ಗುರುವಾರ , ಆಗಸ್ಟ್ 6, 2020
24 °C

ಮೂರು ತಿಂಗಳ ಮೇಲೆ ಇಪ್ಪತ್ತು ದಿನ ಅಧಿಕಾರ:ನಾಗಮಣಿ ಜಿಲ್ಲಾ ಪಂಚಾಯಿತಿ ನೂತನ ಉಪಾಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರು ತಿಂಗಳ ಮೇಲೆ ಇಪ್ಪತ್ತು ದಿನ ಅಧಿಕಾರ:ನಾಗಮಣಿ ಜಿಲ್ಲಾ ಪಂಚಾಯಿತಿ ನೂತನ ಉಪಾಧ್ಯಕ್ಷೆ

ತುಮಕೂರು: ಜಿಲ್ಲಾ ಪಂಚಾಯಿತಿ ಮೊದಲ ಅವಧಿಯ ಅಧಿಕಾರ ಅವಧಿ ಕೇವಲ ಮೂರು ತಿಂಗಳು ಇಪ್ಪತ್ತು ದಿನಗಳಷ್ಟೇ ಬಾಕಿ ಉಳಿದಿದ್ದರೂ ಜಿಲ್ಲಾ ಪಂಚಾಯಿತಿ ಅಧಿಕಾರ ಹಿಡಿದಿರುವ ಜೆಡಿಎಸ್, ಕಾರಣವೇ ಇಲ್ಲದೆ ಉಪಾಧ್ಯಕ್ಷೆ ಲಲಿತಮ್ಮ ಅವರನ್ನು ಬದಲಿದೆ.ಉಪಾಧ್ಯಕ್ಷೆ ಲಲಿತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಪಾವಗಡ ತಾಲ್ಲೂಕು ನಾಗಲಮಡಿಕೆ ಕ್ಷೇತ್ರದ ಸದಸ್ಯೆ ನಾಗಾಮಣಿ ಅವಿರೋಧವಾಗಿ ಆಯ್ಕೆಯಾದರು.

ಬೆಳಿಗ್ಗೆ 11 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಯಿತು.ತೆರವಾದ ಸ್ಥಾನಕ್ಕೆ ನಾಗಾಮಣಿ ಹೊರತು ಪಡಿಸಿ ಬೇರೆ ಯಾವ ಸದಸ್ಯರು ನಾಮ ಪತ್ರ ಸಲ್ಲಿಸಲಿಲ್ಲ. ಮಧ್ಯಾಹ್ನ 2 ಗಂಟೆಗೆ ನಾಗಾಮಣಿ ಅವರ ಅವಿರೋಧ ಆಯ್ಕೆಯನ್ನು ಚುನಾವಣಾ ಅಧಿಕಾರಿ ಶಂಭುದಯಾಳ್ ಶರ್ಮಾ ಪ್ರಕಟಿಸಿದರು.ನೂತನ ಉಪಾಧ್ಯಕ್ಷೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಆನಂದ ರವಿ, ಜಿಲ್ಲಾಧಿಕಾರಿ ಆರ್.ಕೆ.ರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಗೋವಿಂದರಾಜು ಅಭಿನಂದಿಸಿದರು. ನಂತರ ಜಿಲ್ಲಾ ಪಂಚಾಯಿತಿ ಸಭಾಂಗಣಕ್ಕೆ ಆಗಮಿಸಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಆರ್.ಹುಲಿನಾಯ್ಕರ್ ಅಭಿನಂದಿಸಿದರು.ಅಧಿಕಾರ ಸ್ವೀಕರಿಸಿದ ನಾಗಾಮಣಿ ಮಾತನಾಡಿ, ಉತ್ತಮ ಆಡಳಿತ ನೀಡಲು ಅಧ್ಯಕ್ಷರೊಂದಿಗೆ ಸಹಕರಿಸುವುದಾಗಿ ನುಡಿದರು. ನಾಗಾಮಣಿ ಆಯ್ಕೆ ಪ್ರಕಟವಾಗುತ್ತಿದ್ದಂತೆ ಅವರ ಕ್ಷೇತ್ರದಿಂದ ಬಂದಿದ್ದ ನೂರಾರು ಅಭಿಮಾನಿಗಳು ಸಂಭ್ರಮ ಆಚರಿಸಿದರು.ಕಾಂಗ್ರೆಸ್, ಬಿಜೆಪಿ ಚುನಾವಣೆಯನ್ನು ಲಘುವಾಗಿ ಪರಿಗಣಿಸಿತು. ಬಿಜೆಪಿಯ ದಂಡಿನಶಿವರ ಕ್ಷೇತ್ರದ ಮಂಗಳಗೌರಮ್ಮ, ಬುಕಾಪಟ್ಟಣ ಕ್ಷೇತ್ರದ ಪುಟ್ಟಾಮಣಿ ಬೊಮ್ಮಣ್ಣ, ಕಾಂಗ್ರೆಸ್‌ನ ಬಾಣಸಂದ್ರ ಕ್ಷೇತ್ರದ ಉಗ್ರಯ್ಯ, ಮಿಡಿಗೇಶಿ ಕ್ಷೇತ್ರದ ಕೆಂಚಮಾರಯ್ಯ ಹೊರತುಪಡಿಸಿ ಕಾಂಗ್ರೆಸ್, ಬಿಜೆಪಿಯ ಉಳಿದೆಲ್ಲ ಸದಸ್ಯರು ಗೈರು ಹಾಜರಾಗಿದ್ದರು.ಒಟ್ಟು 57 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ 33 ಸದಸ್ಯರಿದ್ದು, ಸ್ಪಷ್ಟ ಬಹುಮತ ಹೊಂದಿದೆ. ಕಾಂಗ್ರೆಸ್ 10, ಬಿಜೆಪಿ 13 ಹಾಗೂ ಜೆಡಿಯು ಒಬ್ಬರು ಸದಸ್ಯರಿದ್ದಾರೆ. ಚುನಾವಣಾ ವೇಳೆ ಜೆಡಿಎಸ್‌ನ 33 ಸದಸ್ಯರು ಉಪಸ್ಥಿತರಿದ್ದರು.ಮಾತಿನಂತೆ ನಡೆದ ಲಲಿತಮ್ಮ

