ಎ. ಕೆ. ರಾಮಾನುಜನ್ ಅವರ `ಥ್ರೀ ಹಂಡ್ರೆಡ್ ರಾಮಾಯಣಾಸ್: ಫೈವ್ ಎಕ್ಸಾಂಪಲ್ಸ್ ಅಂಡ್ ಥ್ರೀ ಥಾಟ್ಸ್ ಆನ್ ಟ್ರಾನ್ಸ್ಲೇಷನ್ಸ್~ (Three Hundred Ramayanas: Five Examples and Three Thoughts on Translations) ಎಂಬ ಪ್ರಸಿದ್ಧ ಲೇಖನ ಮೊದಲಿಗೆ ಚಿಕಾಗೋ ವಿ.ವಿ.ಯಲ್ಲಿ 1985-86ರಲ್ಲಿ ನಡೆದ ಕಮ್ಮಟವೊಂದರಲ್ಲಿ ಮಾಡಿದ ಭಾಷಣ; ಅನಂತರ ಅದನ್ನು ವಿಸ್ತರಿಸಿ, ಬರೆದ ಲೇಖನ ಪಾಲಾ ರಿಚ್ಮನ್ ಅವರ Many Ramayanas (1991) ಎಂಬ ಸಂಕಲನದ ಮೊದಲ ಲೇಖನವಾಗಿ ಪ್ರಕಟವಾಯಿತು.

ವಿನಯ್ ಧಾರ್ವಾಡಕರ್ ಸಂಪಾದಿಸಿರುವ ರಾಮಾನುಜನ್ ಅವರ ಸಮಗ್ರ ಲೇಖನಗಳ ಸಂಕಲನದಲ್ಲಿ ಇದು ಸೇರ್ಪಡೆಯಾಗಿದೆ (1999; ಪು. 131-160).

ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ರಾಮ ಕಥೆಗಳನ್ನಾಧರಿಸಿ ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ಭಾರತದ ಆದಿಕಾವ್ಯವನ್ನು ಬರೆದ ನಂತರ, ಕಳೆದ 2500 ವರ್ಷಗಳ ಅವಧಿಯಲ್ಲಿ, ಭಾರತದ ಹಾಗೂ ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳಲ್ಲಿಯೂ ರಾಮಕಥೆಯು ಮತ್ತೆ ಮತ್ತೆ ಕಥಿಸಲ್ಪಟ್ಟಿದೆ; ಮತ್ತು, ಈ ಪರಂಪರೆ ಇನ್ನೂ ಮುಂದುವರಿದಿದೆ.

ಪ್ರಾಯಃ ಸಾವಿರವನ್ನೂ ಮೀರುವ ಇವೆಲ್ಲಾ ರಾಮಾಯಣಗಳನ್ನು ಯಾವ ಪರಿಪ್ರೇಕ್ಷ್ಯದಿಂದ ನೋಡಬಹುದು? ಈ ರಾಮಾಯಣಗಳಲ್ಲಿ ಕಂಡುಬರುವ ಭಿನ್ನತೆಗಳಲ್ಲಿ ಏನಾದರೂ ಸಮಾನ ವಿನ್ಯಾಸವಿದೆಯೆ? ರಾಮಾನುಜನ್ ಅವರ ತೌಲನಿಕ ಲೇಖನ ಈ ಕಠಿಣ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸುತ್ತದೆ.

ಈ ದೀರ್ಘ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ವಿಷಯಗಳ ಹರಹು ಹೀಗಿದೆ: ಪೀಠಿಕೆ, ವಾಲ್ಮೀಕಿ ಮತ್ತು ಕಂಬನ್, ಜೈನ ರಾಮಾಯಣಗಳು, ಲಿಖಿತ-ಮೌಖಿಕ ಕಥನಗಳು, ದಕ್ಷಿಣ ಏಷ್ಯಾದ ಒಂದು ರಾಮಕಥೆ, ಭಿನ್ನತೆಗಳ ವಿನ್ಯಾಸ, ಭಾಷಾಂತರಗಳ ಸ್ವರೂಪ, ಮತ್ತು ರಾಮಾಯಣ ಶ್ರವಣದ ಪರಿಣಾಮ.

ಪೀಠಿಕೆಯಲ್ಲಿ, ಒಂದು ಜಾನಪದ ಕಥೆಯ ಮೂಲಕ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ, ಮೌಖಿಕ ಹಾಗೂ ಲಿಖಿತ ಪರಂಪರೆಗಳಲ್ಲಿ ಅನೇಕ ರಾಮಾಯಣಗಳಿರುವುದನ್ನು ದಾಖಲಿಸಿ, ತಮ್ಮ ಲೇಖನದ ಉದ್ದೇಶ `ಈ ಬಗೆಯ ನೂರಾರು ರಾಮಾಯಣಗಳ ಭಿನ್ನತೆಗಳಲ್ಲಿ ಇರಬಹುದಾದ `ವಿನ್ಯಾಸ~ವನ್ನು ಗುರುತಿಸುವುದು~ ಎಂದು ರಾಮಾನುಜನ್ ಮಂಡಿಸುತ್ತಾರೆ.

ಅನಂತರ, ವಾಲ್ಮೀಕಿ-ಕಂಬನ್ ರಾಮಾಯಣಗಳಲ್ಲಿರುವ ಅಹಲ್ಯಾ ಪ್ರಕರಣವನ್ನು ತುಲನಾತ್ಮಕವಾಗಿ ವಿಶ್ಲೇಷಿಸುತ್ತಾ, ಕಂಬನ್ ರಾಮಾಯಣದಲ್ಲಿರುವ ಈ ಪ್ರಸಂಗದ ನಾಟಕೀಯತೆ ಹಾಗೂ ತಮಿಳು ಭಕ್ತಿಪಂಥದ ಪ್ರಭಾವ ಇತ್ಯಾದಿ ಅಂಶಗಳನ್ನು ರಾಮಾನುಜನ್ ವಿವರಿಸುತ್ತಾರೆ: ವಾಲ್ಮೀಕಿ ರಾಮಾಯಣದಲ್ಲಿ ಇಂದ್ರನು ಅಹಲ್ಯೆಯನ್ನು ವಂಚಿಸಿ ಭೋಗಿಸಿದರೆ, ಕಂಬನ್ ಕೃತಿಯಲ್ಲಿ, ತಾನು ತಪ್ಪು ಮಾಡುತ್ತಿದ್ದೆೀನೆಂದು ಅಹಲ್ಯೆಗೆ ಗೊತ್ತಿದ್ದರೂ ತನ್ನ ಮೋಹವನ್ನು ಜಯಿಸಲಾರದೆ ಅವಳು ಇಂದ್ರನಿಗೆ ವಶವಾಗುತ್ತಾಳೆ.

ಅನಂತರ, ವಿಮಲಸೂರಿಯ ಪಉಮ ಚರಿಯದಿಂದ ಪ್ರಾರಂಭವಾಗುವ ಜೈನ ರಾಮಾಯಣಗಳು ಮತ್ತು ವಾಲ್ಮೀಕಿ ರಾಮಾಯಣ ಇವುಗಳ ನಡುವಿನ ಭಿನ್ನತೆಗಳನ್ನು ಹೀಗೆ ಗುರುತಿಸುತ್ತಾರೆ: ಜೈನ ರಾಮಾಯಣಗಳಲ್ಲಿ ರಾವಣನು ಕ್ರೂರ ರಾಕ್ಷಸನಲ್ಲ.

63 ಶಲಾಕಾಪುರುಷರಲ್ಲಿ ಒಬ್ಬ ಪ್ರತಿವಾಸುದೇವ; ಉದಾತ್ತ ರಾವಣನಿಗಿರುವ ಒಂದೇ ಒಂದು ಮಿತಿಯೆಂದರೆ ಸೀತಾ ವ್ಯಾಮೋಹ; ರಾವಣ ವಧೆಯಾಗುವುದು ಲಕ್ಷ್ಮಣನಿಂದ; ರಾವಣ, ಕುಂಭಕರ್ಣ, ವಾಲಿ, ಹನುಮಂತ, ಜಾಂಬವಂತ, ಮುಂತಾದವರು ರಾಕ್ಷಸರಾಗಲಿ ಕಪಿ ಕರಡಿಗಳಾಗಲಿ ಅಲ್ಲ. ಅವರೆಲರ್ಲೂ ವಿದ್ಯಾಧರ ಕುಲಕ್ಕೆ ಸೇರಿದವರು; ಇತ್ಯಾದಿ.

