ಭಾನುವಾರ, ಜನವರಿ 26, 2020
27 °C

ಮುಖ್ಯವಾಹಿನಿಗೆ ಬರಲು ನಕ್ಸಲರ ತವಕ

ಪ್ರಜಾವಾಣಿ ವಾರ್ತೆ / ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗಾಂಧಿಯನ್ನೂ ಓದ­ಬೇಕಿತ್ತು. ಅಂಬೇಡ್ಕರ್‌, ಲೋಹಿಯಾ ಅವರ ಚಿಂತನೆಯಿಂದ ಕಲಿಯುವುದೂ ಬಹಳಷ್ಟಿತ್ತು. ಅವುಗಳ ನೆಲೆಗಟ್ಟಿನಲ್ಲಿ ನಾವು ಮಾರ್ಕ್ಸ್‌, ಮಾವೊ ವಿಚಾರ­ಗಳನ್ನು ನೋಡಬೇಕಿತ್ತು...’ ಎಂದು ಎದುರಿಗಿದ್ದವರು ಹೇಳುತ್ತಿದ್ದಾಗ ಸುಮಾರು ಮೂರು ದಶಕಗಳ ಸಶಸ್ತ್ರ ಕ್ರಾಂತಿಯ ಅಧ್ಯಾಯವೊಂದು ಹೊಸ ಆಯಾಮ ಪಡೆದು ಕೊಂಡಂತೆನಿಸಿತು.ಕರ್ನಾಟಕದ ನಕ್ಸಲೀಯ ಚಳವಳಿಯ ಹಿರಿಯ ಮುಖಂಡರಾದ ನೂರ್‌ ಜುಲ್ಫಿಕರ್‌ ಅಲಿಯಾಸ್‌ ಶ್ರೀಧರ್‌, ಸಿರಿ­ಮನೆ ನಾಗರಾಜ್‌ ತಾವು ನಡೆದು ಬಂದ ಹಾದಿಯ ಸೈದ್ಧಾಂತಿಕ ನೆಲೆ­ಗಟ್ಟು­ಗಳ ವಿಮರ್ಶಾತ್ಮಕ ವಿಶ್ಲೇಷಣೆಗೆ ಇಳಿದಿದ್ದರು. ಪತ್ರಿಕೆ ಕಚೇರಿಗೆ ಬಂದ ದೂರವಾಣಿ ಕರೆಯ ನಂಬಿಕೆಯ ಮೇರೆಗೆ ಈ ಭೇಟಿ ಏರ್ಪಾಟಾಗಿತ್ತು.

ಪೂರ್ವ ನಿಗದಿಯಂತೆ ಬೆಳಿಗ್ಗೆ ಕಚೇರಿಯ ಎದುರು ಬಂದ ಕಾರೊಂದರಲ್ಲಿ ಕುಳಿತ ನಂತರ ಅದು ಬೇರೆ ಬೇರೆ ಕಡೆ ಇನ್ನೂ ಕೆಲವರನ್ನು ಹೇರಿಕೊಂಡು ಸುಮಾರು ಎರಡು ಗಂಟೆಗಳ ಕಾಲ ಎಲ್ಲಿಯೂ ನಿಲ್ಲದೆ ಸಾಗಿ ಅಜ್ಞಾತ ಸ್ಥಳ ಒಂದರ ಬಳಿ ನಿಂತಿತು. ಸುತ್ತಲೂ ಕಾಡು. ನಿರ್ಜನ ಪ್ರದೇಶ. ಅಲ್ಲೇ ಒಬ್ಬರು ಬಂದು ಎಲ್ಲರ ಮೊಬೈಲ್‌ಗಳನ್ನು ತೆಗೆ ದಿಟ್ಟುಕೊಂಡರು. ಒಂದಷ್ಟು ದೂರ ನಡೆದ ಮೇಲೆ ಅಲ್ಲಿ ಎದುರಾದವರು ನೂರ್‌ ಜುಲ್ಫಿಕರ್‌.