ತುಮಕೂರು: ಉಪಾಧ್ಯಕ್ಷರಾಗಿದ್ದ ಲಲಿತಮ್ಮ ಮಂಜುನಾಥ್ ರಾಜೀನಾಮೆ ನೀಡುವ ಮೂಲಕ ವರಿಷ್ಠರಿಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಕಡು ಬಡತನದ ಕುಟುಂಬ ಹಿನ್ನೆಲೆಯ ಪರಿಶಿಷ್ಟ ಜಾತಿಯ ಲಲಿತಮ್ಮ ಅವರು ಕೇವಲ ಪ್ರಾಥಮಿಕ ಶಿಕ್ಷಣ ಪಡೆದಿದ್ದರೂ ಖಡಕ್ ಮಾತುಗಳಿಂದ ಅಧಿಕಾರಿಗಳಲ್ಲಿ ಬೆರಗು ಮೂಡಿಸಿದ್ದರು.ಶಿರಾದ ಕಳ್ಳಂಬೆಳ್ಳ ಕ್ಷೇತ್ರದ ಸದಸ್ಯೆಯಾಗಿ ಆಯ್ಕೆಯಾಗಿದ್ದ ಅವರು ಮೀಸಲಾತಿಯಿಂದಾಗಿ ಮೊದಲ ಅವಧಿಯಲ್ಲೇ ಜಿ.ಪಂ. ಉಪಾಧ್ಯಕ್ಷ ಸ್ಥಾನಕ್ಕೇರುವಂತೆ ಮಾಡಿತು. ಡಾ.ರವಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೆಲ ದಿನಗಳು ಪ್ರಭಾರಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಗಳಲ್ಲಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದ ರೀತಿ ಕೂಡ ಗಮನ ಸೆಳೆದಿತ್ತು. ಅವರ ಆಡಳಿತ ವೈಖರಿಯಿಂದ ಅಧಿಕಾರಿಗಳು ಸೇರಿದಂತೆ ಸದಸ್ಯರಿಗೆ ಪ್ರೀತಿಪಾತ್ರವಾಗಿತ್ತು.ಜಿಲ್ಲಾ ಪಂಚಾಯಿತಿ ಮೊದಲ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆರಿಸುವಾಗ ತಲಾ ಹತ್ತು ತಿಂಗಳ ಅಧಿಕಾರ ಹಂಚಿಕೊಳ್ಳಲು ನಿರ್ಧರಿಸಲಾಗಿತ್ತು. ಉಪಾಧ್ಯಕ್ಷರಾಗಿ ಹತ್ತು ತಿಂಗಳು ಪೂರೈಸಿದಾಗಲೇ ಲಲಿತಮ್ಮ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಆಗ ಅಧ್ಯಕ್ಷರಾಗಿದ್ದ ಡಾ.ರವಿ ರಾಜೀನಾಮೆ ನೀಡುವುದು ತಡವಾದ ಕಾರಣ ಲಲಿತಮ್ಮ ಅವರಿಗೆ ಹೆಚ್ಚು ಕಾಲ ಅಧಿಕಾರ ಸಿಗುವಂತಾಯಿತು.ಹದಿನೈದು ವರ್ಷಗಳಿಂದಲೂ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿರುವ ನಾಗಾಮಣಿ ಅವರಿಗೆ ಉಪಾಧ್ಯಕ್ಷ ಸ್ಥಾನ ಕೊಡಬೇಕೆಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಳಿಕೊಳ್ಳಲಾಗಿತ್ತು. ಲಲಿತಮ್ಮ ರಾಜೀನಾಮೆ ಪಡೆಯುವಂತೆ ಮಾಜಿ ಸಚಿವ ಸತ್ಯನಾರಾಯಣ್ ಅವರಿಗೆ ಕುಮಾರಸ್ವಾಮಿ ಸೂಚಿಸಿದ್ದರು. ಅದರಂತೆ ಲಲಿತಮ್ಮ ಅವರಿಂದ ಸತ್ಯನಾರಾಯಣ್ ರಾಜೀನಾಮೆ ಕೊಡಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.ಜಿ.ಪಂ. ಅಧಿಕಾರ 3 ಭಾಗ

