ಭಾನುವಾರ, ಜನವರಿ 26, 2020
28 °C
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಶರಣರ ಆಶಯ

ಮೂಢನಂಬಿಕೆ ನಿವಾರಣೆಗೆ ‘ಅಕ್ಷರ ಸಂಸ್ಕೃತಿ’ ಅಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಅಲಕ್ಷಿತ ಹಾಗೂ ತಳ ಸಮುದಾಯ ಜನರು ಅಕ್ಷರ ಸಂಸ್ಕೃತಿಗೆ ಒಳಗಾದರೆ (ವಿದ್ಯಾವಂತರಾದರೆ) ಮೂಢನಂಬಿಕೆಯನ್ನು ದೂರ ಮಾಡಬಹುದು’ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರಘರಾಜೇಂದ್ರ ಶರಣರು ಅಭಿಪ್ರಾಯಪಟ್ಟರು.ನಗರದ ಎವಿಕೆ ರಸ್ತೆಯ ಮಹಾತ್ಮ ಗಾಂಧಿ ಸ್ಮಾರಕ ಹಾಸ್ಟೆಲ್‌ ಹಾಗೂ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಗುರುರಾಮದಾಸ ಅಧ್ಯಾತ್ಮ ಮಂದಿರ ಟ್ರಸ್ಟ್‌ ಹಮ್ಮಿಕೊಂಡಿದ್ದ 24ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.‘ತಳ ಸಮುದಾಯದ ಜನರು ಜ್ಞಾನಿಗಳಾಗಿ ಅಕ್ಷರ ಸಂಸ್ಕೃತಿಯ ಒಳಗೆ ಬರಬೇಕು. ಜ್ಞಾನದಿಂದ ವಿವೇಕವೂ ಬರಲಿದೆ. ಶಿಕ್ಷಣ ಪಡೆಯಬೇಕು ಎಂಬುದು ಬಸವಾದಿ ಶರಣ ಆಶಯವೂ ಆಗಿತ್ತು. ಶಿಕ್ಷಣ ಆಧುನಿಕ ಜಗತ್ತಿನ ಸಂಪತ್ತು. ಶೋಷಣೆಯ ತಾಕಲಾಟದಿಂದ ಹೊರಬರಲು ಶಿಕ್ಷಣ ಅನಿವಾರ್ಯ’ ಎಂದು ಸಲಹೆ ನೀಡಿದರು.ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಲ್ಪಸಂಖ್ಯಾತ ಮಹಿಳೆಯರಿಗೆ ‘ಬಿದಾಯಿ ಯೋಜನೆ’  ಜಾರಿ ಮಾಡಿರುವುದು ಸ್ವಾಗತಾರ್ಹ. ಅದರಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮದುವೆಗಳಿಗೂ ಧನಸಹಾಯ ನೀಡಬೇಕು ಎಂದು ಆಗ್ರಹಿಸಿದರು.ರೈಲ್ವೆ ಪ್ರಯಾಣಿಕರ ಸೌಲಭ್ಯಗಳ ಸಮಿತಿ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬುದ್ಧ, ಬಸವ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ನಾವು ವ್ಯತ್ಯಾಸವಾಗಿ ಕಂಡವರಲ್ಲ. ವಿವಿಧ ಹಂತಗಳಲ್ಲಿ ತಳ ಸಮುದಾಯಕ್ಕೆ ನ್ಯಾಯ ಕಲ್ಪಿಸಲು ಪ್ರಯತ್ನಿಸಿದರು. ಅವರ ತತ್ವ– ಸಿದ್ಧಾಂತಗಳ ಮೇಲೆ ಆಡಳಿತ ನಡೆಯಬೇಕಿತ್ತು. ಆದರೆ, ಜಾತಿ ವ್ಯವಸ್ಥೆಯೇ ಇಂದು ಆಡಳಿತ ನಡೆಸುತ್ತಿದೆ. ಜಾತಿ ಜಾತಿಗಳ ನಡುವೆ ವೈರುತ್ವವಿದೆ. ಬೇರೆ ಸಮುದಾಯ ಜನರು ಅಧಿಕಾರಕ್ಕೆ ಬಂದರೆ ಸಹಿಸಿಕೊಳ್ಳದ ಮನಸ್ಥಿತಿಯಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ  ಅಧ್ಯಕ್ಷ ಎನ್‌.ಮಂಜುನಾಥ್‌ ಮಾತನಾಡಿ, ‘ಸರ್ಕಾರ ಪರಿಶಿಷ್ಟ ಜಾತಿ ಹಾಗೂ ವರ್ಗದ ಕಲ್ಯಾಣಕ್ಕೆ ಸಾಕಷ್ಟು ಕಾರ್ಯಕ್ರಮ ಹಾಕಿಕೊಂಡಿದೆ. ಅವುಗಳ ಅನುಷ್ಠಾನ ಸಮರ್ಪಕವಾಗಿ ನಡೆಯಬೇಕು. ಅಧಿಕಾರಿಗಳ ಹೊಣೆ ಮಹತ್ವದ್ದು. ಬದ್ಧತೆ ಪ್ರದರ್ಶನ ಮಾಡಬೇಕು ಎಂದ ಅವರು, ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವ ಕಾನೂನು ಜಾರಿಗೆ ಬಂದಿದೆ ಎಂದು ಮಾಹಿತಿ ನೀಡಿದರು.ಬಿ.ಎಚ್‌.ವೀರಭದ್ರಪ್ಪ ಅವರಿಗೆ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರಿಗೆ ಭಯ ಸಲ್ಲದು. ನಂಬಿಕೆ, ಶ್ರದ್ಧೆ ಇರಬೇಕು. ಆಗ ಮಾತ್ರ ಸಾಧಕರಾಗಲು ಸಾಧ್ಯ ಎಂದು ಸಲಹೆ ನೀಡಿದರು.ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಮುಖಂಡರಾದ ಬಿ.ಎಚ್‌.ವೀರಭದ್ರಪ್ಪ, ಎಲ್‌.ಎಂ.ಹನುಮಂತಪ್ಪ, ಬಿ.ಎಂ.ಈಶ್ವರಪ್ಪ, ಎಸ್‌.ಶಿವಲಿಂಗಪ್ಪ, ಡಿ.ಬಸವರಾಜ್‌, ಕೆ.ಅಬ್ದುಲ್‌ ಜಬ್ಬಾರ್‌, ಜಲಜಾನಾಯ್ಕ, ರವಿನಾರಾಯಣ್‌, ವಿಜಯಮ್ಮ, ರವಿ ಮುನಿಯಾರ್‌, ನಾಗಪ್ಪ, ಪುರುಷೋತ್ತಮ್ಮ, ಓಂಕಾರಪ್ಪ, ತಿಪ್ಪಣ್ಣ, ಮಂಜಪ್ಪ, ಅರಸೀಕೆರೆ ಮುನಿಯಪ್ಪ, ಕೃಷ್ಣಪ್ಪ, ಮೂರ್ತಿ, ಪ್ರಭಾಕರ್‌, ಡಾ.ಎಚ್‌.ವಿಶ್ವನಾಥ್‌ ಮೊದಲಾದವರು ಹಾಜರಿದ್ದರು.‘ಮುಂದಿನ ಬಜೆಟ್‌ನಲ್ಲಿ ಜಾರಿ’

ದಾವಣಗೆರೆ: ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಸಮುದಾಯಗಳ ಮದುವೆಗೂ ಧನಸಹಾಯ ಮಾಡುವ ಚಿಂತನೆಯಿದ್ದು, ಆ ಯೋಜನೆಯನ್ನು ಮುಂಬರುವ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಯಾವುದೇ ಒಂದು ವರ್ಗಕ್ಕೆ ಮಾತ್ರ ಸಹಾಯ ಮಾಡಬೇಕು ಎಂಬ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)