ನಕ್ಸಲರ ತವಕ

ಕರ್ನಾಟಕದ ಮಾವೋವಾದಿ ಚಳವಳಿಯನ್ನು ಗಮನಿಸಿದವರೆಲ್ಲರಿಗೂ ನೂರ್‌ ಜುಲ್ಫಿಕರ್‌ ಪರಿಚಿತ ಹೆಸರು. ಚಿತ್ರದುರ್ಗದ ನೂರ್‌ 1986ರಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದಾಗಲೇ ಸಿಪಿಐ (ಎಂ.ಎಲ್‌) ಪೀಪಲ್ಸ್‌ವಾರ್‌ ಗುಂಪಿನ ಜತೆ ಗುರುತಿಸಿಕೊಂಡಿದ್ದರು. ಆಗಿನಿಂದಲೇ ಆ ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು.ರಾಜ್ಯದಲ್ಲಿ ನಕ್ಸಲೀಯ ಸಂಘಟನೆಯನ್ನು ಕಟ್ಟುವಲ್ಲಿ ಸಾಕೇತ್ ರಾಜನ್ ಜತೆಗೆ ನಿಂತು ಪ್ರಮುಖ ಪಾತ್ರ ವಹಿಸಿದ್ದರು. ೨೦೦೫ರಲ್ಲಿ ಸಾಕೇತ್ ಪೊಲೀಸರ ಗುಂಡಿಗೆ ಬಲಿಯಾದಾಗ, ಸಂಘಟನೆಯ ರಾಜ್ಯ ಕಾರ್ಯ­ದರ್ಶಿ ಸ್ಥಾನಕ್ಕೆ ನೂರ್ ಹೆಸರು ಮಾಧ್ಯಮ­ಗಳಲ್ಲಿ ಕೇಳಿ ಬಂದಿತ್ತು. ಆದರೆ ಆಗ ತೆಲಂಗಾಣದ ಹಿರಿಯ ಹೋರಾಟಗಾರ ನವೀನ್ ಕರ್ನಾಟಕ ಘಟಕದ ನೇತೃತ್ವ ವಹಿಸಿ ಕೊಂಡಿದ್ದರು.

