ಗುರುವಾರ , ಮೇ 19, 2022
21 °C

ಮುಳ್ಳುಗದ್ದುಗೆ ಉತ್ಸವಕ್ಕೆ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ಇಲ್ಲಿ ಪ್ರತಿವರ್ಷ ಅಶ್ವಯುಜ ಮಾಸದ ಪೌರ್ಣಿಮೆಯ ಮಾರನೇ ದಿನ ನಡೆಯುವ ಹಾಲಸ್ವಾಮಿ ಮುಳ್ಳುಗದ್ದುಗೆ ಉತ್ಸವಕ್ಕೆ ಒಂದು ತಿಂಗಳಿಂದ ಭರದ ಸಿದ್ಧತೆ ನಡೆದಿದೆ.ಅ. 12ರಂದು ನಡೆಯುವ ಈ ಉತ್ಸವಕ್ಕೆ ಇಡೀ ಗ್ರಾಮ ತಳಿರು ತೋರಣಗಳಿಂದ ಸಜ್ಜಾಗಿದೆ. ಹಿಂದಿನ ದಿನವಾದ ಮಂಗಳವಾರ ನಿಯಮದಂತೆ ಕಳಸ ಸ್ಥಾಪನೆಯಾಗಿ ಮಠದ ಅಶ್ವವನ್ನು ಶೃಂಗರಿಸಿ, ಗ್ರಾಮದ ಮನೆಮನೆಗೂ ತೆಗೆದುಕೊಂಡುಹೋಗಿ ಪೂಜೆ ಸ್ವೀಕರಿಸಲಾಯಿತು. ಉತ್ಸವಕ್ಕೆ ಸುಮಾರು 25 ಸಾವಿರ ಭಕ್ತರು ಬರುವ ನಿರೀಕ್ಷೆ ಇದ್ದು, ಮಂಗಳವಾರದಿಂದಲೇ ಅನ್ನದಾಸೋಹದ ವ್ಯವಸ್ಥೆ ಕೈಗೊಳ್ಳಲಾಗಿತ್ತು.ಇದಕ್ಕಾಗಿ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ, ಸುಹೊನ್ನೆ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ನೀಡಿದ ರಾಶಿ ರಾಶಿ ತರಕಾರಿಗಳನ್ನು ಬಳಸಿಕೊಂಡು ಬಾಣಸಿಗರು ಬೃಹತ್‌ಗಾತ್ರದ ಪಾತ್ರೆಗಳಲ್ಲಿ ಅಡುಗೆ ತಯಾರಿಸುತ್ತಿದ್ದ ದೃಶ್ಯ ಕಂಡುಬಂದಿತು. ಇದರೊಂದಿಗೆ ಮುಳ್ಳುಗದ್ದುಗೆಯ ಧಾರ್ಮಿಕ ವಿಧಿ ವಿಧಾನಗಳನ್ನು ಮಂಗಳವಾರ ಆರಂಭಿಸಲಾಯಿತು. ಮಂಗಳವಾರ ಸಂಜೆ 6ಕ್ಕೆ ರಾಂಪುರ ಬೃಹನ್ಮಠದಿಂದ ಆಗಮಿಸಿದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭಕ್ತವೃಂದ ಹಾರ್ದಿಕವಾಗಿ ಬರಮಾಡಿಕೊಂಡಿತು.ಮಂಗಳವಾರ ರಾತ್ರಿ ವಿವಿಧ ಕಡೆಗಳಿಂದ ಬಂದ ನೂರಾರು ಭಕ್ತರು ಮತ್ತುಭಜನಾ ತಂಡಗಳು ಗದ್ದುಗೆ ಮಠದಲ್ಲಿ ಭಜನಾಮೇಳ ನಡೆಸಿದರೆ, ಹಲಗೆ ಮೇಳ ಮತ್ತು ಜಾಂಜ್ ಮೇಳ, ಕೋಲು ಮೇಳಗಳು ರಾತ್ರಿಯಿಡೀ ನಾದದ ಸೊಬಗನ್ನು ನೀಡಿ ಮುಳ್ಳು ಗದ್ದುಗೆಯ ನಿರ್ಮಾಣಕ್ಕೆ ಮೆರುಗು ನೀಡಿದವು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.