ಭಾನುವಾರ, ಜೂನ್ 20, 2021
29 °C
ದಾವಣಗೆರೆ ಜಿಲ್ಲೆ: ಬಾಕಿ ಹಣಕ್ಕಾಗಿ ರೈತರ ಪರದಾಟ

ಮೆಕ್ಕೆಜೋಳ, ಭತ್ತ ಖರೀದಿ: ರೂ 127 ಕೋಟಿ ಬಾಕಿ

ಪ್ರಜಾವಾಣಿ ವಾರ್ತೆ/ ಎಲ್‌.ಮಂಜುನಾಥ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮೊದಲು ಖರೀದಿ ಕೇಂದ್ರಗಳ ಅವ್ಯವಸ್ಥೆ, ಗೋದಾಮು ಸಮಸ್ಯೆಗಳಿಂದ ಕಂಗೆಟ್ಟಿದ್ದ ಜಿಲ್ಲೆಯ ಮೆಕ್ಕೆಜೋಳ ಮತ್ತು ಭತ್ತ  ಬೆಳೆದ ರೈತರು, ಇದೀಗ ತಮಗೆ ಬರಬೇಕಾಗಿರುವ ಬಾಕಿ ಹಣಕ್ಕಾಗಿ ಗೋಳಾಡುವಂತಾಗಿದೆ. ಖರೀದಿ ಕೇಂದ್ರಗಳಿಗೆ ಭತ್ತ ಮತ್ತು ಮೆಕ್ಕೆಜೋಳ ಮಾರಿದ ರೈತರಿಗೆ ಜಿಲ್ಲಾಡಳಿತದಿಂದ ಸುಮಾರು ರೂ 127 ಕೋಟಿ ಬಾಕಿ ಬರಬೇಕಾಗಿದೆ.ಜಿಲ್ಲೆಯ ದಾವಣಗೆರೆ, ಹರಿಹರ ಮಲೇಬೆನ್ನೂರು, ಹೊನ್ನಾಳಿ ಹರಪನಹಳ್ಳಿ, ಜಗಳೂರು, ಮಾಯಕೊಂಡ, ಚನ್ನಗಿರಿ ಮತ್ತು ಬಸವಾಪಟ್ಟಣ ಇಲ್ಲಿನ ಒಟ್ಟು 9 ಖರೀದಿ ಕೇಂದ್ರಗಳಲ್ಲಿ ಕಳೆದ ವರ್ಷದ ನವೆಂಬರ್‌ 25ರಿಂದ ಫೆಬ್ರುರವರಿ 28ರ ವರೆಗೆ ಸುಮಾರು ರೂ 251.23 ಕೋಟಿ ಮೊತ್ತದ ಮೆಕ್ಕೆಜೋಳ ಮತ್ತು ಭತ್ತ ಖರೀದಿಯಾಗಿದೆ.ಆದರೆ ಸಂಬಂಧಪಟ್ಟ ರೈತರ ಖಾತೆಗೆ ಇದುವರೆಗೆ ಕೇವಲ ರೂ 123. 93 ಕೋಟಿ ಹಣ ಮಾತ್ರ ಪಾವತಿಯಾಗಿದ್ದು, ಸುಮಾರು ರೂ 127 ಕೋಟಿ ಹಣ ಬಾಕಿಯಿಡಲಾಗಿದೆ. ಬಾಕಿ ಹಣ ಪಡೆಯಲು ಹರಸಾಹಸ ಪಡುತ್ತಿರುವ ರೈತರಲ್ಲಿ ಈ ವಿಳಂಬ ಆತಂಕ ಉಂಟು ಮಾಡಿದೆ.ಉತ್ತಮ ಲಾಭದ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರು ಮೆಕ್ಕೆಜೋಳ ಮತ್ತು ಭತ್ತವನ್ನು ಬೆಳೆದಿದ್ದರು. ಆದರೆ ಸೂಕ್ತ ಬೆಲೆ ಸಿಗದೇ ಪರದಾಡಿ, ಬೆಂಬಲ ಬೆಲೆಗಾಗಿ ರಾಜ್ಯದಾದ್ಯಂತ ಹೋರಾಟ, ಪ್ರತಿಭಟನೆಗಳನ್ನು ನಡೆಸಿದ್ದರು. ನಂತರ ಸರ್ಕಾರದ ಖರೀದಿ ಕೇಂದ್ರಗಳನ್ನು ತೆರೆಯಿತು. ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ರೂ 1310 ಮತ್ತು ಭತ್ತಕ್ಕೆ ರೂ 1600 ಬೆಂಬಲ ಬೆಲೆ ಘೋಷಿಸಲಾಗಿತ್ತು.ದಾಖಲೆಗಳ ಪರಿಶೀಲನೆ: ನವೆಂಬರ್‌ 25 ರಿಂದ ಫೆಬ್ರುವರಿ 28ರವರೆಗೆ ಜಿಲ್ಲೆಯ 14,242 ರೈತರಿಂದ ಒಟ್ಟು ರೂ 251.23 ಕೋಟಿ ಮೌಲ್ಯದ