ಆದರೆ ನೂರ್ ಹೇಳುವಂತೆ ‘ಆ ನಂತರ ಕೆಲವೇ ದಿನಗಳಲ್ಲಿ ನವೀನ್ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ಸೆರೆ ಹಿಡಿದು ಕೊಂದು, ಧರ್ಮಾವರಂನಲ್ಲಿ ಮೃತದೇಹವನ್ನು ಎಸೆದಿದ್ದರು’. ನಂತರದ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಾವೋವಾದಿಗಳ ನಡುವೆಯೇ ಸೈದ್ಧಾಂ­ತಿಕ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿತು. ವ್ಯಾಪಕ­ವಾದ ಜನಚಳವಳಿ ಇಲ್ಲದ ಕೇವಲ ಸಶಸ್ತ್ರ ಹೋರಾಟ ಮಾರ್ಗದ ಕುರಿತು ಭಿನ್ನಾಭಿಪ್ರಾಯ ಕಂಡು ಬಂದಿತು. ಆಗ ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷ (ಆರ್‌ಸಿಪಿ) ಎಂಬ ಇನ್ನೊಂದು ಬಣ ಹುಟ್ಟು ಪಡೆಯಿತು.ನೂರ್ ಮತ್ತು ಸಿರಿಮನೆ ನಾಗರಾಜ್ ನೇತೃತ್ವದಲ್ಲಿ ಈ ಬಣ ಸಕ್ರಿಯವಾಗಿದೆ. ಇವರಿಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ ಭಾರಿ ಮೊತ್ತದ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ವರ್ಷಗಳ ಹಿಂದೆಯೇ ಪ್ರಕಟಣೆ ನೀಡಿದೆ. ಶೃಂಗೇರಿಯ ಸಿರಿಮನೆ ನಾಗರಾಜ್‌  ಎಪ್ಪತ್ತರ ದಶಕದಲ್ಲೇ ಮೈಸೂರಿನಲ್ಲಿ ಪ್ರಗತಿಪರ ಚಳವಳಿಗಳ ಮುಂಚೂಣಿಯಲ್ಲಿದ್ದವರು. ನಂತರ ಮಲೆನಾಡಿನಲ್ಲಿ ಪರಿಸರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಬೀದರದಲ್ಲಿ ಕೊಳಾರ ಕೈಗಾರಿಕಾ ಮಾಲಿನ್ಯ ವಿರೋಧಿ ಹೋರಾಟ, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಆಂದೋಲನ, ಬಿಎಂಐಸಿ ವಿರೋಧಿ ಚಳವಳಿಗಳ ನೇತೃತ್ವ ವಹಿಸಿದ್ದರು. ಮಾವೋವಾದಿ ಸಂಘಟನೆಯಲ್ಲಿ ಸಕ್ರಿಯರಾಗಿರುವ ಇವರ ಪತ್ತೆಗಾಗಿ ಪೊಲೀಸರು ಶ್ರಮ ವಹಿಸುತ್ತಲೇ ಇದ್ದಾರೆ.ರಾಜ್ಯದಲ್ಲಿ ಮಾವೋವಾದಿ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು  ಬದಿಗಿಟ್ಟು ಸಮಾಜದ ಮುಖ್ಯವಾಹಿ­ನಿಗೆ ಬರಬೇಕೆಂದು ಸ್ವಾತಂತ್ರ್ಯ ಯೋಧ ಎಚ್.ಎಸ್.­ದೊರೆಸ್ವಾಮಿ ಸೇರಿದಂತೆ ಅನೇಕ ಗಣ್ಯರು ಮನವಿ ಮಾಡಿರುವುದಕ್ಕೆ ಈ ಇಬ್ಬರು ಮಾವೋವಾದಿ ಮುಖಂಡರು ಇದೀಗ ಸ್ಪಂದಿಸಿದ್ದಾರೆ. ಈ ಬಗ್ಗೆ ಎ.ಕೆ.ಸುಬ್ಬಯ್ಯ ಸೇರಿದಂತೆ ಕೆಲವು ಗಣ್ಯರು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆ ಗಳನ್ನು ಸಂಪೂರ್ಣ ತಹಬಂದಿಗೆ ತರುವ ದಿಸೆಯಲ್ಲಿ ಮುಖ್ಯಮಂತ್ರಿಗಳೂ ಇಂತಹದ್ದೊಂದು ನಡೆ ಬಗ್ಗೆ ಸಕಾರಾತ್ಮಕ ನಿಲುವು ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಮಾವೋವಾದಿ ಮುಖಂಡರು ತಮ್ಮ ಬೆಂಬಲಿಗರೊಡನೆ ಚರ್ಚಿಸಿ­ದ್ದಾರಂತೆ.  ಇಂತಹದ್ದೊಂದು ಪ್ರಕ್ರಿಯೆ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ.  ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನೂರ್  ಅವರೊಡನೆ ಪತ್ರಕರ್ತರು ನಡೆಸಿದ ಸಂವಾದದ ವಿವರ ಇಲ್ಲಿದೆ.ಸಶಸ್ತ್ರ ಹೋರಾಟದ ಬಗ್ಗೆ ನಿಮ್ಮ ಅಭಿಪ್ರಾಯ ?

ಹೋರಾಟದ ಬಯಕೆ ಮನೋಬಯಕೆಯಿಂದ ಹುಟ್ಟಿಕೊಳ್ಳಬೇಕು. ವಾಸ್ತವಿಕ ಅಗತ್ಯ ಮತ್ತು ಪ್ರಭುತ್ವದ ಪ್ರತಿಕ್ರಿಯೆಯನ್ನು ಆಧರಿಸಿರಬೇಕು. ಅರ್ಧಶತಮಾನದ ಹಿಂದೆ ಚೀನಾದಲ್ಲಿದ್ದ ಪರಿಸ್ಥಿತಿಗೆ ಸಶಸ್ತ್ರ ಹೋರಾಟ ಏಕಮಾತ್ರ ಕಾರ್ಯತಂತ್ರ ಸರಿ ಇದ್ದಿರಬಹುದು. ಆದರೆ ಕರ್ನಾಟಕದ ಪ್ರಸಕ್ತ ಪರಿಸ್ಥಿತಿ ಅದಕ್ಕಿಂತ ಭಿನ್ನವಾಗಿದ್ದು, ಇಲ್ಲಿ ಜನಚಳವಳಿ ಬಿಟ್ಟು  ಸಶಸ್ತ್ರ ಹೋರಾಟ ಅರ್ಥಹೀನ ಎಂಬುದನ್ನು ಈ ಚಳವಳಿ ಜತೆಗಿನ ಕಾಲು ಶತಮಾನದ ಅನುಭವದಲ್ಲಿ ಕಂಡು ಕೊಂಡಿದ್ದೇನೆ.

