ಮಂಗಳವಾರ, ಜನವರಿ 28, 2020
17 °C

ಮೂವತ್ತೈದರ ಲಾವಣ್ಯಕ್ಕೆ ಪಂಚರಂಗಿ ರಂಗು

ಪ್ರಜಾವಾಣಿ ವಾರ್ತೆ, Updated:

ಅಕ್ಷರ ಗಾತ್ರ : | |

ಬೈಂದೂರು: ನಾಟಕದ ಗೀಳು ತಗಲಿಸಿಕೊಂಡಿದ್ದ ಬೈಂದೂರಿನ ಕೆಲವು ಯುವಕರು ಪ್ರದರ್ಶನದ ತುಡಿತ ನೆರವೇರಿಸಿಕೊಳ್ಳಲು ಒಂದಾದುದು 1977ರಲ್ಲಿ. ಹಾಗೆ ಒಂದೆಡೆ ಸೇರಿದ ಯು. ಶ್ರೀನಿವಾಸ ಪ್ರಭು, ಬಿ. ಗಣೇಶ ಕಾರಂತ, ಬಿ. ಕೃಷ್ಣ ಅಡಿಗ, ರಾಮ ಟೈಲರ್, ಅನಿಲ್‌ಕುಮಾರ್, ಆರ್. ಡಿ. ಟೈಲರ್, ವಿ. ಆರ್. ಬಾಲಚಂದ್ರ, ಉಮೇಶಕುಮಾರ್, ಮೋಹನ ನಾಯಕ್, ರತ್ನಾಕರ ಆಚಾರ್ ಆರಂಭದಲ್ಲಿ ತಮ್ಮ ತಂಡವನ್ನು ಗುರುತಿಸಿಕೊಂಡದ್ದು `ತರುಣ ಕಲಾವೃಂದ~ ಎಂಬ ಹೆಸರಿನಿಂದ.ಅವರ ರಂಗ ಚಟುವಟಿಕೆಯಿಂದ ಆಕರ್ಷಿತರಾದ ಇನ್ನಷ್ಟು ಸಹ ಮನಸ್ಕರು ಅವರೊಡನೆ ಕೈಜೋಡಿಸಿದಾಗ ಮೂಡಿಬಂತು `ಲಾವಣ್ಯ ಬೈಂದೂರು~ ಎಂಬ ರಂಗ ಸಂಘಟನೆ. ನಾಟಕ ತಾಲೀಮು, ಪ್ರದರ್ಶನಗಳ ಮೂಲಕ ಸಕ್ರಿಯವಾದ ಈ ತಂಡ 1980ರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶಿಸಿದ `ರೊಟ್ಟಿಋಣ~ಕ್ಕೆ ಮೊದಲ ಬಹುಮಾನ ಮತ್ತು ಮೂರು ಅನ್ಯ ಪಾರಿತೋಷಕಗಳು ಲಭಿಸಿದಾಗ ಅದರ ಮುನ್ನಡೆಗೆ ಅಗತ್ಯವಾದ ಆತ್ಮ ವಿಶ್ವಾಸ, ಸ್ವೀಕಾರಾರ್ಹತೆ ಜತೆಯಾದುವು. ಆ ಬಳಿಕ ಅದು ಹಿಂದೆ ನೋಡಿಲ್ಲ ಎನ್ನುವುದಕ್ಕೆ ಅದರ ಸಾಧನೆಗಳೇ ಸಾಕ್ಷಿ.ಸಾಂಪ್ರದಾಯಿಕ ನಾಟಕಗಳ ಸಿದ್ಧತೆ ಮತ್ತು ಪ್ರದರ್ಶನದಿಂದ ಆರಂಭವಾದ ಅದರ ರಂಗಾಭಿಯಾನಕ್ಕೆ ಸುರೇಶ ಆನಗಳ್ಳಿ ನೀಡಿದ ರಂಗ ತರಬೇತಿ, ಕೂರಾಡಿ ಸೀತಾರಾಮ ಶೆಟ್ಟಿ ಅವರ ನಿರ್ದೇಶನ ಸಾಂಗತ್ಯ ತಂದುದು ಮಹತ್ವದ ತಿರುವು. ಅದು ಹೊಸ ಅಲೆಯ ನಾಟಕಗಳತ್ತ ಹೊರಳಲು ಸಹಕಾರಿಯಾದುವು.

 

