ಮಂಗಳವಾರ, ಜೂನ್ 22, 2021
29 °C

ಮೂಲ ಸೌಲಭ್ಯ ವಂಚಿತ ಕುರುಬರದೊಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮಾಪುರ: ಅಜ್ಜೀಪುರ ಗ್ರಾಮ ಪಂಚಾಯಿತಿಗೆ ಸೇರಿದ ಸಮೀಪದ ಕುರುಬರದೊಡ್ಡಿ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ.ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, 750ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ಸಮಸ್ಯೆಗಳು ಎದ್ದುಕಾಣುತ್ತವೆ.ಗ್ರಾಮ ಪಂಚಾಯಿತಿ ಆಡಳಿತ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ.ಇಂದಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಪ್ರಸ್ತುತ ಬೇಸಿಗೆ ಆರಂಭಗೊಂಡಿರುವ ಪರಿಣಾಮ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ. ಹಲವು ವರ್ಷದ ಹಿಂದೆಯೇ ಗ್ರಾಮದಲ್ಲಿ ಕಿರುನೀರು ಸರಬರಾಜು ಯೋಜನೆಯಡಿ ತೊಂಬೆ ನಿರ್ಮಿಸಲಾಗಿದೆ.ಆದರೆ, ನೀರು ಪೂರೈಸುವ ಕಾರ್ಯವೇ ನಡೆದಿಲ್ಲ. ಅಳವಡಿಸಿರುವ ಏಕೈಕ ನಲ್ಲಿಪೈಪ್ ಜಾನುವಾರು ಕಟ್ಟಲು ಬಳಕೆಯಾಗುತ್ತಿದೆ. ನೀರು ಸರಬರಾಜು ಮಾಡಲು ನಿರ್ಲಕ್ಷ್ಯವಹಿಸಿರುವ ಗ್ರಾ.ಪಂ. ಆಡಳಿತಕ್ಕೆ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.ಜತೆಗೆ, ಸೂಕ್ತ ಚರಂಡಿ ಸೌಲಭ್ಯವೂ ಇಲ್ಲ. ಇದರ ಪರಿಣಾಮ ಗೃಹಬಳಕೆಯ ನೀರು ಹೊರಹೋಗಲು ತೊಂದರೆ ಯಾಗಿದೆ. ಕೆಲವು ಮನೆಗಳ ಮುಂಭಾಗ ಸಂಗ್ರಹಗೊಂಡು ಕಲ್ಮಷ ವಾತಾವರಣ ಸೃಷ್ಟಿಗೆ ಕಾರಣವಾಗಿದೆ. ಕೆಲವೆಡೆ ರಸ್ತೆ ಯಲ್ಲಿಯೇ ಮಲಿನ ನೀರು ಹರಿಯುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ.ಸುಸಜ್ಜಿತ ಬಾಕ್ಸ್ ಚರಂಡಿ ನಿರ್ಮಿಸಲು ಗ್ರಾ.ಪಂ.ನಿಂದ ಚಾಲನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ದೂರು.

ಹೆಸರಿಗಷ್ಟೇ ಗ್ರಾ.ಪಂ.ನಿಂದ ಬೀದಿದೀಪ ಅಳವಡಿಸಲಾಗಿದೆ. ಆದರೆ, ರಾತ್ರಿವೇಳೆ ಅವುಗಳು ಬೆಳಗುವುದಿಲ್ಲ.ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹೊರಬರಲು ಹೆದರುತ್ತಾರೆ. ಗುಣಮಟ್ಟದ ದೀಪ ಅಳವಡಿಸಲು ಹಿಂದೇಟು ಹಾಕಿರುವುದರಿಂದ ಹುಳುಹುಪ್ಪಟೆ ಕಾಟಕ್ಕೆ ಗ್ರಾಮಸ್ಥರು ಭಯಗೊಳ್ಳುವಂತಾಗಿದೆ.ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಇಲ್ಲಿನವರಿಗೆ ಸಿಕ್ಕಿಲ್ಲ. ವಸತಿ ಸೌಕರ್ಯ ಇಲ್ಲದ ಹಲವು ಕಡುಬಡವರು ಕೂಡ ಗ್ರಾಮದಲ್ಲಿದ್ದಾರೆ. ಅರ್ಹರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕ್ರಮಕೈಗೊಂಡಿಲ್ಲ.

 

ಕೇಂದ್ರ ಸರ್ಕಾರ  ಜಾರಿಗೊಳಿಸಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿಗೆ ಚಾಲನೆ ನೀಡುವ ಪ್ರಯತ್ನವೂ ನಡೆದಿಲ್ಲ. ಯೋಜನೆ ಬಗ್ಗೆ ಕೆಲವರಿಗೆ ಮಾಹಿತಿಯೂ ಇಲ್ಲ.`ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಆದರೆ, ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸ್ಥಳೀಯ ಆಡಳಿತ ಕ್ರಮಕೈಗೊಂಡಿಲ್ಲ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರಿದ್ದಾರೆ. ಅವರಿಗೆ ಸೂರು ಕಲ್ಪಿಸಲು ಜನಪ್ರತಿನಿಧಿಗಳು ಆಸಕ್ತಿವಹಿಸುತ್ತಿಲ್ಲ. ಈಗಲಾ ದರೂ, ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು~ ಎಂಬುದು ಗ್ರಾಮದ ನಿವಾಸಿ ಕೆಂಪಮ್ಮ ಅವರ ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.