ಸೋಮವಾರ, ಮೇ 23, 2022
21 °C

ಮುಖ್ಯಮಂತ್ರಿಯಿಂದ ಉದ್ಘಾಟನಾ ಸಿದ್ಧತೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಬಹುನಿರೀಕ್ಷಿತ `ನಮ್ಮ ಮೆಟ್ರೊ~ದ ಉದ್ಘಾಟನೆಗೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಇಲ್ಲಿ ತಿಳಿಸಿದರು.ಇದೇ ತಿಂಗಳ 20ರಂದು ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ `ನಮ್ಮ ಮೆಟ್ರೊ~ ರೀಚ್-1ರ ಉದ್ಘಾಟನೆಗೆ ಮೆಟ್ರೊ ನಿಲ್ದಾಣ ಹಾಗೂ ಪೆರೇಡ್ ಮೈದಾನದಲ್ಲಿ ಕೈಗೊಳ್ಳುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.`ನಾವು ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೊ ರೈಲಿನಲ್ಲಿ  ಪ್ರಯಾಣಿಸುವ ಮೂಲಕ ರೀಚ್-1ರ ಎಲ್ಲ ನಿಲ್ದಾಣಗಳನ್ನು ಪೆರೇಡ್ ಮೈದಾನದಲ್ಲಿ ಉದ್ಘಾಟಿಸಲಿದ್ದೇವೆ. ಈ ಪ್ರಯಾಣದಿಂದ ನಗರದ ಜನತೆಗೆ ಸಮರ್ಪಿಸುತ್ತಿರುವ `ನಮ್ಮ ಮೆಟ್ರೊ~ದ ಗುಣಮಟ್ಟದ ಕಾಮಗಾರಿಯನ್ನು ಗಣ್ಯರಿಗೆ ಪರಿಚಯಿಸಿದಂತಾಗುತ್ತದೆ~ ಎಂದು ಅವರು ಹೇಳಿದರು.ಈ ನಡುವೆ ಭದ್ರತಾ ವ್ಯವಸ್ಥೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ನಗರ ಪೊಲೀಸ್ ಇಲಾಖೆ, ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೊ ರೈಲು ನಿಗಮ) ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, `ನಮ್ಮ ಮೆಟ್ರೊ ಉದ್ಘಾಟನೆ ದಿನದಂದು ಎಲ್ಲ ಭದ್ರತಾ ಕ್ರಮಗಳನ್ನು ಸ್ಥಳೀಯ ಪೊಲೀಸರೇ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ರೈಲಿನಲ್ಲಿ ಪ್ರಯಾಣಿಸಲು ಕೂಡ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ~ ಎಂದು ಹೇಳಿದರು.`ನಮ್ಮ ಮೆಟ್ರೊ~ದ ಉದ್ಘಾಟನಾ ದಿನದಂದು 50 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ನಾವು ನಿರೀಕ್ಷಿಸಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲು ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು~ ಎಂದು ಆಶ್ವಾಸನೆ ನೀಡಿದರು.ಪೆರೇಡ್ ಮೈದಾನದಲ್ಲಿ ಪೂರ್ವಾಭಿಮುಖವಾಗಿ ಗಣ್ಯರ ವೇದಿಕೆಯನ್ನು ನಿರ್ಮಿಸಲಾಗುವುದು. ಮೈದಾನದಲ್ಲಿ 15 ಸಾವಿರ ಮಂದಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗುವುದು. ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಜಂಟಿಯಾಗಿ ಸಿದ್ಧತಾ ಕಾರ್ಯಗಳನ್ನು ಕೈಗೊಂಡಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಪ್ರಯಾಣ ದರ ಪರಿಶೀಲನೆ