ಮೊತ್ತದ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಮಾಡಲಾಗಿದೆ. ಈಗಾಗಲೇ ಒಟ್ಟು ರೂ 123.93 ಕೋಟಿ ಹಣವನ್ನು ರೈತರ ಖಾತೆಗೆ ಪಾವತಿಸಲಾಗಿದೆ (ಜನವರಿ 26ರವರೆಗೆ). ಇನ್ನೂ ರೂ 127.29 ಕೋಟಿ ಹಣವನ್ನು ನೀಡಲು ಬಾಕಿಯಿದೆ. ಈ ಉದ್ದೇಶಕ್ಕಾಗಿ ಸರ್ಕಾರ ರೂ 62 ಕೋಟಿ ಬಿಡುಗಡೆಗೆ ಮಾಡುವ ಹಂತದಲ್ಲಿದೆ. ಅದು ಬಂದ ತಕ್ಷಣ ಹಿರಿತನದ (ಮೊದಲು ಮಾರಿದವರ) ಆಧಾರದ ಮೇಲೆ ರೈತರಿಗೆ ಹಣ ಸಂದಾಯ ಮಾಡಲಾಗುವುದು.ಜನವರಿ 27ರಿಂದ ಫೆಬ್ರುವರಿ 28ರವರೆಗೆ ಮೆಕ್ಕೆಜೋಳ ಮತ್ತು ಭತ್ತ ಮಾರಾಟ ಮಾಡಿದ ರೈತರ ಹಣ ಬಾಕಿ ಇದೆ. ಕೆಲವು ರೈತರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಜಿಲ್ಲೆಯಲ್ಲಿ ರೂ 222.91 ಕೋಟಿ ಮೌಲ್ಯದ ಮೆಕ್ಕೆಜೋಳ ಮತ್ತು  ರೂ 28.31 ಕೋಟಿ ಮೌಲ್ಯದ ಭತ್ತ ಖರೀದಿಯಾಗಿದೆ ಎನ್ನುತ್ತಾರೆ ರಾಜ್ಯ ಉಗ್ರಾಣ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ತಿಮ್ಮಣ್ಣ.‘ನೀತಿ ಸಂಹಿತೆ ನೆಪ’

ಚುನಾವಣೆ ದಿನಾಂಕ ಘೋಷಣೆಯಾಗುವ ಮುಂಚೆಯೇ ಖರೀದಿ ಪ್ರಕ್ರಿಯೆ ಆರಂಭವಾಗಿತ್ತು. ಆರಂಭದ ದಿನಗಳಲ್ಲಿ ಕೆಲವು ರೈತರ ಖಾತೆಗೆ ಹಣ ಸಂದಾಯವಾಯಿತು. ನಂತರ ದಿನಗಳಲ್ಲಿ ರೈತರಿಗೆ ಹಣ ನೀಡುವಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹಣ ಕೇಳಲು ಹೋದರೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ನೀತಿಸಂಹಿತೆ ಜಾರಿಯಲ್ಲಿದೆ ಎಂಬ ಸಬೂಬು  ನೀಡುತ್ತಾರೆ. ನೀತಿಸಂಹಿತೆಗೂ ರೈತರಿಗೆ ಹಣ ನೀಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ಬಗ್ಗೆ ಗಮನಹರಿಸಿ ರೈತರ ಬಾಕಿ ಹಣ ಸಂದಾಯ ಮಾಡಿಸಲು ಕ್ರಮಕೈಗೊಳ್ಳಬೇಕು. ಕೃಷಿ ಮಾರುಕಟ್ಟೆ ಸಚಿವ ಶಾಮನೂರು - ಶಿವಶಂಕರಪ್ಪ ಅವರ ಜಿಲ್ಲೆಯಲ್ಲೇ ರೈತರಿಗೆ ಈ ದುಃಸ್ಥಿತಿ ಇರುವುದು ವಿಪರ್ಯಾಸ.

ಬಿ.ಎಂ.ಸತೀಶ್‌, ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ

‘ಸಾಲದಲ್ಲಿ ಮುಳುಗಿದ್ದೇವೆ’

ಫೆ. 4ರಂದು ಜಿಲ್ಲಾಡಳಿತ 478 ಕ್ವಿಂಟಲ್‌ ಮೆಕ್ಕೆಜೋಳ ಖರೀದಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಬರ­ಬೇಕಾದ ₨ 6.32 ಲಕ್ಷ ಇದು­ವರೆಗೂ ಕೊಟ್ಟಿಲ್ಲ. ಈ ಹಣ ನಂಬಿ­ಕೊಂಡು ಮಗಳ ಮದುವೆ ಹಮ್ಮಿ­ಕೊಂಡಿದ್ದೇವೆ. ಮೆಕ್ಕೆಜೋಳ ಬೆಳೆ ಬೆಳೆಯಲು ಸಾಕಷ್ಟು ಸಾಲ ಮಾಡಲಾಗಿದೆ.

–ಹೊನ್ನೂರು ಮುನಿಯಪ್ಪ, ರೈತ ಮುಖಂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.