ಬಹಳಷ್ಟು ಕಾಲ ಇಲ್ಲಿ ನಾವು ಯಾರ ಪರ ಶಸ್ತ್ರಾಸ್ತ್ರ ಹಿಡಿದಿದ್ದೆವೋ ಅವರಿಗೇ ನಾವು ಯಾಕೆ ಶಸ್ತ್ರ ಹಿಡಿದಿದ್ದೇವೆ ಎಂಬುದೇ ಗೊತ್ತಾಗಲಿಲ್ಲ. ಅಂದು ನಾವು ಸ್ವರಕ್ಷಣೆಗಾಗಿ ಶಸ್ತ್ರ ಹಿಡಿದಿದ್ದೆವು. ನಾವು ಯಾರನ್ನೂ ಕೊಂದಿರಲಿಲ್ಲ. ಆದರೆ ಪೊಲೀಸರು ಪಾರ್ವತಿ ಮತ್ತು ಹಾಜೀಮಾ ಎಂಬಿಬ್ಬರನ್ನು ವಿನಾಕಾರಣ ಕೊಂದು ಹಾಕಿದರು. ಸಾಕೇತ್ ಬಲಿಯಾದರು. ಈ ಸುದೀರ್ಘ ಹಾದಿಯಲ್ಲಿ ನಾವು ಕಳೆದುಕೊಂಡಿದ್ದೇ ಹೆಚ್ಚು. ಅಂದರೆ ಕರ್ನಾಟಕದ ವಾಸ್ತವಗಳ ಬಗ್ಗೆ ನಿಮ್ಮ ಗ್ರಹಿಕೆಯೇ ತಪ್ಪಾಗಿತ್ತು ಅಲ್ಲವೇ ?

ಹೌದು, ದಶಕಗಳ ಹಿಂದೆ ನಮ್ಮ ಪರಿಕಲ್ಪನೆ ಸರಿ ಇತ್ತೇನೋ. ಆದರೆ ಇಪ್ಪತ್ತು ವರ್ಷಗಳ ಹಿಂದೆ ಜಾಗತೀಕರಣದ ಪರಿಣಾಮಗಳು ದೇಶವನ್ನು ಆವರಿಸಿದಾಗ, ನಮ್ಮ ನಡುವಣ ಚಳವಳಿಯ ದಿಕ್ಕು ದೆಸೆಗಳೆಲ್ಲಾ ಬದಲಾದವು. ಸಾಮ್ರಾಜ್ಯ ಷಾಹಿ ನೆರಳು ಕುಗ್ರಾಮಗಳನ್ನೂ ಬಿಡಲಿಲ್ಲ. ಮಾರ್ಕ್ಸ್ ಕಲ್ಪಿಸಿಕೊಳ್ಳದೇ ಇದ್ದ ಮಧ್ಯಮವರ್ಗವೇ ಈಗ ಪ್ರಭಾವಿ ಎನಿಸಿಬಿಟ್ಟಿದೆ. ಗ್ರಾಮೀಣ ಪಾಳೆಗಾರಿ ವ್ಯವಸ್ಥೆ ದುರ್ಬಲಗೊಂಡಿದೆ.   ಸಾಮ್ರಾಜ್ಯಷಾಹಿ ಮಧ್ಯಪ್ರವೇಶ ಹೆಚ್ಚಿದೆ. ಈ ನಡುವೆ ಪೊಲೀಸರು ಹೋರಾಟಗಾರರ ಮೇಲೆ ನಿರಂತರ ದೌರ್ಜನ್ಯ ಎಸಗಿದರು. ಬಹಳಷ್ಟು ಹೋರಾಟಗಾರರು ಸತ್ತು ಹೋದರು. ನಾವು ದ್ವೀಪಗಳಾಗ ತೊಡಗಿದೆವು. ಇಡೀ ವ್ಯವಸ್ಥೆಯ ಬಗ್ಗೆ ನಮ್ಮ ತಿಳಿವಳಿಕೆ ವಾಸ್ತವಕ್ಕೆ ದೂರವಾಗಿದೆ ಎಂಬ ಅರಿವು ಮೂಡತೊಡಗಿತು.ಸಮಸ್ಯೆಗಳೆಲ್ಲಾ ಬಗೆ ಹರಿದಿವೆ ಎಂದೆನಿಸು­ತ್ತಿದೆಯಾ ?