`ನಮ್ಮ ಮೆಟ್ರೊ~ ರೈಲಿನ ಪ್ರಯಾಣ ದರ ದುಬಾರಿಯಾಗಿದೆ ಎನ್ನುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, `ಮುಂದಿನ ದಿನಗಳಲ್ಲಿ ಪ್ರಯಾಣ ದರ ಕುರಿತು ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಪ್ರಯಾಣ ದರದಲ್ಲಿ ಯಾವುದೇ ರೀತಿಯ ಬದಲಾವಣೆಯಾದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ~ ಎಂದು ಹೇಳಿದರು.ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಾತನಾಡಿ, `ನಮ್ಮ ಮೆಟ್ರೊ ಉದ್ಘಾಟನೆ ಹಿನ್ನೆಲೆಯಲ್ಲಿ ಜನ ಹಾಗೂ ವಾಹನ ಸಂಚಾರ ನಿಯಂತ್ರಣ ಕುರಿತು ಮುಂದಿನ ಕೆಲವೇ ದಿನಗಳಲ್ಲಿ ಮಾಹಿತಿ ನೀಡಲಾಗುತ್ತದೆ~ ಎಂದರು.ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್, ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ, ಬಿಬಿಎಂಪಿ ಆಯುಕ್ತ ಸಿದ್ದಯ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಅಕ್ರಮ ಪ್ರಚಾರ ನಿಷೇಧಿಸಿ ಆದೇಶ

ಮೆಟ್ರೊ ರೈಲು ಉದ್ಘಾಟನೆಯ ಸಮಾರಂಭದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ ಹಾಗೂ ಕಟೌಟ್‌ಗಳನ್ನು ನಗರದಲ್ಲಿ ಅಳವಡಿಸುವುದನ್ನು ಬಿಬಿಎಂಪಿ ನಿಷೇಧಿಸಿ ಆದೇಶ ಹೊರಡಿಸಿದೆ.ಅಂದು ಪ್ರಧಾನಮಂತ್ರಿಗಳು ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದರೂ, ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.`ಪ್ರಧಾನಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯದ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಶನಿವಾರದಿಂದ 21ರವರೆಗೆ ಜಾರಿಯಲ್ಲಿ ಇರುತ್ತದೆ. ಅನಧಿಕೃತವಾಗಿ ಪ್ರದರ್ಶಿಸುವ ವಾಣಿಜ್ಯ ಜಾಹೀರಾತನ್ನು ಸಹ ತೆರವುಗೊಳಿಸಲಾಗುತ್ತದೆ~ ಎಂದು ತಿಳಿಸಲಾಗಿದೆ.ಪಾಲಿಕೆ ತೆರಿಗೆ ವ್ಯಾಪ್ತಿಗೆ ಮೆಟ್ರೊ

ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಕೂಡ ತೆರಿಗೆ ವ್ಯಾಪ್ತಿಗೆ ತರಲು ನಿರ್ಧರಿಸಿದೆ.ನಮ್ಮ ಮೆಟ್ರೊ~ದ ಉದ್ಘಾಟನಾ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸುವ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಸಿದ್ದಯ್ಯ, `ಪಾಲಿಕೆ ವ್ಯಾಪ್ತಿಯ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಆಸ್ತಿಗೆ ತೆರಿಗೆ ಪಾವತಿಸುವುದು ಕಡ್ಡಾಯ~ ಎಂದರು.`ನಮ್ಮ ಮೆಟ್ರೊ~ದ ರೈಲು ನಿಲ್ದಾಣಗಳ ಆವರಣವನ್ನು ಬಿಎಂಆರ್‌ಸಿಎಲ್ ವಾಣಿಜ್ಯ ಉದ್ದೇಶಗಳಿಗೆ ನೀಡಲು ಉದ್ದೇಶಿಸಿರುವುದನ್ನು ಪ್ರಸ್ತಾಪಿಸಿದ ಅವರು, `ವಾಣಿಜ್ಯ ಆಸ್ತಿ ತೆರಿಗೆ ಆಧಾರದಲ್ಲಿಯೇ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಪ್ರತಿ ನಿತ್ಯ ಸಾವಿರಾರು ಜನರು ಮೆಟ್ರೊ ನಿಲ್ದಾಣಗಳಿಗೆ ಆಗಮಿಸುವುದರಿಂದ ಕಸ ವಿಲೇವಾರಿ ಮಾಡುವುದು ಹಾಗೂ ರಸ್ತೆಗಳ ನಿರ್ವಹಣೆ ಸುಲಭವಲ್ಲ. ಹೀಗಾಗಿ, ಮೆಟ್ರೊ ನಿಗಮ ತೆರಿಗೆ ಪಾವತಿಸುವುದು ಅನಿವಾರ್ಯ~ ಎಂದರು.ಇದಲ್ಲದೆ, ಮೆಟ್ರೊ ನಿಲ್ದಾಣದ ಆವರಣಗಳಲ್ಲಿ ಜಾಹೀರಾತು ಫಲಕಗಳನ್ನು ಹಾಕಲು ಮೆಟ್ರೊ ನಿಗಮಕ್ಕೆ ಅವಕಾಶ ನೀಡುವ ಮೂಲಕ ಅದರಿಂದಲೂ ತೆರಿಗೆ ಸಂಗ್ರಹಿಸಲು ಪಾಲಿಕೆ ಉದ್ದೇಶಿಸಿದೆ.ಈ ರೀತಿ ಸಂಗ್ರಹವಾಗುವ ಮೊತ್ತವನ್ನು ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಜಂಟಿಯಾಗಿ ಸ್ಥಾಪಿಸುವ ನಿಧಿಗೆ ನೀಡಲು ನಿರ್ಧರಿಸಿವೆ. ಮೆಟ್ರೊ ಕಾಮಗಾರಿಯಿಂದ ಸಾಕಷ್ಟು ಹಾಳಾಗಿರುವ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆಗೆ ಈ ನಿಧಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.ಈಗಾಗಲೇ ಮೆಟ್ರೊ ಕಾಮಗಾರಿಯಿಂದ ತೀವ್ರ ಹಾಳಾಗಿರುವ ರಸ್ತೆಗಳ ದುರಸ್ತಿಗೆ ತೆರಿಗೆ ಮೂಲಕ ಸಂಗ್ರಹವಾಗಲಿರುವ ನಿಧಿ ಮೊತ್ತವನ್ನು ಬಳಕೆ ಮಾಡಲಿರುವುದರಿಂದ ಹಣದ ಕೊರತೆ ಎದುರಿಸುತ್ತಿರುವ ಪಾಲಿಕೆಗೆ ತನ್ನ ಹೊರೆಯನ್ನೂ ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.ಎಂ.ಜಿ.ರಸ್ತೆ ನಿಲ್ದಾಣದಲ್ಲಿ ರಾಷ್ಟ್ರಧ್ವಜದ `ಕಿಯೋಸ್ಕ್~