ಮುಂದಿನ ಭಾಗದಲ್ಲಿ, ಲಿಖಿತ-ಮೌಖಿಕ ರಾಮಾಯಣ ಪರಂಪರೆಗಳನ್ನು ವ್ಯಾಖ್ಯಾನಿಸುತ್ತಾ, ರಾಮಾನುಜನ್ ಕನ್ನಡದ (ರಾಗೌ ಮುಂತಾದವರು ಸಂಪಾದಿಸಿರುವ, 1973ರಲ್ಲಿ ಪ್ರಕಟವಾದ) `ತಂಬೂರಿ ರಾಮಾಯಣ~ವನ್ನು ದೀರ್ಘವಾಗಿ ಚರ್ಚಿಸುತ್ತಾರೆ.

ಮಕ್ಕಳಿಲ್ಲದ ರಾವಣನು ಮುನಿ ಕೊಟ್ಟ ಹಣ್ಣನ್ನು ತಾನೇ ಸೇವಿಸಿ, ಗರ್ಭವನ್ನು ಧರಿಸಿ, `ಸೀತಾಗ~ ಹೊರಬಂದ ಮಗು `ಸೀತೆ~; ಮುಂದೆ, ಅವಳು ತನ್ನ ಕುಲವನ್ನೇ ನಾಶಮಾಡುತ್ತಾಳೆಂಬ ಜೋತಿಷ್ಕರ ಹೇಳಿಕೆಯನ್ನು ನಂಬಿ, ಅವಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾನೆ ಮತ್ತು ಜನಕನಿಗೆ ಆ ಪೆಟ್ಟಿಗೆ ಸಿಕ್ಕಿ, ಅವನು ಆ ಮಗುವನ್ನು ತಂದು ಸಾಕುತ್ತಾನೆ.

ರಾಮಾನುಜನ್ ಇಲ್ಲಿ ಗಮನಿಸುವ ಎರಡು ಪ್ರಮುಖ ಅಂಶಗಳೆಂದರೆ 1) ಸೀತೆ ರಾವಣನ ಮಗಳು, 2) ರಾವಣನು ಗರ್ಭಧಾರಣೆ ಮಾಡುವುದು. ಈ ಎರಡೂ ಘಟನೆಗಳ ಆಳದಲ್ಲಿ ಸ್ತ್ರೀವಿಶಿಷ್ಟ ಗರ್ಭಕೋಶ ಹಾಗೂ ಪ್ರಸವ ಇವುಗಳನ್ನು ಕುರಿತು ಪುರುಷನಿಗಿರುವ ಅಸೂಯೆ ಮತ್ತು ತನ್ನ ಮಗಳನ್ನು ಕುರಿತು ತಂದೆಗಿರುವ `ಈಡಿಪಸ್~ ಅಥವಾ `ಅಗಮ್ಯ ಗಮನ~ದ ಆಶಯ, ಇತ್ಯಾದಿಗಳನ್ನು ಗುರುತಿಸಿ, ರಾಮಾನುಜನ್ ಈ ಆಶಯಗಳು ಭಾರತೀಯ ಸಾಹಿತ್ಯದಲ್ಲಿ ವಿಫುಲವಾಗಿವೆ ಎಂದು ಮಂಡಿಸುತ್ತಾರೆ.