ಅದರಿಂದೀಚೆಗೆ ಸಂಗೀತ, ನಿರ್ದೇಶನ, ರಂಗ ಸಜ್ಜಿಕೆ, ಪ್ರಸಾಧನ, ಬೆಳಕು ಸಂಯೋಜನೆಗಳಂತಹ ನೂತನ ರಂಗವಿಚಾರ ಮತ್ತು ರಂಗತಂತ್ರಗಳಲ್ಲಿ `ಲಾವಣ್ಯ~ ಸ್ವಾವಲಂಬಿ, ಸ್ವಯಂಪೂರ್ಣ. `ಲಾವಣ್ಯ~ ಈವರೆಗೆ ರಾಜ್ಯದಾದ್ಯಂತ ಸುಮಾರು 150 ನಾಟಕಗಳ 500ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದೆ. ರಾಜ್ಯಮಟ್ಟದ 21ನಾಟಕ ಸ್ಪರ್ಧೆಗಳಲ್ಲಿ ತನ್ನ ಛಾಪು ಒತ್ತಿ, 101 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮಕ್ಕಳಿಗೂ ರಂಗ ತರಬೇತಿ ನೀಡಿ, ಅವರ ಪ್ರದರ್ಶನಗಳಿಗೂ ಅವಕಾಶ ಕಲ್ಪಿಸಿ ಅದು ಸ್ಥಾಪಿಸಿದ ಪರಂಪರೆಯ ನಿರಂತರತೆಗೂ ಕೊಡುಗೆ ನೀಡುತ್ತಿದೆ.ತನ್ನ ಬೆಳವಣಿಗೆ ಜತೆ ಪರಿಸರದ ಜನರ ಸಹೃದಯತೆ ಸಮೃದ್ಧಗೊಳಿಸುವತ್ತ `ಲಾವಣ್ಯ~ ನಡೆಸಿದ ಪ್ರಯತ್ನಗಳು ಉಲ್ಲೇಖಾರ್ಹ. 1987ರಲ್ಲಿ ಆಚರಿಸಿದ ದಶಮಾನೋತ್ಸವ ಸಂದರ್ಭ 12 ದಿನಗಳ, 1997ರ ವಿಂಶತಿ ಅಂಗವಾಗಿ ಹಮ್ಮಿಕೊಂಡ 14 ದಿನಗಳ, 2002ರ ಬೆಳ್ಳಿಹಬ್ಬ ನಿಮಿತ್ತವಾದ 16 ದಿನಗಳ, 2007ರ ತ್ರಿಂಶತಿ ಉದ್ದೇಶದ ಎಂಟು ದಿನಗಳ ಮತ್ತು 2009ರ ರಂಗಶ್ರೀ ಹೆಸರಿನಲ್ಲಿ ಆಯೋಜಿಸಿದ್ದ 11 ದಿನಗಳ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳು ಬೈಂದೂರಿನ ಜನರಿಗೆ ರಾಜ್ಯದ ವಿವಿಧೆ ಕಡೆಯ ತಂಡಗಳ ಪ್ರದರ್ಶನ ಕಾಣುವ, ವಿಭಿನ್ನ ರಂಗಪ್ರಯೋಗಳನ್ನು ನೋಡಿ ಮುದಗೊಳ್ಳುವ ಅವಕಾಶ ಒದಗಿಸಿಕೊಟ್ಟಿತ್ತು.`ಲಾವಣ್ಯ~ ತನ್ನ ಶೈಶವ, ಬಾಲ್ಯ, ತಾರುಣ್ಯಗಳನ್ನು ಹಿಂದಿಕ್ಕಿ ಪ್ರೌಢಾವಸ್ಥೆಯ ಪರಿಧಿ ದಾಟಿ  ಪ್ರಬುದ್ಧತೆಯ ಸೀಮೆಯನ್ನು ಪ್ರವೇಶಿಸಿದೆ. ತನಗೆ ಸ್ವಂತ ನೆಲೆಯೆನಿಸಿದ `ರಂಗ ಮನೆ~ ನಿರ್ಮಿಸಿಕೊಂಡಿದೆ. ಅದನ್ನು ಇಂದಿನ ಸ್ಥಿತಿಗೇರಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವ ಶ್ರೀನಿವಾಸ ಪ್ರಭು ಮತ್ತು ಗಣೇಶ ಕಾರಂತ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.ಈ ಸಂಘಟನೆ ಬೈಂದೂರಿನಲ್ಲಿ ಹುಟ್ಟುಹಾಕಿರುವ ಸದಭಿರುಚಿಯ ಸಾಂಸ್ಕೃತಿಕ ಆವರಣ ಬಹುದೊಡ್ಡ ಕೊಡುಗೆ. ಅದು ವರ್ಷವರ್ಷ ನಡೆಸುತ್ತಿರುವ ಗುಣಮಟ್ಟದ ರಂಗ ಪ್ರಯೋಗಗಳಿಗೆ ಪ್ರೇಕ್ಷಕರ ಪ್ರತಿಸ್ಪಂದನ ಆಶಾದಾಯಕ.`ಲಾವಣ್ಯ~ಕ್ಕೆ ಈಗ 35 ವರ್ಷ ಪ್ರಾಯ. ಅದರ ನೆನಪಿಗಾಗಿ ಈಗ ಮತ್ತೊಂದು ರಂಗಸಂಭ್ರಮ `ಪಂಚರಂಗಿ ನಾಟಕೋತ್ಸವ~ ಇದೇ 25ರಿಂದ 29ರ ವರೆಗೆ ನಡೆಯಲಿದೆ. ಈ ಐದು ದಿನ ಕ್ರಮವಾಗಿ ಬೆಂಗಳೂರಿನ ರಂಗ ಸಂಪದದ `ಮರಿಯಮ್ಮಳ ಮೂರನೇ ಮದುವೆ~ (ಬುಧವಾರ), ಉಡುಪಿ ರಥಬೀದಿ ಗೆಳೆಯರ `ಮಿಸ್ಟೇಕ್~ ( ಗುರುವಾರ), ಸಾಗರದ ಸ್ಪಂದನ `ಕರಿಭಂಟ~ (ಶುಕ್ರವಾರ), ಬೆಂಗಳೂರಿನ ರಂಗ ಸೌರಭದ `ಮೈಸೂರು ಮಲ್ಲಿಗೆ~ (ಶನಿವಾರ), ಅದೇ ತಂಡದ `ಗಂಗಾವತರಣ~ (ಭಾನುವಾರ) ಪ್ರದರ್ಶನಗೊಳ್ಳಲಿವೆ. ಪ್ರತಿದಿನ ಹಿರಿಯ ರಂಗಕರ್ಮಿಗಳ ಸನ್ಮಾನವೂ ನಡೆಯಲಿದೆ.ಎಸ್. ಜನಾರ್ದನ ಮರವಂತೆ

ಪ್ರತಿಕ್ರಿಯಿಸಿ (+)