ಮಂಗಳವಾರ, ಮೇ 11, 2021
24 °C

ಮುನ್ನೆಚ್ಚರಿಕೆಯ ತುರ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ಪುಳಕದ ಸಂಕೇತ. ಆದರೆ, ಬೆಂಗಳೂರಿನ ಜನರಿಗೆ ಮಳೆ ಎಂದರೆ ಬೆಚ್ಚಿಬೀಳುವಂತಹ ಸ್ಥಿತಿ ಒದಗಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಯೇ ಬೆಂಗಳೂರಿನ ಬಹುದೊಡ್ಡ ಸಮಸ್ಯೆ ಎನ್ನುವಂತಾಗಿದೆ. ಪ್ರತಿ ಸಲ ಮಳೆ ಬಿದ್ದಾಗಲೂ ಜೀವಹಾನಿ ವರದಿಯಾಗುತ್ತದೆ. ನಿವಾಸಿಗಳು ತತ್ತರಿಸುತ್ತಾರೆ.ಮಳೆಯೊಂದಿಗೆ ಸಮೀಕರಿಸಬಹುದಾದಷ್ಟು ಸರ್ವೇಸಾಮಾನ್ಯ ಆಗಿವೆ ಅನಾಹುತಗಳು. ಮಳೆ ನೀರು ಸಲೀಸಾಗಿ ಹರಿದು ಹೋಗಲು ಇದ್ದ  ಕಾಲುವೆ ವ್ಯವಸ್ಥೆ ಸಂಪೂರ್ಣ ಹಾಳಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಕೆರೆಗಳು ಮಾಯವಾಗಿವೆ. ಹಾದಿ ಬೀದಿ ಡಾಂಬರುಮಯ. ಮರಗಳ ಬುಡಕ್ಕೂ ಡಾಂಬರು ಮೆತ್ತಲಾಗಿದೆ. ಬಿ.ಬಿ.ಎಂ.ಪಿ ಆಡಳಿತಕ್ಕೆ ಈ ಜಲ್ಲಿಗಚ್ಚು ಮಿಶ್ರಣದ ಬಗ್ಗೆ ಅಷ್ಟೊಂದು ಪ್ರೇಮ. ಪಾದಚಾರಿ ಮಾರ್ಗಗಳಿಗೆ ಹೆಂಚಿನಂತಹ ಬಿಲ್ಲೆಗಳನ್ನು ಅಂಟಿಸಿ, ಭೂಮಿಯೊಳಗೆ ನೀರು ಇಂಗಲು ಇದ್ದ ಸಣ್ಣದೊಂದು ಅವಕಾಶವನ್ನೂ ತಪ್ಪಿಸಲಾಗಿದೆ. ನಗರದ ಬಹುಪಾಲು ಪ್ರದೇಶಗಳ ರಾಜಕಾಲುವೆಗಳು ಒತ್ತುವರಿಯಾಗಿವೆ.ಒತ್ತುವರಿ ತೆರವುಗೊಳಿಸುವ ಇಚ್ಛಾಶಕ್ತಿ ಮಹಾನಗರಪಾಲಿಕೆಗೆ ಇಲ್ಲ. ಅಧಿಕಾರಿಗಳು ಯಾರಾದರೂ ಅಂತಹ ಧೈರ್ಯ ತೋರಿದರೆ ಅದಕ್ಕೆ ರಾಜಕಾರಣಿಗಳೇ ಅಡ್ಡ ನಿಲ್ಲುತ್ತಾರೆ. ಹೀಗಾಗಿ ಮಳೆ ನೀರು ಹರಿದು ಹೋಗಲು ಇರುವ ಅಡಚಣೆಗಳು ಗೊತ್ತಿದ್ದರೂ ಬಿಗಿ ನಿಲುವು ತಳೆಯಲು ಅಧಿಕಾರಿಗಳು ಹಿಂಜರಿಯುತ್ತಾರೆ. ರಾಜಕಾಲುವೆ ಸೇರಿದಂತೆ ಎಲ್ಲ ಬಗೆಯ ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಅದಕ್ಕೆ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಬೇಕು.ಒಂದು ಸಾಧಾರಣ ಮಳೆಗೆ ನಗರದ ರಸ್ತೆಗಳು ಜಲಾವೃತಗೊಳ್ಳುತ್ತವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಮಳೆ ನೀರು ಸೃಷ್ಟಿಸುವ ಅನಾಹುತ ಮತ್ತು ಸಂಚಾರ ಅವ್ಯವಸ್ಥೆಗಳೇ ಬೆಂಗಳೂರಿನ ಅಭಿವೃದ್ಧಿಗೆ ದೊಡ್ಡ ಅಡಚಣೆ ಎನ್ನಬಹುದು. ಎರಡು ದಶಕಗಳ ಹಿಂದೆ ಎಂತಹ ಮಳೆ ಸುರಿದರೂ ನಗರ ತಡೆದುಕೊಳ್ಳುತ್ತಿತ್ತು. ಆಗಿದ್ದ ಜನಸಂಖ್ಯೆಗೆ ತಕ್ಕಂತೆ ರಸ್ತೆ, ಚರಂಡಿ ವ್ಯವಸ್ಥೆ ಇತ್ತು. ನಗರ ಶರವೇಗದಲ್ಲಿ ಬೆಳೆಯುತ್ತಿದೆ. ಆ ವೇಗಕ್ಕೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸಲಾಗಿಲ್ಲ.ಮಳೆ ಸುರಿದು ಅನಾಹುತ ಸಂಭವಿಸಿದ ಬಳಿಕ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸ್ಥಳ ಪರಿಶೀಲಿಸುವುದರಿಂದ ಪ್ರಯೋಜನ ಇಲ್ಲ. ಚರಂಡಿಗಳಲ್ಲಿ ತುಂಬಿರುವ ಹೂಳನ್ನು ಮಳೆಗಾಲಕ್ಕೆ ಮೊದಲೇ ತೆಗೆಯಬೇಕು. ಕಾಲುವೆ ಅಕ್ಕಪಕ್ಕದ ನಿವಾಸಿಗಳು ತ್ಯಾಜ್ಯವನ್ನು ನೇರವಾಗಿ ಕಾಲುವೆಗೆ ಸುರಿಯುತ್ತಿದ್ದಾರೆ.ಮಾರುಕಟ್ಟೆ, ಹೋಟೆಲ್ ತ್ಯಾಜ್ಯವೂ ಅದೇ ರೀತಿ ಕಾಲುವೆ ಸೇರುತ್ತಿದೆ. ಇದಕ್ಕೆ ತಡೆಯೊಡ್ಡಬೇಕು. ಅನಾಹುತಗಳಿಗೆ ಆಡಳಿತ ವೈಫಲ್ಯವೇ ಕಾರಣ. ಬಿಬಿಎಂಪಿ ದುಷ್ಟಕೂಟದ ಹಿಡಿತಕ್ಕೆ ಒಳಪಟ್ಟಿದೆ ಎಂಬ ಅಭಿಪ್ರಾಯ ಜನರಲ್ಲಿದೆ. ತ್ಯಾಜ್ಯ ವಿಲೇವಾರಿ ಕಗ್ಗಂಟಾಗಿ ಪರಿಣಮಿಸಿದ್ದು ಇದೇ ಕಾರಣದಿಂದ. ಮಳೆಯಿಂದ ಉಂಟಾಗುವ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಿ ಕಾಲಮಿತಿಯೊಳಗೆ ಅದನ್ನು ಜಾರಿಗೊಳಿಸದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು ನಿಶ್ಚಿತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.