ಅನಂತರ, ಥಾಯ್ ಭಾಷೆಯಲ್ಲಿರುವ ರಾಮಾಕೀನ್ ಎಂಬ ಹೆಸರಿನ ರಾಮಾಯಣ ವನ್ನು ವಿಶ್ಲೇಷಿಸುತ್ತಾ, ರಾಮಾನುಜನ್ ಈ ರಚನೆಯ ಭಿನ್ನತೆಗಳನ್ನು ಗುರುತಿಸುತ್ತಾರೆ: ಇಲ್ಲಿ ಸೀತೆಗೆ ವನವಾಸ ಪ್ರಾಪ್ತವಾಗುವುದು ಶೂರ್ಪನಖಿಯ ಕುಯುಕ್ತಿಯಿಂದ (ಕನ್ನಡದ ಚಿತ್ರಪಟ ರಾಮಾಯಣದಲ್ಲಿರುವಂತೆ); ಸೀತೆ ರಾವಣ-ಮಂಡೋದರಿಯರ ಮಗಳು, ಆದರೆ ಭವಿಷ್ಯದ್ವಾಣಿಗೆ ಹೆದರಿ ರಾವಣನು ಅವಳನ್ನು ದೂರಮಾಡುತ್ತಾನೆ; ಇತ್ಯಾದಿ.

ಈ ಬಗೆಯಲ್ಲಿ, ವೈದಿಕ ಪರಂಪರೆಯ ರಾಮಾಯಣಗಳು, ಜೈನ ಪರಂಪರೆಯ ಹಾಗೂ ಮೌಖಿಕ ಪರಂಪರೆಯ ರಾಮಾಯಣಗಳು ಮತ್ತು ಆಗ್ನೇಯ ಏಷ್ಯಾದ ರಾಮಾಯಣಗಳು, ಇವುಗಳ ನಡುವಿನ ಸಮಾನತೆ-ಭಿನ್ನತೆಗಳನ್ನು ಗುರುತಿಸಿದ ನಂತರ, ಈ ಲೇಖನದ ಎರಡು ಮುಖ್ಯ ಭಾಗಗಳು ಬರುತ್ತವೆ.

`ಭಿನ್ನತೆಗಳ ವಿನ್ಯಾಸ~ ಎಂಬ ಭಾಗದಲ್ಲಿ, ಹೇಗೆ ಈ ಪರಂಪರೆಗಳಲ್ಲಿ ಎರಡು ಭಿನ್ನ ಮುಕ್ತಾಯಗಳ (ಪಟ್ಟಾಭಿಷೇಕ/ ಲವ-ಕುಶ ಜನನ) ಹಾಗೂ ಎರಡು ಭಿನ್ನ ಪ್ರಾರಂಭಗಳ ರಾಮಾಯಣಗಳಿವೆ; ಮತ್ತು ಇವುಗಳು ಆಳದಲ್ಲಿ (ಮುಖ್ಯವಾಗಿ ಸೀತೆ) ಫಲವಂತಿಕೆ ಮತ್ತು ನಿಸರ್ಗ-ಮಾನವ ಸಂಬಂಧಗಳ ರೂಪಕಗಳು ಎಂದು ರಾಮಾನುಜನ್ ವಿವರಿಸುತ್ತಾರೆ.

ಹಾಗೆಯೇ, ಪ್ರತಿಯೊಂದು ರಾಮಾಯಣವನ್ನೂ ಅದರ `ಸಂದರ್ಭ,~ ಎಂದರೆ, ಆ ಕೃತಿ ರಚನೆಯಾದ ಭಾಷಿಕ ಸಂದರ್ಭ, ಪ್ರಾದೇಶಿಕ ಪರಂಪರೆ, ಆ ಸಮುದಾಯದ/ಲೇಖಕನ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಮೌಲ್ಯಗಳು, ಇತ್ಯಾದಿ ರೂಪಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾರೆ.

