ಭಾನುವಾರ, ಏಪ್ರಿಲ್ 18, 2021
23 °C

ಮುಗಿಯದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವ ಸಂದರ್ಭ ಇದು. ಸುತ್ತಲ ಸಮಾಜದಲ್ಲಿ ಮಹಿಳೆ ನಿರ್ವಹಿಸುವ ಪಾತ್ರಗಳಲ್ಲಿ ಸಾಕಷ್ಟು ಬದಲಾವಣೆಗಳನ್ನೂ ಇಂದು ಕಾಣುತ್ತಿದ್ದೇವೆ. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನಗಳಿಗೇರಿದ ಮಹಿಳೆಯರು ಇಂದು ಇದ್ದಾರೆ. ಆದರೆ, ಸಾಮಾಜಿಕವಾಗಿ ಆಕೆಯನ್ನು ನೋಡುವ ದೃಷ್ಟಿಯಲ್ಲಿ ಬದಲಾವಣೆಗಳಾಗಿಲ್ಲ ಎಂಬುದೇ ಮುಖ್ಯ ಸವಾಲು.ಇಂದು ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿದ್ದು ಹೆಣ್ಣುಮಕ್ಕಳ ಸಂಖ್ಯೆ ಕುಸಿದಿದೆ. ಸುಶಿಕ್ಷಿತರೂ ಹೆಣ್ಣುಮಕ್ಕಳನ್ನು ಹೊರೆ ಎಂದೇ ಭಾವಿಸುತ್ತಾರೆ.ಬಾಲ್ಯವಿವಾಹ, ಉನ್ನತ ಶಿಕ್ಷಣಕ್ಕೆ ಅಡ್ಡಿ, ಸಾಮಾಜಿಕ ನಿರ್ಬಂಧಗಳ ಕೋಟೆಗಳು ಹೆಣ್ಣುಮಕ್ಕಳಿಗೆ ಇನ್ನೂ ಜೀವಂತವಾಗಿವೆ. ಮೂರು ದಶಕಗಳ ಹಿಂದೆ ಯಾವ ದೌರ್ಜನ್ಯಗಳ ವಿರುದ್ಧ ಸ್ತ್ರೀವಾದಿಗಳು ಹೋರಾಟ ಸಾರಿದ್ದರೋ ಆ ಎಲ್ಲಾ ದೌರ್ಜನ್ಯಗಳು ಈಗಲೂ ಮುಂದುವರಿದಿವೆ.ವರದಕ್ಷಿಣೆ ಸಾವುಗಳು, ಅತ್ಯಾಚಾರದಂತಹ ಅಪರಾಧಗಳ ಜೊತೆಗೆ ಲೈಂಗಿಕ ಕಿರುಕುಳ ಪ್ರಕರಣಗಳು ದಿನನಿತ್ಯದ ಸಂಗತಿಗಳಾಗುತ್ತಿವೆ. ಶಾಲಾ ಕಾಲೇಜುಗಳು, ದುಡಿಯುವ ಸ್ಥಳಗಳಷ್ಟೇ ಅಲ್ಲ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳೂ ಲೈಂಗಿಕ ಕಿರುಕುಳ ಪ್ರಕರಣಗಳಿಂದ ಮುಕ್ತವಾಗಿಲ್ಲ. ಲೈಂಗಿಕ ಕಿರುಕುಳದಿಂದಾಗಿ ಮೈಸೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ವರದಿ ಇಂತಹ ಪ್ರಕರಣಗಳ ಸಾಲಿಗೆ ಹೊಸ ಸೇರ್ಪಡೆ ಅಷ್ಟೆ.   ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ, ಲೈಂಗಿಕ ದೌರ್ಜನ್ಯ ನಡೆಸುವ ವಿಚಾರಗಳಲ್ಲಿ ಭಾರತದ ಪುರುಷರದು ಮೇಲುಗೈ; ಬ್ರೆಜಿಲ್, ಚಿಲಿ, ಕ್ರೊವೇಷಿಯಾ, ಮೆಕ್ಸಿಕೊ ಹಾಗೂ ರುವಾಂಡಾ ದೇಶಗಳ ಪುರುಷರಿಗೆ ಹೋಲಿಸಿದರೆ, ‘ಲಿಂಗ ತಾರತಮ್ಯ’ ಮನೋಭಾವದಲ್ಲೂ ಭಾರತೀಯ ಪುರುಷರದು ಅತ್ಯಂತ ಕೆಳಗಿನ ಸ್ಥಾನ. ಭಾರತೀಯ ಮಹಿಳೆ, ಪ್ರಗತಿಯ ಮೆಟ್ಟಿಲುಗಳೇರಿದಂತೆ, ಅದಕ್ಕೆ ಸರಿಸಮವಾಗಿ ಪುರುಷರ ಮನೋಭಾವಗಳಲ್ಲಿ ಬದಲಾವಣೆ ಆಗದಿರುವುದು ಈ ಸ್ಥಿತಿಗೆ ಕಾರಣ.

 

ಹೀಗಾಗಿಯೇ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ ಹಾಗೂ ಕಾನೂನುಗಳು ಹೊಸ ಭಾರತೀಯ ಮಹಿಳೆಯನ್ನು ರೂಪಿಸುವಲ್ಲಿ ತಮ್ಮ ಕೊಡುಗೆ ಸಲ್ಲಿಸಿದ್ದರೂ ಸಮಗ್ರ ನೆಲೆಯಲ್ಲಿ ಮಹಿಳಾ ಸಬಲೀಕರಣ ಎಂಬುದು ಇನ್ನೂ ಸಾಧಿಸಬೇಕಾದ ಗುರಿಯೇ ಆಗಿದೆ. ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಂತೂ ನೆರೆಯ ಪಾಕಿಸ್ತಾನ ಹಾಗೂ ನೇಪಾಳಕ್ಕಿಂತ ಭಾರತ ಕೆಳಗಿನ ಸ್ಥಾನದಲ್ಲಿದೆ.ಲೋಕಸಭೆಯಲ್ಲಿ ಶೇ 10.8 ಹಾಗೂ ರಾಜ್ಯಸಭೆಯಲ್ಲಿ ಶೇ 10.3 ಮಹಿಳಾ  ಪ್ರಾತಿನಿಧ್ಯ ಹೊಂದಿರುವ ಭಾರತ, ವಿಶ್ವದಲ್ಲಿ ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ 98ನೇ  ಸ್ಥಾನದಲ್ಲಿದೆ. ರಾಜಕೀಯ ಪ್ರಾತಿನಿಧ್ಯದ ಮಹಿಳಾ ಮೀಸಲು ಮಸೂದೆ ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದು ಕಳೆದ ವರ್ಷವಷ್ಟೇ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದಿದೆ. ಈ ಮಸೂದೆ ಈಗಿನ ಬಜೆಟ್ ಅಧಿವೇಶನದಲ್ಲೂ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇಲ್ಲ. ಇದು ರಾಜಕೀಯ ಪಕ್ಷಗಳ ಆಷಾಢಭೂತಿತನಕ್ಕೆ ಸಾಕ್ಷಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.