ಶನಿವಾರ, ಮೇ 28, 2022
30 °C

ಮುನೀಶ್ವರ ಗುಡಿ ಕಾಯಕಲ್ಪಕ್ಕೆ ಹಾವಿನ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನೀಶ್ವರ ಗುಡಿ ಕಾಯಕಲ್ಪಕ್ಕೆ ಹಾವಿನ ಕಾಟ

ಖೋದಾನಪುರ (ಚನ್ನಮ್ಮನ ಕಿತ್ತೂರು): ಶತಮಾನಗಳ ಇತಿಹಾಸ ಪರಂಪರೆಯಿರುವ ಸ್ಥಳೀಯ ಮುನೀಶ್ವರ ಗುಡಿಯ ಜೀರ್ಣೋದ್ಧಾರ ಕೈಗೊಳ್ಳಲು ಗ್ರಾಮ ಪಂಚಾಯಿತಿ ನಿರ್ಧರಿಸಿದ್ದು, ಅದನ್ನು ಬಹುತೇಕ ನೆಲಸಮ ಮಾಡಲಾಗಿದೆ.ಆದರೆ, ಮುನೀಶ್ವರ ಸಮಾಧಿ ಸ್ಥಳವನ್ನು ಮಾತ್ರ ನೆಲಸಮ ಮಾಡಲು ಸಾಧ್ಯವಾಗುತ್ತಿಲ್ಲ. ಸಮಾಧಿ ನಾಶಪಡಿಸಲು ಜೆಸಿಬಿ ಯಂತ್ರ ಹೋದರೆ ಅದರ ಮುಂದೆ ಹಾವು ಹೆಡೆ ಬಿಚ್ಚಿ ನಿಲ್ಲುತ್ತಿರುವುದು ಗ್ರಾಮಸ್ಥರ ತೀವ್ರ ಕುತೂಹಲ ಹಾಗೂ ಭೀತಿಗೆ ಕಾರಣವಾಗಿದೆ.~ಕಳೆದ ಎರಡು ತಿಂಗಳ ಹಿಂದೆಯೇ ಮುನೀಶ್ವರ ಸಮಾಧಿ ಒಡೆಯಲು ಪ್ರಯತ್ನಿಸಲಾಗಿತ್ತು. ಇದರ ಸುತ್ತಲಿನ ಪ್ರದೇಶವನ್ನು ಈಗಾಗಲೇ ಒಡೆದು ಹಾಕಲಾಗಿದೆ. ಸಮಾಧಿಯಿರುವ ಸ್ಥಳದತ್ತ ಯಂತ್ರ ಹೋದರೆ ಹಾವು ಬುಸುಗುಟ್ಟತ್ತ ನಿಲ್ಲುತ್ತಿವೆ~ ಎನ್ನುತ್ತಾರೆ ಗ್ರಾಮಸ್ಥರು.~ಈಗಾಗಲೇ ಎರಡು ಹಾವುಗಳನ್ನು ಬಡಿದು ಸಾಯಿಸಲಾಗಿದೆ. ಮತ್ತೆ, ಮತ್ತೆ ಹಾವುಗಳು ಬರುತ್ತಿರುವುದರಿಂದ ಭೀತಿಗೆ ಒಳಗಾದ ಜೆಸಿಬಿ ಚಾಲಕ ಕೆಲಸ ಸ್ಥಗಿತಗೊಳಿಸಿದ~ ಎಂದು ಅವರು ಹೇಳುತ್ತಾರೆ.