ಈ ಸಂದರ್ಭದಲ್ಲಿಯೇ ಅವರ ಪ್ರಖ್ಯಾತ ಹೇಳಿಕೆ ಬರುತ್ತದೆ: `ರಾಮಾಯಣವೆಂದರೆ ಭಾರತದ ಎರಡನೆಯ ಭಾಷೆ~. ಮುಂದಿನ ಭಾಗದಲ್ಲಿ, ರಾಮಕಥೆಯ ಈ ಭಿನ್ನ ರೂಪಣೆಗಳನ್ನು `ಅನುವಾದ~ಗಳೆಂದು ಕರೆಯಬಹುದು ಎಂದು ವಾದಿಸುತ್ತಾ, ರಾಮಾನುಜನ್ ಮೂರುಬಗೆಯ ಅನುವಾದ ಮಾರ್ಗಗಳನ್ನು ವಿವರಿಸುತ್ತಾರೆ (Iconic/Indexical/ Symbolic). ಅನಂತರ, ಎಲ್ಲಾ ರಾಮಾಯಣಗಳನ್ನೂ ಒಳಗೊಳ್ಳುವ ಒಂದು ಸ್ವೋಪಜ್ಞ ವಿಮರ್ಶಾತ್ಮಕ ಚೌಕಟ್ಟನ್ನು ರೂಪಕಾತ್ಮಕವಾಗಿ ರಾಮಾನುಜನ್ ಹೀಗೆ ಕಟ್ಟುತ್ತಾರೆ:

`ನಿಯತವಾಗಿ, ಮತ್ತೆ ಮತ್ತೆ ರಾಮಾಯಣಗಳು ಸೃಷ್ಟಿಯಾದ ಸಾಂಸ್ಕೃತಿಕ ಪ್ರದೇಶವನ್ನು ಬಗೆಬಗೆಯ ಸೂಚಕಗಳಿಂದ ತುಂಬಿರುವ ಒಂದು ಅಗಾಧ ಸರೋವರದಂತೆ ನೋಡಬಹುದು.

ಈ ಸೂಚಕಗಳೆಂದರೆ, ಕಥನ ಚೌಕಟ್ಟುಗಳು, ಪಾತ್ರಗಳು, ಹೆಸರುಗಳು, ಭೂಗೋಳ, ಘಟನೆಗಳು ಮತ್ತು ಸಂಬಂಧಗಳು, ಇತ್ಯಾದಿ. ... ಪ್ರತಿಯೊಬ್ಬ ಭಾರತೀಯ ಲೇಖಕನೂ ಈ ಸರೋವರದಲ್ಲಿ ಮುಳುಗಿ ತನ್ನದೇ ಆದ ಒಂದು ವಿಶಿಷ್ಟ ಪಠ್ಯವನ್ನು ಹೊರತೆಗೆಯುತ್ತಾನೆ... ಈ ಅರ್ಥದಲ್ಲಿ (ರಾಮಾಯಣದ) ಯಾವ ಪಠ್ಯವೂ ಮೂಲವಲ್ಲ. ಆದರೆ ಯಾವ ಕಥನವೂ ಕೇವಲ ಮರುಕಥನವಲ್ಲ; ಮತ್ತು ಈ ಕಥೆಗೆ ಕೊನೆಯಿಲ್ಲ. ಆದರೆ ಪ್ರತಿಯೊಂದು ಪಠ್ಯವೂ ಸ್ವಯಂ ಪೂರ್ಣವಾಗಿರುತ್ತದೆ~ (ಪು. 158).

ಕೊನೆಯಲ್ಲಿ, ರಾಮಾಯಣ-ಶ್ರವಣದ ಪರಿಣಾಮವನ್ನು ದಾಖಲಿಸುವ ಒಂದು ಕಥೆಯೊಡನೆ ರಾಮಾನುಜನ್ ತಮ್ಮ ಲೇಖನವನ್ನು ಮುಗಿಸುತ್ತಾರೆ.

