ಸೋಮವಾರ, ಜೂನ್ 21, 2021
30 °C

ಮುಷರಫ್‌ ಭದ್ರತೆ: ಗುಪ್ತಚರ ಅಧಿಕಾರಿಗಳಿಗೆ ಕೋರ್ಟ್‌ ಸಮನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾ­ನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷ­ರಫ್‌ ಅವ­ರ ಮೇಲೆ ಉಗ್ರರ ದಾಳಿಯ ಸಾಧ್ಯತೆ ಕುರಿತು ಭದ್ರತಾ ಜಾಗೃತಿಗಾಗಿ ಮುನ್ನೆ­ಚ್ಚರಿಕೆ ಸಂದೇಶ ನೀಡಿದ ಪ್ರಕರಣ­ದಲ್ಲಿ ವಿವರಣೆ ನೀಡಲು ರಹಸ್ಯ ವಿಚಾ­ರಣೆಗೆ ಹಾಜರಾಗುವಂತೆ ಉನ್ನತ ಗುಪ್ತ­ಚರ ಅಧಿಕಾರಿಗಳಿಗೆ ವಿಶೇಷ ನ್ಯಾಯಾ­ಲಯ ಬುಧವಾರ ಸಮನ್ಸ್ ನೀಡಿದೆ.2007ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾರಣಕ್ಕಾಗಿ ಮುಷರಫ್‌ ದೇಶದ್ರೋಹ ಮೊಕದ್ದಮೆ ಎದುರಿ­ಸುತ್ತಿದ್ದು, ನ್ಯಾಯ­ಮೂರ್ತಿ ಫೈಸಲ್‌ ಅರಬ್‌ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆ­ನಡೆಸುತ್ತಿದೆ. ಈ ವಿಚಾರಣೆ ಗುರುವಾ­ರಕ್ಕೆ ಮುಂದೂಡಲ್‍ಪಟ್ಟಿದೆ.ವಕೀಲರಿಗೆ ಪ್ರವೇಶ ನಿರ್ಬಂಧ

ಈ ಮಧ್ಯೆ, ಮುಷರಫ್‌ ಪರ ವಕೀಲ ರಾಣಾ ಇಜಾಜ್‌ ಅವರನ್ನು ನ್ಯಾಯಾ­ಲಯ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ಬುಧವಾರ ತಡೆದ ಘಟನೆ ನಡೆಯಿತು.

ಮಂಗ­ಳ­­ವಾರ ವಿಚಾರಣೆ ಸಂದರ್ಭದಲ್ಲಿ ನ್ಯಾಯಾ­­ಧೀಶ­ರೊಂದಿಗೆ ಅನುಚಿ­ತ­ವಾಗಿ ನಡೆದು­ಕೊಂಡ ಕಾರಣಕ್ಕಾಗಿ ಅವರಿಗೆ  ಕೋರ್ಟ್‌ ಪ್ರವೇಶ ನಿರ್ಬಂಧಿಸಿ ರಿಜಿ­ಸ್ಟ್ರಾರ್‌ ಅಬ್ದುಲ್‌ ಘನಿ ಸೂಮ್ರೊ ಆದೇಶ ಹೊರಡಿಸಿದ್ದರು.‘ಲ್ಯಾರಿ ಗ್ಯಾಂಗ್‌’ನಿಂದ ತಮಗೆ ಬೆದ­ರಿಕೆ ಕರೆ ಬಂದಿದ್ದು, ಇದರಲ್ಲಿ ನ್ಯಾ. ಫೈಸಲ್‌ ಅರಬ್‌ ಅವರ ಕೈವಾಡ ಇದೆ ಎಂದು ವಿಚಾ­ರಣೆ ವೇಳೆ ನೇರ­ವಾಗಿ ಇಜಾಜ್‌ ಆರೋಪಿಸಿದ್ದರು. ಇದರಿಂದ ಕೆಂಡಾಮಂಡ­ಲ­ರಾದ ಪೈಜಲ್‌ ಅವರು ಇಜಾಜ್‌ ಅವರನ್ನು ಭದ್ರತಾ ಸಿಬ್ಬಂದಿ ಮೂಲಕ ಹೊರಹಾಕಿಸಿದ್ದರು.

ಅಲ್ಲದೆ, ‘ಇದು ನ್ಯಾಯಾಲಯ ಅಲ್ಲ, ಕಟುಕರ ಮನೆ’ ಎಂದು ಕೂಗಾಡಿ­ದ್ದರು. ಇದಕ್ಕೆ ಕ್ಷಮೆ ಕೇಳಲು ನ್ಯಾಯಾ­ಧೀಶರು ಹೇಳಿದಾಗ, ಇಜಾಜ್‌ ನಿರಾಕರಿಸಿದ ಕಾರಣ ಅವರಿಗೆ ನ್ಯಾಯಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಮುಂಬೈ ದಾಳಿ: ವಿಚಾರಣೆ 19ಕ್ಕೆ

ಲಾಹೋರ್‌ (ಪಿಟಿಐ): ಮುಂಬೈ ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾ­ರಣೆ­ಯನ್ನು ಪಾಕಿಸ್ತಾನ ನ್ಯಾಯಾಲಯ ಈ ತಿಂಗಳ 19ಕ್ಕೆ ಮುಂದೂಡಿದೆ.

ಇತ್ತೀಚೆಗೆ ಪಾಕ್‌ ನ್ಯಾಯಾಲಯದ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆ­ಯಲ್ಲಿ ಭದ್ರತೆಯ ದೃಷ್ಟಿಯಿಂದ ವಿಚಾ­ರಣೆ­ಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಪೂರ್ಣ ಪ್ರಮಾಣದ ಭದ್ರತೆ ಒದಗಿ­ಸದ ಹೊರತು ಉನ್ನತ ಮಟ್ಟದ ಪ್ರಕ­ರಣಗಳ ವಿಚಾರಣೆಯಲ್ಲಿ ಭಾಗವಹಿಸು­ವು­ದಿಲ್ಲ ಎಂದು ವಕೀಲ ಚೌಧರಿ ಅಜರ್‌ ಘೋಷಿಸಿದ್ದಾರೆ. ಮುಂಬೈ ದಾಳಿ ಪ್ರಕರಣದ ಸರ್ಕಾರಿ ವಕೀಲ ಜುಲ್ಫಿಕರ್‌ ಅಲಿ ಅವರ ಹತ್ಯೆ ನಂತರ ಚೌಧರಿ ಅಲಿ ಸರ್ಕಾರಿ ವಕೀಲ­ರಾಗಿ ನೇಮಕಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.