ಶುಕ್ರವಾರ, ಮೇ 14, 2021
21 °C

ಮುಗಿಯದ ಕಾಮಗಾರಿ: ನೀಗುವುದೆಂದು ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ:  ಹಟ್ಟಿ ಗ್ರಾಮ ಪಂಚಾಯಿತಿ ಸೇರಿದಂತೆ ಒಟ್ಟು ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಬೃಹತ್ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ.ಹಟ್ಟಿ, ಕೋಠಾ, ಪೈದೊಡ್ಡಿ, ಗುರುಗುಂಟಾ ಗ್ರಾಮ ಪಂಚಾಯತಿಗೆ ಒಳಪಡುವ ಹಲವು ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲು 16 ಕೋಟಿ ರೂಪಾಯಿಗಳ ಯೋಜನೆ ಹಾಕಿಕೊಳ್ಳಲಾಗಿದೆ. ಇದು ಹಟ್ಟಿ ಗ್ರಾಮದ ಹಲವು ಸಂಘಟನೆಗಳು ಕೂಡಿಕೊಂಡು ನಡೆಸಿದ ಗಂಭೀರವಾದ ಹೋರಾಟದ ಫಲವಾಗಿ ಈ ಯೋಜನೆಯನ್ನು ಮಂಜೂರು ಮಾಡಲಾಯಿತು. ಈ ಗ್ರಾಮದ ಜನರು ಅತೀ ಶೀಘ್ರದಲ್ಲಿ ತಾವು ಎದುರಿಸುತ್ತಿರುವ ನೀರಿನ ಸಮಸ್ಯೆ ನೀಗಿಹೋಗುತ್ತದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಯಿತು ಎಂದು ಅಂದುಕೊಂಡಿದ್ದರು. ಆದರೆ ಕಾಮಗಾರಿ ಆರಂಭಗೊಂಡು ಒಂದು ವರ್ಷ ಕಳೆದರೂ ಅರ್ಧದಷ್ಟು ಕೆಲಸ ಆಗಿಲ್ಲ. ತೀರ ನಿಧಾನವಾಗಿ ಸಾಗಿದೆ. ಷರತ್ತುಗಳ ಪ್ರಕಾರ 2013 ಜೂನಿನಲ್ಲಿ ಈ ಕಾಮಗಾರಿ ಮುಗಿಸಿ ನೀರು ಪೂರೈಸಬೇಕು. ಜಲ ನಿರ್ಮಲ ಇಲಾಖೆಯ ಅಧಿಕಾರಿಗಳು ತಾಂತ್ರಿಕ ಕಾರಣಗಳು ಹೇಳಿ ಈ ಕಾಮಗಾರಿ  ಸೆಪ್ಟೆಂಬರ್‌ನಲ್ಲಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.   ತಾಲ್ಲೂಕಿನಲ್ಲಿಯೇ ಹಟ್ಟಿ ಗ್ರಾಮ ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿ 15 ದಿನಕ್ಕೆ ಒಂದು ಸಲ ಕುಡಿಯುವ ನೀರು ಬಿಡಲಾಗುತ್ತಿದೆ. ಕಿರು ನೀರು ಯೋಜನೆಗಳಿಂದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಜನರು ದಿನ ನಿತ್ಯ ಪರದಾಡುತ್ತಿದ್ದಾರೆ. ಆದರೆ ಜಲ ನಿರ್ಮಲ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನದಿಯಲ್ಲಿ ನಿರ್ಮಿಸಬೇಕಾದ ಜ್ಯಾಕ್‌ವೆಲ್ ಕೆಲಸ ಇನ್ನೂ ಆರಂಭಿಸಿಲ್ಲ. ಗ್ರಾಮದಲ್ಲಿ ಸರಿಯಾಗಿ ಪೈಪ್‌ಲೈನ್ ಹಾಕಿಲ್ಲ. ನೀರಿನ ತೊಟ್ಟಿಗಳ ನಿರ್ಮಾಣ ಕಾರ್ಯ ಸಹ ನಿಧಾನ ಗತಿಯಲ್ಲಿ ನಡೆದಿದೆ ಎಂಬುದು ಗ್ರಾಮದ ಜನತೆಯ ದೂರಾಗಿದೆ. ಜಿಲ್ಲಾಡಳಿತ ಶೀಘ್ರ ಈ ಕಾಮಗಾರಿ ಮುಗಿಸಲು  ಕ್ರಮ ಜರುಗಿಸಬೇಕೆಂದು ಜನರ ಒತ್ತಾಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.