ಕಳೆದ ಎರಡು ದಶಕಗಳಲ್ಲಿ ಅಂತರರಾಷ್ಟ್ರೀಯ ವಿದ್ವತ್ ಮನ್ನಣೆಯನ್ನು ಗಳಿಸಿರುವ ಹಾಗೂ ಸಾಂಸ್ಕೃತಿಕ ತೌಲನಿಕ ವಿಮರ್ಶೆಯ ಒಂದು ಪ್ರಮುಖ ಮಾದರಿಯಾಗಿರುವ ರಾಮಾನುಜನ್ ಅವರ ಈ ಲೇಖನ ಇತ್ತೀಚೆಗೆ ದೆಹಲಿ ವಿ.ವಿ.ಯಲ್ಲಿ ವಾದ-ವಿವಾದಗಳಿಗೆ ಗುರಿಯಾಗಿ, ಕೊನೆಗೆ ಅದನ್ನು ಪಠ್ಯಾವಳಿಯಿಂದ ಬಿಟ್ಟಿರುವುದು ಅತ್ಯಂತ ಖೇದದ ಸಂಗತಿ.
2006ರಲ್ಲಿ ಈ ಲೇಖನ ಬಿ.ಎ. ಆನರ್ಸ್ `ಕಲ್ಚರಲ್ ಹಿಸ್ಟರಿ~ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿತು; 2008ರಲ್ಲಿಯೇ ಎಬಿವಿಪಿ ಕಾರ್ಯಕರ್ತರು ಈ ಲೇಖನದ ವಿರುದ್ಧ ಗಲಭೆ ಮಾಡಿ, ಇತಿಹಾಸ ವಿಭಾಗಕ್ಕೆ ನುಗ್ಗಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು.

ಅನಂತರ, ಈ ವಿಷಯ ಸುಪ್ರೀಂ ಕೋರ್ಟ್ಗೆ ಹೋಗಿ, ಅದರ ಆದೇಶದಂತೆ ರಚಿಸಲ್ಪಟ್ಟ ನಾಲ್ಕು ತಜ್ಞರ ಸಮಿತಿಯಲ್ಲಿ ಮೂವರು `ಇದು ಮೌಲಿಕ ಸಂಶೋಧನೆಯನ್ನು ಒಳಗೊಂಡಿದೆ~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು; ಆದರೆ, ನಾಲ್ಕನೆಯವರು `ಈ ಲೇಖನವನ್ನು ಹಿಂದುಗಳಲ್ಲದವರು ಪಾಠ ಮಾಡಲು ಅಸಾಧ್ಯ; ಮತ್ತು ಇದನ್ನು ಅರ್ಥಮಾಡಿಕೊಳ್ಳಲು ಕಿಶೋರಾವಸ್ಥೆಯ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ; ಆದುದರಿಂದ ಇದನ್ನು ಪಠ್ಯಾವಳಿಯಿಂದ ತೆಗೆಯಬೇಕು~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು.

ಎರಡು ವಾರಗಳ ಹಿಂದೆ, ಈ ಒಬ್ಬರ ವಾದವನ್ನು ಒಪ್ಪಿ, ದೆಹಲಿ ವಿ. ವಿ.ಯ ಅಕಡೆಮಿಕ್ ಕೌನ್ಸಿಲ್ ಈ ಲೇಖನವನ್ನು ಪಠ್ಯಾವಳಿಯಿಂದ ತೆಗೆದು ಹಾಕಿತು.

ಎಬಿವಿಪಿ ಮತ್ತು ಇತರ ಬಲಪಂಥೀಯರು ಈ ಲೇಖನವನ್ನು ವಿರೋಧಿಸುವ ಕಾರಣಗಳು (ಪತ್ರಿಕೆಗಳಲ್ಲಿ ಬಂದಂತೆ) ಮೂರು: ಕೆಲವು ರಾಮಾಯಣಗಳು ಸೀತೆ ರಾವಣನ ಮಗಳೆಂದು ನಿರೂಪಿಸುತ್ತವೆ ಎಂಬುದನ್ನು ಈ ಲೇಖನ ಪ್ರಸ್ತಾಪಿಸುತ್ತದೆ; ಅವತಾರ ಪುರುಷನಾದ ರಾಮನನ್ನು ಮಾನವನೆಂದು ಕೆಲವು ರಾಮಾಯಣಗಳು ನಿರೂಪಿಸುವುದನ್ನು ರಾಮಾನುಜನ್ ದಾಖಲಿಸುತ್ತಾರೆ; ಮತ್ತು, ಈ ಬಗೆಯ ಚರ್ಚೆ `ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ.~

