ಶನಿವಾರ, ಜೂನ್ 19, 2021
28 °C

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಧರಣಿ

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ವಿವಿಧ ಇಲಾಖೆಯ ಆಧೀನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿಯು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.ಈ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆ ಆಧೀನದಲ್ಲಿ ನಡೆಯುವ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯ ಕೊರತೆ ಇದೆ. ವಿದ್ಯಾರ್ಥಿಗಳಿಗೆ ದೊರಕಿಸಬೇಕಾದ ಅಗತ್ಯ ಸೌಲಭ್ಯ, ವ್ಯಾಸಂಗಕ್ಕೆ ಉಪಯುಕ್ತ ಕಾರ್ಯಚಟುವಟಿಕೆ, ವಿಶೇಷ ಬೋಧನೆಯಂಥ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಪದಾಧಿಕಾರಿಗಳು ಆರೋಪಿಸಿದರು.ಶೌಚಾಲಯ, ಸ್ನಾನದ ಕೊಠಡಿ, ಶುದ್ಧವಾದ ಕುಡಿಯುವ ನೀರಿನ ಕೊರತೆ, ವಿದ್ಯುತ್ ಸಂಪರ್ಕದ ಕೊರತೆ, ಪೌಷ್ಠಿಕ ಆಹಾರದ ಕೊರತೆ, ಪಠ್ಯ ಪುಸ್ತಕ ಕೊರತೆ ಇದೆ. ವಸತಿ ನಿಲಯಗಳನ್ನು ಸಮರ್ಪಕ ರೀತಿ ನಿರ್ವಹಣೆ ಮಾಡಬೇಕಾದ ಮೇಲ್ವಿಚಾರಕರು ಸೂಕ್ತ ಗಮನಹರಿಸಿಲ್ಲ. ಸರಿಯಾದ ರೀತಿ ಭೇಟಿ ನೀಡುವುದಿಲ್ಲ ಎಂದು ಆಪಾದಿಸಿದರು.ವಿದ್ಯಾರ್ಥಿಗಳಿಗೆ ಟ್ಯೂಶನ್ ಹೇಳುವುದಿಲ್ಲ. ಪರಿಹಾರ ಬೋಧಕರನ್ನು ಇದಕ್ಕಾಗಿ ನಿಯೋಜಿಸಿಲ್ಲ. ಫ್ಯಾನ್, ಟ್ಯೂಬ್ ಲೈಟ್ಸ್ ಇಲ್ಲ. ವಸತಿ ನಿಲಯದ ಸುತ್ತಮುತ್ತ ಅನಾರೋಗ್ಯ ವಾತಾವರಣ ಕಂಡು ಬರುತ್ತಿದೆ. ವಿದ್ಯಾರ್ಥಿಗಳು ಅನಾರೋಗ್ಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಆದರೆ ನಿಲಯದ ಮೇಲ್ವಿಚಾರಕರನ್ನೇ ಹೊಣೆಗಾರರನ್ನಾಗಿಸಬೇಕು ಎಂದು ಆಗ್ರಹಿಸಿದರು.ಶೇ 75ರಷ್ಟು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಶೀಘ್ರ ಸ್ವಂತ ಕಟ್ಟಡ ನಿರ್ಮಿಸಬೇಕು, ವಿದ್ಯಾರ್ಥಿ ವೇತನವನ್ನು 1200ದಿಂದ 1500ವರೆಗೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ಒಟ್ಟು 31 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಸಂಚಾಲಕ ಪರಶುರಾಮ ಅರೋಲಿ, ಜಿಲ್ಲಾ ಸಂಘಟನಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಶರಣಪ್ಪ ದಿನ್ನಿ  ರಾಜ್ಯ ಖಜಾಂಚಿ ಅಯ್ಯಪ್ಪ ಅರೋಲಿ, ಲಿಂಗಸುಗೂರು ತಾಲ್ಲೂಕ ಸಂಚಾಲಕ ಹರೀಶ ರಾಥೋಡ,  ರಾಯಚೂರು ತಾಲ್ಲೂಕು ಸಂಚಾಲಕ ಚನ್ನಬಸವ ಯಕ್ಲಾಸಪುರ, ಭಾಸ್ಕರ್ ಕುರ್ಡಿ, ಮೌನೇಶ ಕರಿಬಿಲ್‌ಕರ್, ಹುಲಿಗೆಪ್ಪ ಕೆಸರಟ್ಟಿ, ಉಮಾಪತಿ ಜಂಬಲದಿನ್ನಿ, ನರಸಿಂಹ ಗಧಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.