ಶುಕ್ರವಾರ, ಏಪ್ರಿಲ್ 16, 2021
31 °C

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ:  ಸಾಮಾಜಿಕ ಬಹಿಷ್ಕಾರದಿಂದ ಬೂದಿಹಳ್ಳಿ ಗ್ರಾಮ ತೊರೆದು ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ದಲಿತರಿಗೆ ವಿದ್ಯುತ್ ಕಡಿತಗೊಳಿಸುವ ಮೂಲಕ ಜಿಲ್ಲಾಡಳಿತ ಬದುಕುವ ಅವಕಾಶವನ್ನೂ ಕಿತ್ತುಕೊಳ್ಳುತ್ತಿದೆ ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಸಂಚಾಲಕ ಭೀಮನಕೆರೆ ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನ ಬೂದಿಹಳ್ಳಿ ದಲಿತರು ಕಳೆದ ವರ್ಷ ಜಾತಿ ಗಲಭೆಯಿಂದಾಗಿ ಗ್ರಾಮ ತೊರೆದು ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿದ್ದು, ಕಳೆದ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಗುರುವಾರ ತಾಲ್ಲೂಕು ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಬೂದಿಹಳ್ಳಿ ಪ್ರಕರಣ ಇಡೀ ದೇಶದ ಗಮನ ಸೆಳೆದಿದ್ದರೂ ಜಿಲ್ಲಾಡಳಿತ ಮಾತ್ರ ದಲಿತರನ್ನು ನಿರ್ಲಕ್ಷ್ಯಿಸುತ್ತಾ ಬಂದಿದೆ. ಈ ಹಿಂದೆ ಜಿಲ್ಲಾಡಳಿತ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವವರೆಗೂ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ನೀಡುತ್ತೇವೆ ಎಂದು ಭರವಸೆ ನೀಡಿತ್ತು.ಇದೀಗ, ಉದ್ದೇಶಪೂರ್ವಕವಾಗಿ ದಲಿತರು ವಾಸಿಸುವ ಸ್ಥಳದಲ್ಲಿ ವಿದ್ಯುತ್ ಕಡಿತಗೊಳಿಸಿ ಬೂದಿಹಳ್ಳಿ ದಲಿತರ ಬದುಕನ್ನು ಕತ್ತಲಿಗೆ ನೂಕಿದೆ. ಅನಾಥರಂತೆ ಬದುಕು ಸಾಗಿಸುತ್ತಿರುವ ಸಂತ್ರಸ್ಥರಿಗೆ ಸಂವಿಧಾನಾತ್ಮಕ ಸವಲತ್ತುಗಳನ್ನು ನೀಡಲು ವಿಳಂಬ ಮಾಡುತ್ತಿರುವ ಜಿಲ್ಲಾಡಳಿತದ ವರ್ತನೆ ಹೊಣೆಗೇಡಿತನದಿಂದ ಕೂಡಿದೆ ಎಂದು ಕಿಡಿಕಾರಿದರು. ಕೂಲಿ ಇಲ್ಲದೆ ಗ್ರಾಮ ತೊರೆದು ಬಂದಿರುವ ಸಂತ್ರಸ್ತರು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ. ಇಷ್ಟಾದರೂ, ಮಾನವೀಯ ಕಳಕಳಿ ಪ್ರದರ್ಶಿಸದ ಜಿಲ್ಲಾಡಳಿತ ದಲಿತರು ಬದುಕಲಿಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಶಾಶ್ವತ ಪುನರ್‌ವಸತಿ ಕಲ್ಪಿಸುವವರೆಗೂ ವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ಬೂದಿಹಳ್ಳಿ ದಲಿತರಿಗೆ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಬೇಕು.ಇದ್ದ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿರಸ್ತೇದಾರ್ ತಿಪ್ಪುರಾವ್‌ಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಬೂದಿಹಳ್ಳಿ ದಲಿತರು ಹಾಗೂ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಹೊನ್ನೂರ ಸ್ವಾಮಿ, ಭೂಶಕ್ತಿ ವೇದಿಕೆ ಸಂಚಾಲಕ ಪ್ರಕಾಶ್ ಇನ್ನಿತರರು ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.