ಖಂಡಿತಾ ಇಲ್ಲ, ಹೆಚ್ಚಾಗಿವೆ. ಸಮಸ್ಯೆಗಳ ಸ್ವರೂಪ ಬದಲಾಗಿವೆ, ಅಷ್ಟೆ. ಮುಂದಿನ ದಿನಗಳಲ್ಲಿ ಜನಸಾ­ಮಾನ್ಯರು  ಜಟಿಲ ಸಮಸ್ಯೆಗಳಿಗೆ ಎದೆ ಒಡ್ಡಬೇಕಾ­ಗುತ್ತದೆ. ಕಾರ್ಪೋರೆಟ್ ಜಗತ್ತು ಕೃಷಿಯನ್ನು ಕಿತ್ತು ತಿನ್ನುತ್ತಿದೆ. ಗ್ರಾಮೀಣರ ಕೈಕಸುಬೆಲ್ಲಾ ಕಳೆದುಹೋಗಿವೆ. ಈಗ ಬರೇ ಮಾರುಕಟ್ಟೆ ಸಂಸ್ಕೃತಿಯದೇ ಕಾರುಬಾರು. ಇಂತಹ ಸಂದಿಗ್ಧದಲ್ಲಿ ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿ ಜನಪರ ಆಂದೋಲನದ ಅನಿವಾರ್ಯತೆ ಇದೆ.ಮತ್ತೆ ಮಾವೋ ವಿಚಾರ ಆಧಾರಿತ ಪ್ರಜಾಸತ್ತಾತ್ಮಕ ನೆಲೆಯ ಹೋರಾಟ ಬೇಕೆನಿಸುತ್ತಾ ?

ಸರ್ಕಾರದ ಧೋರಣೆ ಪ್ರಜಾತಾಂತ್ರಿಕವಾಗಿದ್ದಲ್ಲಿ, ಪ್ರಜಾಸತ್ತಾತ್ಮಕ ಚೌಕಟ್ಟಿನಲ್ಲಿಯೇ ಹೋರಾಟ ಮುಂದು­ವರಿಸಲು ನಾವು ಬದ್ಧರಿದ್ದೇವೆ. ಆದರೆ ಅದು ಮಾವೊ ಅಥವಾ ಮಾರ್ಕ್ಸ್ ಚಿಂತನೆಯ ಸಿಂಚನದಿಂದ ಕೂಡಿದ್ದರೂ, ಈ ನೆಲದ ಚಿಂತನೆಗಳಿಂದಲೇ ಪ್ರೇರಿತ­ವಾಗಿರುತ್ತದೆ. ಏಕೆಂದರೆ ಇಷ್ಟು ವರ್ಷಗಳ ಕಾಲ ನಾನು ಗಾಂಧೀಜಿಯನ್ನು ಓದದೆ,  ಅಂಬೇಡ್ಕರ್, ಲೋಹಿಯಾ ಮುಂತಾದವರ ವಿಚಾರಧಾರೆಯಿಂದ ಕಲಿಯದೆ ತಪ್ಪು ಮಾಡಿದೆ ಎನಿಸುತ್ತಿದೆ. ಇಲ್ಲಿನ ಸಾಮಾಜಿಕ ವಾಸ್ತವಗಳನ್ನು ಅಂಬೇಡ್ಕರ್ ಅರ್ಥ ಮಾಡಿಕೊಂಡಷ್ಟು ಚೆನ್ನಾಗಿ ಇನ್ನಾರೂ ತಿಳಿದುಕೊಂಡಿಲ್ಲ ಎನಿಸಿದೆ.