ಸೀತೆ ರಾವಣನ ಮಗಳೆಂದು ಕನ್ನಡ-ತೆಲುಗು ಮೌಖಿಕ ರಾಮಾಯಣಗಳಲ್ಲಿ. ಜೈನ ಪರಂಪರೆಯ ವಾಸುದೇವಹಿಂಡಿ ಎಂಬ ಕಥನದಲ್ಲಿ, ಮತ್ತು ಆಗ್ನೇಯ ಏಷ್ಯಾದ (ಥಾಯ್) ರಾಮಾಕೀನ್ ಕೃತಿಯಲ್ಲಿ ನಿರೂಪಿಸಲ್ಪಟ್ಟಿದೆ ಎಂಬುದನ್ನು ರಾಮಾನುಜನ್ ದಾಖಲಿಸುತ್ತಾರೆ, ನಿಜ.

ಆದರೆ, ಇನ್ನೂ ಅನೇಕ ಲಿಖಿತ-ಮೌಖಿಕ ರಾಮಾಯಣಗಳಲ್ಲಿ ಸೀತೆ ರಾವಣನ ಮಗಳೆಂದು ನಿರೂಪಿಸಲ್ಪಟ್ಟಿದೆ: 10 ನೆಯ ಶತಮಾನದ ಅಭಿನಂದನನ ಸಂಸ್ಕೃತ ರಾಮಚರಿತ; 12 ನೆಯ ಶತಮಾನದ ಸಂಸ್ಕೃತ ಅದ್ಭುತ ರಾಮಾಯಣ; ಒರಿಯಾ ಭಾಷೆಯ, 18ನೆಯ ಶತಮಾನದ ಸರಳದಾಸನ ರಾಮಾಯಣ; ಮೌಖಿಕ ಸಂಪ್ರದಾಯದ ಕುಕಣಾ ರಾಮಾಯಣ, ಅವಧ್ ರಾಮಾಯಣ ಇತ್ಯಾದಿ.

ಭಿನ್ನ ಕಾಲಘಟ್ಟಗಳಲ್ಲಿ, ಭಿನ್ನ ಭಾಷಿಕ ಸಮುದಾಯಗಳಲ್ಲಿ ಪ್ರಚಲಿತವಿದ್ದ `ಕಥೆ-ಐತಿಹ್ಯ~ಗಳನ್ನು ಆಧರಿಸಿ ಈ ಕೃತಿಗಳು ರಚಿಸಲ್ಪಟ್ಟಿವೆ; ಮತ್ತು, ವಾಲ್ಮೀಕಿ ರಾಮಾಯಣಕ್ಕೂ ಮೊದಲು ರಾಮ-ರಾವಣ ಕಥೆಗಳು ಜಾತಕ ಕಥೆಗಳಲ್ಲಿ ಇದ್ದುವು ಎಂಬುದನ್ನು ಮಿರ್ಜಿ ಆಣ್ಣಾರಾಯರು, ಜಾಕೋಬಿ, ರೋಮಿಲಾ ಥಾಪರ್ ಮುಂತಾದವರು ಅಧಿಕಾರಯುತವಾಗಿ ತೀರ್ಮಾನಿಸಿದ್ದಾರೆ.

ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು ರಾಮಾನುಜನ್ ಅವರ ವಿಮರ್ಶಾತ್ಮಕ ನಿಲುವು: ತೌಲನಿಕ ವಿಮರ್ಶೆಯಲ್ಲಿ `ಇದು ಸರಿ, ಇದು ತಪ್ಪು~ ಎಂಬಂತಹ ಮೌಲ್ಯಾತ್ಮಕ ನಿಲುವಿರುವುದಿಲ್ಲ. ಅದರ ಬದಲು ವಿವರಣೆ ಹಾಗೂ ಸಾಂಸ್ಕೃತಿಕ ವ್ಯಾಖ್ಯಾನ. ರಾಮಾನುಜನ್ ಅವರದು ಈ ಬಗೆಯ ವಸ್ತುನಿಷ್ಠ ತೌಲನಿಕ ವ್ಯಾಖ್ಯಾನ.

