ಭಾನುವಾರ, ಜನವರಿ 19, 2020
23 °C

ಮುಂದುವರಿದ ಸದಸ್ಯರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಸ್ಥಳೀಯ ನಗರಸಭೆಯ ಪೌರಾಯುಕ್ತರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಒತ್ತಾಯಿಸಿ ನಗರಸಭೆ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಭಾನುವಾರ ಐದನೇ ದಿನವೂ ಮುಂದುವರಿದಿತ್ತು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ನೀಡಿದ ನಿರ್ದೇಶನದ ಮೇರೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ದೂರವಾಣಿ ಮೂಲಕ ಧರಣಿ ನಿರತರನ್ನು ಸಂಪರ್ಕಿಸಿ ತಮ್ಮ ಮಾತಿಗೆ ಬೆಲೆ ಕೊಡುವುದಾದರೆ ಜಮಖಂಡಿಗೆ ಬಂದು ಧರಣಿ ಅಂತ್ಯಗೊಳಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದರು ಎಂದು ನಗರಸಭೆ ಸದಸ್ಯ ಶ್ರೀಶೈಲ ಪಾಟೀಲ ಹೇಳಿದರು.ಮಾತಿಗೆ ಬೆಲೆ ಕೊಡುವ ಪ್ರಶ್ನೆಯೇ ಇಲ್ಲ. ದಯಮಾಡಿ ತಪ್ಪು ಭಾವಿಸಬೇಡಿ. ಯಾರೂ ಧರಣಿ ಕೈಬಿಡುವ ಮಾತನ್ನು ಒಪ್ಪುವ ಪರಿಸ್ಥಿತಿಯಲ್ಲಿ ಇಲ್ಲ. ಪೌರಾಯುಕ್ತರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ ಆದೇಶ ಬಂದ ಬಳಿಕ ಮಾತ್ರ ಧರಣಿ ನಿಲ್ಲಿಸುವ ನಿರ್ಧಾರ ಕೈಕೊಂಡಿರುವುದಾಗಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ ತಿಳಿಸಲಾಗಿದೆ ಎಂದರು.ಪೌರಾಯುಕ್ತರ ಸೇವಾ ವರ್ಗಾವಣೆ ಆದೇಶ ಬಂದಿರುವುದು ರಾಜಕೀಯ ಪ್ರೇರಿತ ಆದೇಶ ಅಲ್ಲ. ಬದಲಾಗಿ ಅವರು ಮಾಡಿದ ಭ್ರಷ್ಟಾಚಾರ, ಅವ್ಯವಹಾರ ಮತ್ತು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ವರ್ಗಾವಣೆ ಆದೇಶವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಹೊರಡಿಸಿದ್ದಾರೆ ಎಂದು ಮನವರಿಕೆ ಮಾಡಿ ಕೊಡಲಾಗಿದೆ ಎಂದರು.ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಸೌಜನ್ಯಕ್ಕೂ ಸಹ ಬಸ್ ನಿಲ್ದಾಣದ ರಸ್ತೆಯಲ್ಲಿ ಹಾಯ್ದು ಹೋಗುತ್ತಿಲ್ಲ. ಬೈಪಾಸ್ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಈ ಮಾತನ್ನು ಹೇಳಲು ನಮಗೆ ನಾಚಿಕೆ ಎನಿಸುತ್ತಿದೆ ಎಂದರು.ಸಂಕ್ರಾಂತಿ ಹಬ್ಬ ನಮಗೆಲ್ಲ ಬಹುದೊಡ್ಡ ಹಬ್ಬ. ಆದರೆ ಧರಣಿ ನಡೆಸುತ್ತಿರುವ ವೇದಿಕೆಯಲ್ಲಿಯೇ ಆ ದೊಡ್ಡ ಹಬ್ಬವನ್ನು ಆಚರಿಸಿದ್ದೇವೆ. ಯಾವುದೇ ಕಾರಣಕ್ಕೂ ಧರಣಿ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ಉಪಾಧ್ಯಕ್ಷೆ ಶೀಲಾಬಾಯಿ ಪಿಸಾಳ, ಸ್ಥಾಯಿ ಸಮಿತಿ ಚೇರಮನ ಇಕ್ತಿಯಾರ ಅವಟಿ, ಸದಸ್ಯರಾದ ವಿಜಯಲಕ್ಷ್ಮೀ ಉಕಮನಾಳ, ಶೋಭಾ ಶಿರಗಣ್ಣವರ, ನರಸಿಂಹ ನಾಯಿಕ, ಸಿದ್ದು ಮೀಶಿ, ಸಂಪತೆವ್ವ ಗಡಕರ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಜೇಸಾಬ ಮಸಳಿ ಭಾನುವಾರದ ಧರಣಿಯಲ್ಲಿ ಪಾಲ್ಗೊಂಡಿದ್ದರು.

 

ಪ್ರತಿಕ್ರಿಯಿಸಿ (+)