ಸೋಮವಾರ, ಏಪ್ರಿಲ್ 19, 2021
31 °C

ಮೂಲ ಸೌಕರ್ಯವಿಲ್ಲದ ಟಮಕ ಬಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಲ ಸೌಕರ್ಯವಿಲ್ಲದ ಟಮಕ ಬಡಾವಣೆ

ಕೋಲಾರ: ಎರಡು ದಶಕಗಳ ಹಿಂದೆ ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಟಮಕ ಬಡಾವಣೆಗೆ ಸಂಬಂಧಿಸಿದಂತೆ ನಡೆದ ಅವ್ಯವಹಾರ ಕುರಿತು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯಕ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಜಿಲ್ಲಾಧಿಕಾರಿಗಳು ಶೀಘ್ರ ಇತ್ಯರ್ಥಗೊಳಿಸಿದರೆ ಮಾತ್ರ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಅಭಿಪ್ರಾಯಪಟ್ಟರು.ಟಮಕ ಬಡಾವಣೆಯಲ್ಲಿ ಪ್ರಾಧಿಕಾರದ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಟಮಕ ಬಡಾವಣೆಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಧಿಕಾರ ಸಿದ್ಧವಿದೆ. ಆದರೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗಬೇಕಷ್ಟೆ ಎಂದರು.ಬೇರೆ ಜಿಲ್ಲೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿವೇಶನಗಳಿಗೆ ವಿಪರೀತ ಬೇಡಿಕೆ ಇದೆ. ಆದರೆ ಕೋಲಾರದಲ್ಲಿ ಮಾತ್ರ ಬೇಡಿಕೆಯೇ ಇಲ್ಲ. ಮೂಲಸೌಕರ್ಯಗಳಿಲ್ಲದಿರುವುದೇ ಅದಕ್ಕೆ ಮುಖ್ಯ ಕಾರಣ. ಈ ಸನ್ನಿವೇಶವನ್ನು ಸುಧಾರಿಸಲು ಅಧಿಕಾರಿಗಳು ಬದ್ಧತೆ ತೋರಿಸಬೇಕು ಎಂದರು.4 ತಿಂಗಳಲ್ಲಿ ಕಚೇರಿ ಕಟ್ಟಡ ನಿರ್ಮಾನವನ್ನು ಪೂರ್ಣಗೊಳಿಸಬೇಕು. ಹೊಸ ಬಡಾವಣೆಗಳ ನಿರ್ಮಾಣದ ಜೊತೆಗೆ, ಹಳೇ ಬಡಾವಣೆಗಳಿಗೆ ಜೀವ ತುಂಬುವ ಕೆಲಸವನ್ನೂ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ನಗರಾಭಿವೃದ್ಧಿ ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.ಸ್ಪಷ್ಟನೆ: ಅದೇ ವೇಳೆ ಸ್ಥಳಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರನ್ನು ಕುರಿತು ಮಾತನಾಡಿದ ಸಚಿವರು, ನಿಸಾರ್ ಅಹ್ಮದರ ಗಾರ್ಮೆಂಟ್ಸ್ ಕಾರ್ಖಾನೆ ನಿರ್ಮಾಣಕ್ಕೆ ತಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.ಎತ್ತಿನ ಹೊಳೆ ಯೋಜನೆ ಜೊತೆಗೆ ತಾತ್ಕಾಲಿಕವಾದ ಯೋಜನೆಗಳನ್ನುಕೈಗೊಂಡರೆ ಮಾತ್ರ ಬಯಲು ಸೀಮೆಯ ಜಿಲ್ಲೆಗಳನ್ನು ಬರದ ವಾತಾವರಣದಿಂದ ರಕ್ಷಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು.ನೀಲಗಿರಿ ಬೆಳೆಯುವುದನ್ನು ನಿಲ್ಲಿಸಬೇಕು ಎಂದು ಮತ್ತೊಬ್ಬ ಸದಸ್ಯೆ ಪ್ರೊ.ಎಸ್.ಆರ್.ಲೀಲಾ ನುಡಿದರೆ, ನದಿಗಳ ಜೋಡಣೆಯೇ ನೀರಿನ ಸಮಸ್ಯೆಗೆ ಪರಿಹಾರ ಎಂದು ಇನ್ನೊಬ್ಬ ಸದಸ್ಯೆ ಭಾರತಿ ಶೆಟ್ಟಿ ಅಭಿಪ್ರಾಯಪಟ್ಟರು.ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಬಂಗಾರಪೇಟೆ ಶಾಸಕ ಎಂ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಪ್ರಾಧಿಕಾರದ ಸದಸ್ಯೆ ಸುಕನ್ಯಾ, ಶಿವಾರೆಡ್ಡಿ, ಮುನಿವೆಂಕಟಪ್ಪ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್, ಎನ್.ರಾಜಣ್ಣ, ಚಲಪತಿ, ರಾಜೇಂದ್ರ ವೇದಿಕೆಯಲ್ಲಿದ್ದರು.ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್.ಶ್ರೀರಾಂ ಪ್ರಾಸ್ತಾವಿಕ ಮಾತನಾಡಿದರು. ಆಯುಕ್ತ ಕೆ.ಎಸ್‌ನಾಗರಾಜಗೌಡ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.