ಮಂಗಳವಾರ, ಜನವರಿ 28, 2020
18 °C

ಮೂಲ ಸೌಲಭ್ಯ ವಂಚಿತ ಹರಿಜನ ಕಾಲೊನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿಯ ಕಾಲೊನಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹಂಚಿಕೆಯಾದ ₨ 1 ಕೋಟಿ ಅನುದಾನದಲ್ಲಿ ಪರಿಶಿಷ್ಟ ಜಾತಿಯ ಕಾಲೊನಿಗಳನ್ನು ಕಡೆಗಣಿಸಲಾಗಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.ಪ್ರಸಕ್ತ ಸಾಲಿನ ಸಮಾಜ ಕಲ್ಯಾಣ ಇಲಾ­ಖೆಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ­ಯಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಲ್ಲಿಸಲಾಗಿರುವ ಪ್ರಸ್ತಾವದಲ್ಲಿ ಸಿಂಹಪಾಲು ಪರಿಶಿಷ್ಟ ಜಾತಿಯ ಲಂಬಾಣಿ ತಾಂಡಾಗಳ ಪಾಲಾಗಿದ್ದು, ಅಸ್ಪೃಶ್ಯ ಕಾಲೊನಿಗಳು ಅಭಿವೃದ್ಧಿಯಿಂದ ವಂಚಿತವಾಗುವ ಲಕ್ಷಣಗಳಿವೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.₨ 1ಕೋಟಿ ಅನುದಾನ ಹಂಚಿಕೆ ಕುರಿತಂತೆ ಕ್ಷೇತ್ರದ ಶಾಸಕ ಎಲ್‌.ಬಿ.ಪಿ. ಭೀಮಾನಾಯ್ಕ, ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಸಾಮಾಜಿಕ ನ್ಯಾಯ ಗಾಳಿಗೆ ತೂರಿ, ಶೇ 70 ಅನುದಾನವನ್ನು ಪರಿಶಿಷ್ಟ ಜಾತಿಯ ತಮ್ಮ ಸ್ವಜಾತಿ ಬಂಜಾರ ಸಮು­ದಾ­ಯದ ತಾಂಡಾಗಳಿಗೆ ಹಂಚಿಕೆ ಮಾಡಿ ಅದೇ ಪರಿ­ಶಿಷ್ಟ ಜಾತಿಯ ಅಸ್ಪೃಶ್ಯ ಜನಾಂಗಗಳ ಕಾಲೊ­ನಿ­ಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ತಾಲ್ಲೂಕು ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಚ್‌.ದೊಡ್ಡಬಸಪ್ಪ ಡಿ. 5ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.ಪ್ರಸಕ್ತ ವರ್ಷದಿಂದ ರಾಜ್ಯ ಸರಕಾರ ಹರಿಜನ ಸಹಿತ ಭೋವಿ, ಬಂಜಾರ, ಕೊರಮ ಹಾಗೂ ಇತರೇ ಪರಿಶಿಷ್ಟ ಜಾತಿಗಳ ಕಾಲೊನಿಗಳ ಅಭಿವೃದ್ಧಿಗಾಗಿ ವಿಧಾನಸಭಾ ಕ್ಷೇತ್ರವಾರು ತಲಾ ₨ 1 ಕೋಟಿ ಅನುದಾನ ಒದಗಿಸಿದ್ದರೂ ಶಾಸಕ ಭೀಮಾನಾಯ್ಕ ಅವರು ಅನುದಾನ ಹಂಚಿಕೆ ಮಾಡಿರುವ ಪಟ್ಟಿ ಸ್ವಜನ ಪಕ್ಷಪಾತದಿಂದ ಕೂಡಿದೆ ಎಂದು ಅವರು ಕಿಡಿ ಕಾರಿದ್ದಾರೆ.