ಬೆಂಗಳೂರು: `ನಮ್ಮ ಮೆಟ್ರೊ~ದ ರೀಚ್-1ರ (ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ) ಮಾರ್ಗದಲ್ಲಿ ರೈಲು ಸಂಚಾರ ಅಧಿಕೃತವಾಗಿ ಉದ್ಘಾಟನೆಯಾದ ಆರು ವಾರಗಳ ನಂತರ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ರಾಷ್ಟ್ರದ ತ್ರಿವರ್ಣ ಧ್ವಜದ (ಕಿಯೋಸ್ಕ್)  ಮಳಿಗೆಯನ್ನು ಪ್ರಾರಂಭಿಸಲಿದೆ.ಮೆಟ್ರೊ ನಿಲ್ದಾಣದ ಆಧುನಿಕ ಒಳಾಂಗಣ ಪ್ರವೇಶಿಸುವಂತಹ ಪ್ರಯಾಣಿಕರಿಗೆ ಸ್ವಾತಂತ್ರ್ಯ ಪೂರ್ವದ ದೇಶಾಭಿಮಾನ ಮೂಡಿಸುವಂತಹ ವಿಶಿಷ್ಟ ವಾತಾವರಣ ಸೃಷ್ಟಿಸುವುದು ಈ `ಕಿಯೋಸ್ಕ್~ ಸ್ಥಾಪನೆಯ ಉದ್ದೇಶವಾಗಿದೆ. ಬಿಎಂಆರ್‌ಸಿಎಲ್ ಮಳಿಗೆ ಸ್ಥಾಪನೆಗಾಗಿ ಜಾಗವನ್ನು ಉಚಿತವಾಗಿ ನೀಡಲಿದೆ.ಈ ಸಂಬಂಧ ಖಾದಿಗೆ ಉತ್ತೇಜನ ನೀಡುತ್ತಿರುವ ಹಾಗೂ ಅಧಿಕೃತವಾಗಿ ರಾಷ್ಟ್ರ ಧ್ವಜ ತಯಾರಿಸುತ್ತಿರುವ ಏಕೈಕ ಸಂಸ್ಥೆಯಾದ ಕರ್ನಾಟಕ ಗ್ರಾಮೋದ್ಯೋಗ ಸಂಯುಕ್ತ ಸಂಘ ಹಾಗೂ ಬಿಎಂಆರ್‌ಸಿಎಲ್ ನಡುವೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ.ವೆುಟ್ರೊ ನಿಲ್ದಾಣದೊಳಗೆ ಪ್ರಯಾಣಿಕರು ಪ್ರವೇಶಿಸುವಂತಹ ಪ್ರಮುಖ ಜಾಗದಲ್ಲಿ ಈ ಮಳಿಗೆ ಸ್ಥಾಪನೆಗೆ ಬಿಎಂಆರ್‌ಸಿಎಲ್ ಅನುಮತಿ ನೀಡಲಿದೆ. ಅನುಮೋದಿತ ಯೋಜನೆಯ ಪ್ರಕಾರ, ನಿರ್ದಿಷ್ಟ ಸ್ಥಳದಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಲೋಗೊ ಅಳವಡಿಸಲು ಕೂಡ ಅವಕಾಶ ನೀಡಲಾಗುತ್ತದೆ.ಈ ಸಂಬಂಧ ಈ ತಿಂಗಳ 5ರಂದು ಬಿಎಂಆರ್‌ಸಿಎಲ್ ಹಾಗೂ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಿದ್ದು, ನಂತರದ 8 ವಾರದೊಳಗೆ ಸಂಘ ಈ ಮಳಿಗೆ ಸ್ಥಾಪಿಸಲಿದೆ.

ಬಿಎಂಆರ್‌ಸಿಎಲ್ ಮಳಿಗೆ ಸ್ಥಾಪನೆಗೆ ಜಾಗವನ್ನು ಮಾತ್ರ ಉಚಿತವಾಗಿ ನೀಡುತ್ತಿದ್ದು, ಒಂದು ವೇಳೆ ಆಸ್ತಿ ತೆರಿಗೆ ಅನ್ವಯವಾದಲ್ಲಿ ಸಂಘವೇ ಪಾವತಿಸಬೇಕಾಗುತ್ತದೆ.ವಿದ್ಯುತ್ ಬಳಕೆಗಾಗಿ ಸಂಘದ ವೆಚ್ಚದಲ್ಲಿಯೇ ಪ್ರತ್ಯೇಕ ಮೀಟರ್ ಅಳವಡಿಸಲು ಅನುಮತಿ ನೀಡಲಾಗಿದ್ದು, ಪ್ರತಿ ತಿಂಗಳು ಕೊನೇ ದಿನಾಂಕದೊಳಗೆ ಸಂಘವೇ ಮಳಿಗೆಗೆ ವಿದ್ಯುತ್ ದರವನ್ನು ಪಾವತಿ ಮಾಡಬೇಕಾಗುತ್ತದೆ.ಈ ಮಳಿಗೆಯ ಸಂಪೂರ್ಣ ಜವಾಬ್ದಾರಿ ಸಂಘಕ್ಕೇ ಸೇರಿದ್ದು, ಯಾವುದೇ ನಷ್ಟಕ್ಕೆ ತಾನು ಹೊಣೆಯಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಂಆರ್‌ಸಿಎಲ್, ಮುಂಜಾಗ್ರತಾ ಕ್ರಮವಾಗಿ ಮಳಿಗೆಗೆ ವಿಮೆ ಮಾಡಿಸುವಂತೆಯೂ ಸಂಘಕ್ಕೆ ಸಲಹೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.