಗೆ ಡಿಕ್ಕಿ ಹೊಡೆಯಿತು.ಭಾರಿ ಅಲೆಗಳ ಹೊಡೆತಕ್ಕೆ ಮತ್ತೆ ಸಮುದ್ರದತ್ತ ತೇಲಿಹೋದ ದೋಣಿ ಉಳ್ಳಾಲ-ಸೋಮೇಶ್ವರ ಹೊರಭಾಗ ಮುಳುಗಿದ್ದು, ಮೀನಿನ ಡ್ರಂ ಹಿಡಿದು ನೀರಿನಲ್ಲಿ ತೇಲುತ್ತಿದ್ದ ಕೇರಳದ ವಿನ್ಸೆಂಟ್ (50) ಎಂಬುವವರನ್ನು ದೋಣಿಯೊಂದು ರಕ್ಷಿಸಿದೆ.ಇತರರಿಗಾಗಿ ಹಲವು ದೋಣಿಗಳು ಮಧ್ಯಾಹ್ನದವರೆಗೂ ಶೋಧ ನಡೆಸಿದವು. ಆದರೆ ಬಿರುಸಾದ ಗಾಳಿ, ಭಾರಿ ಗಾತ್ರದ ಅಲೆಗಳಿಂದಾಗಿ ಶೋಧ ಕಾರ್ಯಾಚರಣೆಗೆ ತೊಡಕಾಯಿತು. ಹೀಗಾಗಿ ಮಧ್ಯಾಹ್ನ 3ರ ಸುಮಾರಿಗೆ ದೋಣಿಗಳು ಹಳೆ ಬಂದರಿಗೆ ವಾಪಸಾದವು. ಇಷ್ಟು ದೊಡ್ಡ ದುರಂತ ಸಂಭವಿಸಿದ್ದರೂ ಕರಾವಳಿ ರಕ್ಷಣಾ ಪಡೆಯ ಹಡಗು ಅಥವಾ ಹೆಲಿಕಾಪ್ಟರ್ ರಕ್ಷಣೆಗೆ ಧಾವಿಸಿಲ್ಲ.ಮೇಲಾಗಿ ಅಪಾಯದ ಸಂದರ್ಭದಲ್ಲಿ ನವ ಮಂಗಳೂರು ಬಂದರಿನಲ್ಲಿ ಮೀನುಗಾರರಿಗೆ ದಡ ಸೇರುವ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ ಎಂದು ಮೀನುಗಾರರು ದೂರಿದರು. ಮೀನುಗಾರರ ಒತ್ತಾಯಕ್ಕೆ ಮಣಿದ ಎನ್‌ಎಂಪಿಟಿ ಮುಂದಿನ ದಿನಗಳಲ್ಲಿ ಸೂಕ್ತ ದಾಖಲೆ ಒದಗಿಸುವ ದೋಣಿಗಳಿಗೆ ತನ್ನ ವಲಯದೊಳಗೆ ಪ್ರವೇಶಿಸಲು ಸಮ್ಮತಿ ಸೂಚಿಸಿದೆ.ಹೂಳು ತುಂಬಿರುವ ಅಳಿವೆ ಬಾಗಿಲಿನಲ್ಲಿ  ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿದ್ದು, ಕಳೆದ 10 ವರ್ಷಗಳಲ್ಲಿ 20ಕ್ಕೂ ಅಧಿಕ ದೋಣಿಗಳು ಇಲ್ಲಿ ಅಪಘಾತಕ್ಕೀಡಾಗಿವೆ. ಸುಮಾರು 45 ಮಂದಿ ಸತ್ತಿದ್ದಾರೆ.ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿ ಮೀನುಗಾರಿಕಾ ದೋಣಿಗಳ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕು ಎಂಬ ಬಹು ವರ್ಷಗಳ ಬೇಡಿಕೆಗೆ ಇದುವರೆಗೂ ಬೆಲೆ ಸಿಕ್ಕಿಲ್ಲ ಎಂದು ಮೀನುಗಾರ ಮುಖಂಡ ಮೋಹನ ಬೇಂಗ್ರೆ ದೂರಿದ್ದಾರೆ.ಸಮುದ್ರ ಇನ್ನೂ ಕೆಲವು ದಿನ ಪ್ರಕ್ಷುಬ್ಧವಾಗಿರುವ ಸಾಧ್ಯತೆ ಇದ್ದು, ಈಗಾಗಲೇ ಕಡಲಿಗೆ ತೆರಳಿದ ದೋಣಿಗಳು ಹಿಂದಿರುಗುವುದು ಸದ್ಯ ಅಪಾಯಕಾರಿಯಾಗಿ ಪರಿಣಮಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.