ಶುಕ್ರವಾರ, ಮೇ 7, 2021
25 °C

ಮೂಜಿ ಮುಟ್ಟು ಮೂಜಿ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆದ ಹತ್ತು ವರ್ಷಗಳಿಂದ ಕನ್ನಡ ಹಾಗೂ ತುಳು ರಂಗಭೂಮಿಯಲ್ಲಿ ಪ್ರಯೋಗಶೀಲವಾಗಿ ತೊಡಗಿಕೊಂಡು ಹಲವು ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಂಗಾವತಾರ್ ರಂಗತಂಡ ಡಾ. ಡಿ. ಕೆ. ಚೌಟ ಅವರ `ಮೂಜಿ ಮುಟ್ಟು ಮೂಜಿ ಲೋಕ~  ಎಂಬ ನೂತನ ತುಳು ನಾಟಕವನ್ನು ಕ್ರಿಯಾತ್ಮಕ ಪ್ರಯೋಗದೊಂದಿಗೆ ಪ್ರದರ್ಶನ ಮಾಡುತ್ತಿದೆ.ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕದ ಮೊದಲ ಮೂರು ಪ್ರದರ್ಶನಗಳನ್ನು ಏಪ್ರಿಲ್ 13, 14 ಮತ್ತು 15ರಂದು ನಗರದ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.`ಮೂಜಿ ಮುಟ್ಟು ಮೂಜಿ ಲೋಕ~ ವಿಶ್ವಾತ್ಮಕ ಪರಿಕಲ್ಪನೆಗಳನ್ನು ಸ್ಥಳೀಯ ಪುರಾಣ, ಐತಿಹ್ಯ, ಆಚರಣೆಗಳ ಮೂಲಕ ಕಟ್ಟಿಕೊಡುವ ಅನನ್ಯ ರಂಗಕಥಾನಕ. ತುಳು ಭಾಷಿಗರ ವಿಶಿಷ್ಟ ಲೋಕದೃಷ್ಟಿಗಳನ್ನು ಭೂತ, ವರ್ತಮಾನ, ಭವಿಷ್ಯತ್ ಲೋಕಗಳ ಒಳಗೆ ಕೊಂಡೊಯ್ಯುವ ಸಾಹಸ ಯಾನ.ಲೋಕದ ಸೃಷ್ಟಿಯನ್ನು ದೇಸೀಯ ನೆಲೆಯಲ್ಲಿ ವಿವರಿಸುವ ತುಳು ಭಾಷಿಗರ ಸೃಷ್ಟಿಪುರಾಣ, ಹಂದಿಯಂತಹ ಪ್ರಾಣಿಗಳು ದೈವಗಳಾಗುವ (ಪ್ರಾಣಿ ಕುಲದೈವಾರಾಧನೆ) ಕಥನ, ತುಳು-ಕೇರಳ ಪ್ರದೇಶದ ಸತಿಯಪುತ್ರ ನಾಡಿನ ಕೋಶರ್ ಜನರು ಮಹಾಬಲಿಯನ್ನು ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಆರಾಧಿಸಿದ್ದು ಎಲ್ಲವನ್ನೂ ಒಳಗೊಳ್ಳುವ ನಾಟಕ `ಬಲಿಪುರಾಣ~ದವರೆಗೆ ಬೆಳೆಯುತ್ತಾ ಹೋಗುತ್ತದೆ. ರಾಮನ ಮೂರು ಹೆಜ್ಜೆಗಳ ಮೂಲಕ ತ್ರಿವಿಕ್ರಮ ಆದಹಾಗೆ, ನಾಟಕದ ಭಾಷೆ, ಶೈಲಿ ತುಳುವಿನ ಮೌಖಿಕ ಪರಂಪರೆಯ ಜೀವಸತ್ವವನ್ನು ಪೂರ್ಣವಾಗಿ ಹೀರಿಕೊಂಡು, ಭಿನ್ನ ಅರ್ಥಧ್ವನಿಗಳನ್ನು ಅನುರಣಿಸುತ್ತದೆ. ಈ ನಾಟಕ ಭಾರತೀಯ ಭಾಷೆಗಳ ನಾಟಕಗಳಲ್ಲೇ ಹೊಸ ಪ್ರಯೋಗ ಎಂದು ಬಿ. ವಿ. ವಿವೇಕ್ ರೈ ಬಣ್ಣಿಸಿದ್ದಾರೆ.

 ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಸಂಜೆ 6.30ಕ್ಕೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.