ಅಸ್ಪೃಶ್ಯ ಜನಾಂಗಗಳ ಸಮಗ್ರ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಅನುದಾನ ಹಂಚಿಕೆ ಮತ್ತು ಬಳಕೆ ವಿಚಾರದಲ್ಲಿ ಪೂರಕ ಮಾರ್ಗ­ಸೂಚಿಗಳನ್ನು ರೂಪಿಸಿ ಜಾತಿಯ ಹಲವು ವಂಚಿತ ಜನಾಂಗಗಳ ಕಾಲೊನಿಗಳ ಅಭಿವೃದ್ಧಿಗೆ ಸಹಕಾರಿ­ಯಾಗುವಂತೆ ನೀತಿಗಳನ್ನು ಅಳವಡಿಸಬೇಕಾ­ಗಿತ್ತು. ಆದರೆ, ಶಾಸಕರು ಒಂದು ಕೋಟಿ ಅನು­ದಾನ ಹಂಚಿಕೆ ಮಾಡಿರುವ ರೀತಿ ನೋಡಿದರೆ ಅನುದಾನದ ಸದ್ಬಳಕೆ ಹಾಗೂ ಪರಿಶಿಷ್ಟ ಜಾತಿಯ ಕಾಲೊನಿಗಳ ಸರ್ವತೋಮುಖ ಅಭಿವೃದ್ಧಿ ಕನ್ನಡಿಯೊಳಗಿನ ಗಂಟು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕ್ಷೇತ್ರ ವ್ಯಾಪ್ತಿಯ ಹರೇಗೊಂಡನಹಳ್ಳಿ, ಕಂದಗಲ್ಲು, ಬತ್ತನಹಳ್ಳಿ, ಅಲಬೂರು ಮತ್ತು ಅಡವಿಆನಂದದೇವನಹಳ್ಳಿ ಗ್ರಾಮಗಳ ಪರಿಶಿಷ್ಟ ಜಾತಿಯ ಕಾಲೊನಿಗಳ ಸಿಸಿ ರಸ್ತೆ ನಿರ್ಮಾಣ­ಕ್ಕಾಗಿ ಒಟ್ಟಾರೆ ₨ 30ಲಕ್ಷ ಹೊರತುಪಡಿಸಿದರೆ ಉಳಿದ ₨ 70ಲಕ್ಷ ಅನುದಾನ ಬಂಜಾರ ಸಮು­ದಾಯದ ತಾಂಡಾಗಳಿಗೆ ಹಂಚಿಕೆಯಾಗಿದೆ. ಪಟ್ಟಣದ ಘೋರ್ಪಡೆ ಶಾಲೆಯ ಹತ್ತಿರದ ಎಸ್‌ಸಿ ಕಾಲೊನಿಯಲ್ಲಿ ₨ 6ಲಕ್ಷ ವೆಚ್ಚದ ಚರಂಡಿ ಸಹಿತ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಪ್ರಸ್ತಾವವನ್ನು ಪಟ್ಟಿ ಒಳಗೊಂಡಿದ್ದರೂ ಶಾಲೆಯ ಹತ್ತಿರ ಎಸ್‌ಸಿ ಕಾಲೊನಿಯೇ ಇಲ್ಲ. ₨ 6ಲಕ್ಷ ಶಾಸಕರ ಹಿಂಬಾಲಕ ಗುತ್ತಿಗೆದಾರರ ಪಾಲಾಗಲಿದೆ ಎಂದು ಕೆಚ್ಚಿನಬಂಡಿ ದುರುಗಪ್ಪ ಆರೋಪಿಸಿದ್ದಾರೆ. ಬಿಡುಗಡೆಯಾಗಿರುವ ಅನುದಾನ ಪರಿಶಿಷ್ಟ ಜಾತಿಯ ಸ್ಪೃಶ್ಯ ಜನ ಸಮುದಾಯದ ತಾಂಡಾಗಳಿಗೆ ಬಳಕೆಯಾಗುತ್ತಿರುವುದು ಖೇದಕರ. ಶಾಸಕರು ಸಿದ್ಧಪಡಿಸಿರುವ ಅನುದಾನ ಹಂಚಿಕೆಯ ಪಟ್ಟಿಯನ್ನು ತಡೆಹಿಡಿಯಬೇಕು. ಅನುದಾನದ ಅಸಮರ್ಪಕ ಅನುಷ್ಠಾನ ಕುರಿತಂತೆ ಮಧ್ಯ ಪ್ರವೇಶಿಸಿ ಸಾಮಾಜಿಕ ನ್ಯಾಯದನ್ವಯ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ಸಂಘದ ಉಪಾಧ್ಯಕ್ಷರಾದ ಪಿ.ಫಕೀರಪ್ಪ, ಎಚ್‌.ಲಕ್ಷ್ಮಣ, ಸಿ.ಶಿವಾನಂದಪ್ಪ, ಯಡ್ರಾಮನಹಳ್ಳಿ ಮರಿಯಪ್ಪ ಮತ್ತು ಕಾರ್ಯದರ್ಶಿ ಕೆ.ಮಹೇಶ್‌ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)