ಇವತ್ತಿನ ಹಲವು ಸಮಸ್ಯೆಗಳಿಗೆ ಈ ಮಹನೀಯರ ಚಿಂತನೆಗ­ಳಿಂದಲೂ ಉತ್ತರ ಕಂಡುಕೊ­ಳ್ಳಬೇಕಿದೆ.  ಮಾರ್ಕ್ಸ್‌, ಮಾವೊವಾದಗಳ ಜತೆಗೆ ಈ ನೆಲದ ಚಿಂತನೆಯನ್ನೂ ಹದವಾಗಿ ಬೆರೆಸಿ ಎರಡನ್ನೂ ಸರಿತೂಗಿಸಲು ಈವರೆಗೂ ಸಾಧ್ಯವಾ­ಗಲಿಲ್ಲ. ಈ ಗೊಂದಲದಲ್ಲೇ ಈ ನಾಡಿನ ನೂರಾರು ಯುವಕರು ತಮ್ಮ ಬದುಕು ವ್ಯರ್ಥ ಮಾಡಿಕೊಂಡರು.ಇಂಥ ಸತ್ಯಗಳು ಮಾವೋವಾದಿ ಪಕ್ಷದ ಹಿರಿಯರಿಗೆ ಅರ್ಥವಾಗುತ್ತಿಲ್ಲವೇ ?

ರಾಷ್ಟ್ರೀಯ ಕೇಂದ್ರ ಸಮಿತಿಯ ಎದುರು ಇಂತಹ ಹಲವು ವಾಸ್ತವಗಳನ್ನು ನಾನೇ ಬಿಚ್ಚಿಟ್ಟಿದ್ದೇನೆ. ಆದರೆ ಅದು ಕಲ್ಲಿನ ಮೇಲೆ ಮಳೆ ಸುರಿದಂತೆ ಎಂದು ನನಗೆ ಎಂದೋ ಅನ್ನಿಸಿಬಿಟ್ಟಿದೆ. ದೇಶದಲ್ಲಿ ಆಗುತ್ತಿರುವ ಹೊಸ ಬದಲಾವಣೆಗಳತ್ತ ನೋಡಲು ಯಾರೂ ಸಿದ್ಧರಿಲ್ಲ. ಅಲ್ಲಿ ಆತ್ಮವಿಮರ್ಶೆಯ ಲವಲೇಶವೂ ಇರಲಿಲ್ಲ.ಅದು ಸಾಧ್ಯವೇ ? 

ಏಕೆ ಸಾಧ್ಯವಿಲ್ಲ? ವರ್ಷದ ಹಿಂದೆ ಬಿಜೆಪಿ ಸರ್ಕಾರ ಕೆಲ ಹಿಂದೂ ಮೂಲಭೂತ ವಾದಿ ಸಂಘಟನೆಗಳ  ಕಾರ್ಯಕರ್ತರ ಮೇಲಿದ್ದ  ಪ್ರಕರಣಗಳನ್ನೆಲ್ಲಾ ಹಿಂದಕ್ಕೆ ಪಡೆಯಿತಲ್ಲ.

ಕೇಸ್‌ ವಾಪಸ್‌ ಪಡೆದರೆ ಸಾಕು

ನಾವು ಮುಖ್ಯವಾಹಿನಿಗೆ ಬರುವುದಕ್ಕೆ  ಸರ್ಕಾರ ನೀಡುವ ಯಾವುದೇ ಪ್ಯಾಕೇಜ್‌ಗಳು ನಮಗೆ ಬೇಕಿಲ್ಲ. ನಮ್ಮ ಮೇಲೆ ಹಲವು ಸುಳ್ಳು  ಮೊಕದ್ದಮೆ ಹೂಡಲಾಗಿದೆ. ಅವನ್ನು ವಾಪಸ್‌ ತೆಗೆದುಕೊಂಡರೆ ಸಾಕು.

–ನಕ್ಸಲ್‌ ನಾಯಕ ನೂರ್‌ ಜುಲ್ಫಿಕರ್‌

ಪ್ರತಿಕ್ರಿಯಿಸಿ (+)