ಜಿಲ್ಲಾ ಪಂಚಾಯಿತಿಯ ಒಟ್ಟು 60 ತಿಂಗಳ ಅವಧಿಯ (ಐದು ವರ್ಷ) ಅಧಿಕಾರವನ್ನು ಸರ್ಕಾರ ತಲಾ 20 ತಿಂಗಳಂತೆ ಮೂರು ಅವಧಿಗಳಾಗಿ ವಿಂಗಡಿಸಿದೆ. ಈ ಮೂರು ಅವಧಿಯಲ್ಲೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಗುತ್ತದೆ. ಈಗ ಮೊದಲ 20 ತಿಂಗಳ ಅವಧಿಯ ಅಧಿಕಾರ ನಡೆಯುತ್ತಿದೆ.ಅಧಿಕಾರಾವಧಿ 20 ತಿಂಗಳಾಗಿದ್ದರೂ ರಾಜಕೀಯ ಪಕ್ಷಗಳು ಸದಸ್ಯರನ್ನು ತೃಪ್ತಿ ಪಡಿಸುವ ಸಲುವಾಗಿ ಬಹುತೇಕ ಪಂಚಾಯಿತಿಗಳಲ್ಲಿ 20 ತಿಂಗಳನ್ನೇ ಮತ್ತೇ ಆಂತರಿಕವಾಗಿ ವಿಭಜನೆಗೊಳಿಸಿ 10 ತಿಂಗಳ ಅಧಿಕಾರ ಹಂಚಲಾಗುತ್ತದೆ. ಹತ್ತು ತಿಂಗಳಿಕೆ ಅಧಿಕಾರ ಹಂಚಿಕೆ ಆಗುವುದರಿಂದ ಆಡಳಿತದಲ್ಲಿ ಹಿಡಿತ ಸಿಗದೆ ಅಭಿವೃದ್ಧಿ ಕೆಲಸಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತಿದೆ ಎಂಬುದು ಬಹುತೇಕ ಜಿಲ್ಲಾ ಪಂಚಾಯಿತಿ ಸದಸ್ಯರ ಬೇಸರದ ನುಡಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.