ಗುರುವಾರ , ಮಾರ್ಚ್ 4, 2021
16 °C
ಪ್ರಾಧಿಕಾರದ ಅನುದಾನದಲ್ಲಿ ನೂತನ ಮಾರುಕಟ್ಟೆ ನಿರ್ಮಿಸಲು ತೀರ್ಮಾನ

ಮೀನು ಮಾರುಕಟ್ಟೆ ನವೀಕರಣ

ಪಿ.ಕೆ. ರವಿಕುಮಾರ್‌ Updated:

ಅಕ್ಷರ ಗಾತ್ರ : | |

ಮೀನು ಮಾರುಕಟ್ಟೆ ನವೀಕರಣ

ಕಾರವಾರ: ಇಲ್ಲಿನ ಮೀನು ಮಾರುಕಟ್ಟೆ ಕಟ್ಟಡ ದುಃಸ್ಥಿತಿಯಲ್ಲಿದ್ದು, ಕುಸಿದು ಬೀಳುವ ಹಂತ ತಲುಪಿದೆ. ಇಲ್ಲಿನ ಮೀನು ಮಾರಾಟಗಾರ ಮಹಿಳೆಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ನಗರಸಭೆಯು ಬಿಲ್ಟ್‌ ವೃತ್ತದ ಬಳಿ ಇರುವ ತಾತ್ಕಾಲಿಕ ಮೀನು ಮಾರುಕಟ್ಟೆಗೆ ಮರುಜೀವ ನೀಡಲು ಮುಂದಾಗಿದೆ.ನಾಲ್ಕೈದು ವರ್ಷಗಳ ಹಿಂದೆಯೇ ರೂ 15 ಲಕ್ಷ ವೆಚ್ಚದಲ್ಲಿ ನಗರಸಭೆಯು ರಾಷ್ಟ್ರೀಯ ಹೆದ್ದಾರಿ–17ರ ಪಕ್ಕದಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆಯನ್ನು ನಿರ್ಮಿಸಿತ್ತು. ಆದರೆ ಇಲ್ಲಿ ಮೀನು ಮಾರಾಟಕ್ಕೆ ಯಾವುದೇ ಸೌಕರ್ಯ ಇಲ್ಲದಿದ್ದರಿಂದ ಮಾರಾಟಗಾರರು ಸ್ಥಳಾಂತರಗೊಳ್ಳಲು ಹಿಂದೇಟು ಹಾಕಿದರು. ಹಾಗಾಗಿ ಈ ಮಾರುಕಟ್ಟೆ ಬಳಕೆಯಾಗದೇ ನಿರುಪಯುಕ್ತವಾಗಿತ್ತು.ರೂ 9.85 ಲಕ್ಷ ವೆಚ್ಚದಲ್ಲಿ ನವೀಕರಣ:  ಶಿಥಿಲಾವಸ್ಥೆಯಲ್ಲಿರುವ ಮೀನು ಮಾರುಕಟ್ಟೆಯ ಮುಖ್ಯ ಕಟ್ಟಡ ಬಳಕೆಗೆ ಯೋಗ್ಯವಾಗಿಲ್ಲ ಹಾಗೂ ಇದು ಯಾವಾಗ ಬೇಕಾದರೂ ಕುಸಿಯುವ ಸಾಧ್ಯತೆ ಇದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಒಂದೂವರೆ ತಿಂಗಳ ಹಿಂದೆಯೇ ಪ್ರಮಾಣ ಪತ್ರ ನೀಡಿದ್ದಾರೆ. ಹಾಗಾಗಿ ಇಲ್ಲಿನ ಮಾರಾಟಗಾರರನ್ನು ಸ್ಥಳಾಂತರಗೊಳಿಸಲು ನಗರಸಭೆ ತೀರ್ಮಾನಿಸಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರೂ 9.85 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಮೀನು ಮಾರುಕಟ್ಟೆಯ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.‘ತಾತ್ಕಾಲಿಕ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇಲ್ಲಿನ ಕುಡಿಯುವ ನೀರು, ವಿದ್ಯುತ್‌ ವ್ಯವಸ್ಥೆ ಸೇರಿದಂತೆ ಮೀನು ಮಾರಾಟಕ್ಕೆ ಅಗತ್ಯವಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಪಾರ್ಕಿಂಗ್‌ಗೆ ಇಲ್ಲಿ ವಿಶಾಲವಾದ ಜಾಗವಿದೆ. ಅಲ್ಲದೇ ಇಲ್ಲಿ ಚಿಕ್ಕ ಘಟಕವನ್ನು ಸ್ಥಾಪಿಸಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಸಮುದ್ರಕ್ಕೆ ಬಿಡುವ ಯೋಜನೆಯೂ ಇದೆ. ಈ ಪುನರ್‌ನವೀ­ಕರಣ ಕಾಮಗಾರಿಯೂ ಜುಲೈ 15ರೊಳಗೆ ಮುಗಿಯಲಿದ್ದು, ಬಳಿಕ ಹಳೆ ಕಟ್ಟಡದಲ್ಲಿನ ಮೀನು ಮಾರಾಟಗಾರ­ರನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಮೋಹನ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಭಿನ್ನಾಭಿಪ್ರಾಯ:  ನಗರದ ಕೆಇಬಿ ಕಚೇರಿ ಬಳಿಯ 19 ಗುಂಟೆ ಜಾಗದಲ್ಲಿ ಹೊಸ ಮೀನು ಮಾರುಕಟ್ಟೆಯನ್ನು ನಿರ್ಮಿಸಲು ನಗರಸಭೆ ನಿರ್ಧರಿಸಿದ್ದು, ಇದಕ್ಕೆ ಮೀನು ಮಾರಾಟ ಮಹಿಳೆಯರ ಅಪಸ್ವರ ಕೇಳಿಬಂದಿದೆ. ಮೀನು ಮಾರುಕಟ್ಟೆ ನಿರ್ಮಿಸಲು ವೈಜ್ಞಾನಿಕವಾಗಿ ಅದು ಸೂಕ್ತ ಜಾಗ ಅಲ್ಲ. ಉದ್ದೇಶಿತ ಮಾರುಕಟ್ಟೆ ಬಳಿ ಕೋಣೆನಾಲಾ ಇದೆ. ಮೀನು ತ್ಯಾಜ್ಯವನ್ನು ಆ ಚರಂಡಿಗೆ ಬಿಟ್ಟರೆ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಹಳೆ ಕಟ್ಟಡದ ಜಾಗದಲ್ಲಿಯೇ ನೂತನ ಮಾರುಕಟ್ಟೆಯನ್ನು ನಿರ್ಮಿಸಬೇಕೆಂದು ಮಾರಾಟಗಾರರು ಪಟ್ಟು ಹಿಡಿದಿದ್ದಾರೆ.ಪ್ರಾಧಿಕಾರಕ್ಕೆ ಪತ್ರ:  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಈ ನೂತನ ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಿರುವ ನಗರಸಭೆಯು ಪ್ರಾಧಿಕಾರದ ಅಧ್ಯಕ್ಷ ನಿವೇದಿತ್‌ ಆಳ್ವ ಅವರಿಗೆ ಒಂದೂವರೆ ತಿಂಗಳ ಹಿಂದೆ ಪತ್ರ ಬರೆದಿದೆ. ಪ್ರಾಧಿಕಾರಕ್ಕೆ ಜಾಗವನ್ನು ಹಸ್ತಾಂತರ ಮಾಡಿದರೆ ರೂ 4 ಕೋಟಿ ಅನುದಾನದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗಲಿದೆ. ಅದಕ್ಕೂ ಮುನ್ನ ಮೀನು ಮಾರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಉತ್ತಮ ವಿನ್ಯಾಸದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಚಿಂತಿಸಿದೆ.ತಾತ್ಕಾಲಿಕ ಮೀನುಮಾರುಕಟ್ಟೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರು ಕುಳಿತು ಮೀನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ

ಕೆ.ಎಂ. ಮೋಹನರಾಜ್‌,
ನಗರಸಭೆ ಎಂಜಿನಿಯರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.