ಇನ್ನೂ ಮುಖ್ಯವಾಗಿ ಶ್ರೀರಾಮನ ದೈವತ್ವದ/ ಚಾರಿತ್ರಿಕತೆಯ ಪ್ರಶ್ನೆ. ಪ್ರಾಚೀನ ಕಾಲದಿಂದಲೂ ಭಾರತೀಯ ವಿದ್ವಾಂಸರು ಮಹಾಭಾರತವನ್ನು ಇತಿಹಾಸವೆಂದು ಮತ್ತು ರಾಮಾಯಣವನ್ನು ಕಾವ್ಯವೆಂದು ಪರಿಗಣಿಸಿದ್ದಾರೆ.

ರಾಮನ ಮಾನವತೆಯನ್ನು ವಾಲ್ಮೀಕಿ ಮುನಿಗಳ ರಾಮಾಯಣದ ಎರಡನೆಯ ಶ್ಲೋಕವೇ ದೃಢಪಡಿಸುತ್ತದೆ: `ಕೋ..ನಸ್ಮಿನ್ ಸಂಪ್ರತಮ್ ಲೋಕೆ..~ (ಎಂದರೆ `ಈ ಲೋಕದಲ್ಲಿ ಯಾರು ಗುಣವಾನ್, ವೀರ್ಯವಾನ್ ಇತ್ಯಾದಿ ವಿಶೇಷಣಗಳಿಗೆ ಪಾತ್ರರಾದವರು~) ಎಂದು ಮುನಿಗಳು ನಾರದರನ್ನು ಕೇಳುತ್ತಾರೆ; ಮತ್ತು ನಾರದರು ಶ್ರೀರಾಮನನ್ನು ಹೆಸರಿಸುತ್ತಾರೆ.
ಹಾಗೆಯೇ, ಕಾವ್ಯದ ಕೊನೆಯಲ್ಲಿ ಶ್ರೀರಾಮನು ತಾನು ಮನುಷ್ಯಮಾತ್ರ ಎಂಬುದನ್ನು ಹೀಗೆ ಸ್ಪಷ್ಟಪಡಿಸುತ್ತಾನೆ: `ಆತ್ಮಾನಂ ಮಾನುಷಂ ಮನ್ಯೆ~.

Speaking of Siva, Hymns for the Drowning, Poems of ove and War ಇತ್ಯಾದಿ ಅನುವಾದಿತ ಕೃತಿಗಳ ಮೂಲಕ ಹಾಗೂ ತಮ್ಮ ಸ್ವೋಪಜ್ಞ ವಿಮರ್ಶಾತ್ಮಕ ಲೇಖನಗಳ ಮೂಲಕ ರಾಮಾನುಜನ್ ಭಾರತದ ಪ್ರಾಂತೀಯ ಭಾಷೆಗಳ ಸಾಹಿತ್ಯ-ಸಂಸ್ಕೃತಿಗಳನ್ನು ಹೊರ ಜಗತ್ತಿಗೆ ಪರಿಚಯಿಸಿ, ಆ ಮೂಲಕ `ಓರಿಯೆಂಟಲಿಸ್ಟ್~ ಚಿಂತನೆಗೆ ವಸಾಹತೋತ್ತರ ರೂಪವನ್ನು ಕೊಟ್ಟರು. ಅಂತಹ ಭಾರತೀಯ ವಿದ್ವಾಂಸನ ಪ್ರಬುದ್ಧ ಸಂಶೋಧನಾ ಲೇಖನವನ್ನು ಕುರಿತ ಪ್ರತಿಭಟನೆ ಅತೀವ ದುರದೃಷ್ಟಕರ ಎಂದಷ್ಟೇ ಹೇಳಬಹುದು.

* ಆರ್. ಇಂದಿರಾ ಅವರ ಹೊಸದಾರಿ ಅಂಕಣ ಅನಿವಾರ್ಯ ಕಾರಣಗಳಿಂದ ಪ್ರಕಟವಾಗಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.