ಜೀವಂತ ಸಮಾಧಿ: ~ಸುಮಾರು ಐದು ಶತಮಾನಗಳ ಹಿಂದೆ ಇಲ್ಲಿ ಮುನೀಶ್ವರ ಎಂಬ ಯೋಗಿ ಇದ್ದರು. ಅವರು ಇದೇ ಸ್ಥಳದಲ್ಲಿ ಜೀವಂತ ಸಮಾಧಿ ಆಗಿದ್ದಾರೆ. ಇಂತಹ ಮುನಿಗಳ ಸಮಾಧಿ ಸ್ಥಳ ಕಿತ್ತೆಸೆಯುತ್ತಿರುವುದರಿಂದ ಹೀಗಾಗುತ್ತಿರಬಹುದು~ ಎಂಬ ವಾದ ಕೆಲವರದಾಗಿದೆ.`ಪಾರಂಪರಿಕ ಈ ಗುಡಿಗೆ ಬೆಂಗಳೂರು, ಧಾರವಾಡ, ಸವದತ್ತಿ, ಹಂಗರಕಿ, ದಾಂಡೇಲಿ, ದೊಡವಾಡ, ನಡವಿನಕೊಪ್ಪ, ಖೋದಾನಪುರ ಸೇರಿದಂತೆ ಅನೇಕ ಗ್ರಾಮಗಳ ನೂರಾರು ಭಕ್ತರಿದ್ದಾರೆ. ತಮ್ಮ ಇಷ್ಟಾರ್ಥಗಳನ್ನು ಇಲ್ಲಿ ಈಡೇರಿಸಿಕೊಳ್ಳುತ್ತಾರೆ. ಅವರೆಲ್ಲರ ಶ್ರದ್ಧೆ ಮತ್ತು ಅತಿ ನಂಬಿಕೆಯ ಸ್ಥಳ ಇದಾಗಿದೆ. ಪ್ರತಿವರ್ಷ ಜಾತ್ರೆಯ ದಿನದಂದು ಕಲ್ಲಿನ ರಥೋತ್ಸವ ಕೂಡ ಬಹಳ ಹಿಂದೆ ಇಲ್ಲಿ ಜರುಗುತ್ತಿತ್ತು~ ಎಂದು ಸ್ಮರಿಸುತ್ತಾರೆ.ವಂಶಪಾರಂಪರ‌್ಯವಾಗಿ ಮಠದ್ ಎಂಬ ಮನೆತನದವರು ಈ ಗುಡಿಯ ಅರ್ಚಕರಾಗಿದ್ದಾರೆ. ಸದ್ಯ ಈರಯ್ಯ ಬಸಯ್ಯ ಮಠದ್ ಮತ್ತು ಮುನೀಶ್ ಸೋದರರು ನಿತ್ಯ ಪೂಜೆ ನಡೆಸಿಕೊಂಡು ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರ ತಲೆಯಲ್ಲಿ ಇದರ ಜೀರ್ಣೋದ್ಧಾರದ ವಿಚಾರ ಬಂದ ನಂತರ ಗುಡಿ ಸಮೇತ ಅದಕ್ಕೆ ಹೊಂದಿಕೊಂಡಿದ್ದ ಒಂದು ಮನೆಯನ್ನು ಧ್ವಂಸಗೊಳಿಸಲಾಗಿದೆ. ಮತ್ತೊಂದು ಚಿಕ್ಕ ಮನೆಯಲ್ಲಿ ಈ ಇಬ್ಬರು  ಸಹೋದರರ ಸಂಸಾರಗಳು ವಾಸವಾಗಿವೆ. ಈ ಮನೆಯ ಚಿಕ್ಕ ಕೋಣೆಯಲ್ಲಿ ದೇವರ ಚಿಕ್ಕ ಮೂರ್ತಿಗಳನ್ನು ಇಡಲಾಗಿದೆ.`ಮಠಕ್ಕೆಂದೇ ಐದು ಎಕರೆ ಕೃಷಿ ಜಮೀನಿತ್ತು. ಇದರಲ್ಲಿ ಮೂರು ಎಕರೆ ಊಳುವವನೇ ಒಡೆಯ ಎಂಬ ಕಾಯ್ದೆಯಡಿ ರೈತನ ಪಾಲಾಯಿತು. ಈಗ ಎರಡು ಎಕರೆ ಮಾತ್ರ ಉಳಿದುಕೊಂಡಿದೆ~ ಎಂದು ಈರಯ್ಯ ಹೇಳುತ್ತಾರೆ.ಹಾವಿನ ವಾಸಸ್ಥಾನ: `ಕಲ್ಲು, ಮಣ್ಣಿನಿಂದ ಈ ಗುಡಿ ಹಾಗೂ ಮುನೀಶ್ವರ ಸಮಾಧಿಯನ್ನು ನಿರ್ಮಿಸಲಾಗಿದೆ.

ಮಣ್ಣಿನಿಂದಾಗಿ ಹಾವಿನ ಹುತ್ತವೇ ಮುನೀಶ್ವರ ಸಮಾಧಿ ಕೆಳಗೆ ನಿರ್ಮಾಣಗೊಂಡಿದೆ. ಹೀಗಾಗಿ ಅಲ್ಲಿ ಹಾವುಗಳ ವಾಸವಿರಬಹುದು~ ಎಂದು ಕೆಲವರು ಹೇಳುತ್ತಾರೆ.`ಸಮಾಧಿ ತೆರವುಗೊಳಿಸಿ ಸಂಪೂರ್ಣ ಜೀರ್ಣೋದ್ಧಾರ ಮಾಡುವುದು ಸಾಧ್ಯವಾದೀತೇ~ ಎಂಬುದು ಗ್ರಾಮಸ್ಥರ ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.