ಗುರುವಾರ , ಮೇ 13, 2021
18 °C

ಮೆಗಾಸಿಟಿ ಯೋಜನೆ: ಅಕ್ರಮ ನಡೆಸಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮೆಗಾಸಿಟಿ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ರಾಜಕೀಯವಾಗಿ ನನ್ನ ಯಶಸ್ಸು ಸಹಿಸದ ವಿರೋಧಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಅದನ್ನು ಧೈರ್ಯವಾಗಿ ಎದುರಿಸುತ್ತೇನೆ~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಗುರುವಾರ ಇಲ್ಲಿ ಹೇಳಿದರು.`ಹದಿನೈದು ವರ್ಷಗಳ ಹಿಂದೆ ಮೆಗಾಸಿಟಿ ಯೋಜನೆ ಹಮ್ಮಿಕೊಂಡಿದ್ದು, ಇವತ್ತಿನವರೆಗೂ ಈ ವಿಚಾರದಲ್ಲಿ ನನಗೆ ತೊಂದರೆ ನೀಡಲಾಗುತ್ತಿದೆ. ಈಗಲೂ  ಕಚೇರಿ ಇದೆ. ತೊಂದರೆ ಇರುವವರು ಅಲ್ಲಿಗೆ ಹೋಗಿ ಪರಿಹಾರ ಪಡೆಯಬಹುದು. ನಾನೆಲ್ಲಿಗೂ ಓಡಿ ಹೋಗಿಲ್ಲ~ ಎಂದು ಸುದ್ದಿಗಾರರಿಗೆ ತಿಳಿಸಿದರು.`ನಮ್ಮ ಸಂಸ್ಥೆ ಕಾರ್ಪೂರೇಟ್ ಸಂಸ್ಥೆ ಅಲ್ಲ. ಅದೊಂದು ಲಿಮಿಟೆಡ್ ಸಂಸ್ಥೆ. ಇದುವರೆಗೂ ಬಹುತೇಕ ಎಲ್ಲ ಸಂಸ್ಥೆಗಳೂ ತನಿಖೆ ನಡೆಸಿವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಸಿಐಡಿಯಿಂದಲೂ ತನಿಖೆ ಮಾಡಿಸಲಾಯಿತು. ಇದರ ನಂತರ ಕೇಂದ್ರದ ಗಂಭೀರ ವಂಚನೆ ತನಿಖಾ ಸಂಸ್ಥೆಗೆ (ಎಸ್‌ಎಫ್‌ಐಓ) ದೂರು ಕೊಟ್ಟು ಮತ್ತೊಮ್ಮೆ ಕಿರುಕುಳ ನೀಡಲಾಗುತ್ತಿದೆ~ ಎಂದು ದೂರಿದರು.`ಯೋಜನೆಯಿಂದ ವಂಚನೆಗೆ ಒಳಗಾದವರು ಯಾರಾದರೂ ಇದ್ದರೆ ಅವರು ಮೆಗಾಸಿಟಿ ಕಚೇರಿಗೆ ಹೋಗಿ ಕೇಳಲಿ. ಮೆಗಾಸಿಟಿ ಯೋಜನೆಗೆ ನಾನೊಬ್ಬ ನಿರ್ದೇಶಕ. ವೈಯಕ್ತಿಕವಾಗಿ ನನ್ನ ಮೇಲೆ ಯಾವ ದೂರೂ ಇಲ್ಲ. ಹಾಗೇನಾದರೂ ಇದ್ದಲ್ಲಿ ಕ್ರಮ ತೆಗೆದುಕೊಳ್ಳಲಿ~ ಎಂದು ಸವಾಲು ಹಾಕಿದರು.`ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹೇಳಿಕೆ ಬಗ್ಗೆ ನನಗೇನೂ ಗೊತ್ತಿಲ್ಲ. ಎಸ್‌ಎಫ್‌ಐಓ ಮುಂದೆಯೂ ನಮ್ಮ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದು, ವರದಿ ಬಂದ ನಂತರ ಅದಕ್ಕೆ ಉತ್ತರಿಸುವೆ~ ಎಂದರು.

ಜಮ್ಮಾ ಬಾಣೆ/ ಮಲೆ ಭೂಮಿ ಸರ್ಕಾರದ ವಶಕ್ಕೆ

ಬೆಂಗಳೂರು:ಜಮ್ಮಾ ಬಾಣೆ/ ಜಮ್ಮಾ ಮಲೆ ಭೂಮಿ ಮೇಲಿನ ಒಡೆತನವನ್ನು ಸಂಪೂರ್ಣವಾಗಿ ಸರ್ಕಾರದ ವಶಕ್ಕೆ ಪಡೆಯುವುದಾಗಿ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಗುರುವಾರ ಇಲ್ಲಿ ಹೇಳಿದರು.ಕೊಡಗು ಜಿಲ್ಲೆಯ ವಿರಾಜಪೇಟೆ ಸೇರಿದಂತೆ ಇತರ ಕಡೆ ಏಲಕ್ಕಿ ಮತ್ತು ಇತರ ಸಾಂಬಾರು ಪದಾರ್ಥಗಳ ಕೃಷಿಗಾಗಿ ಅರಣ್ಯ ಭೂಮಿಯನ್ನೇ ರೈತರಿಗೆ ನೀಡಲಾಗಿತ್ತು. ಬ್ರಿಟಿಷರ ಆಡಳಿತ ಅವಧಿಯಲ್ಲಿ (1900) ನೀಡಿದ್ದ ಈ ಭೂಮಿಯನ್ನು ನೀಡಲು ರೈತರು ಕೂಡ ಒಪ್ಪಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸ್ಪೀಕರ್ ಕೆ.ಜಿ.ಬೋಪಯ್ಯ, ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಭೆ ಸೇರಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಭೂಮಿ ಬಳಕೆ ಮಾಡುತ್ತಿದ್ದ ರೈತರಿಗೆ ಪರಿಹಾರ ನೀಡಲು 60 ಕೋಟಿ ರೂಪಾಯಿ ಬೇಕಾಗುತ್ತದೆ. ಈ ವಿಷಯ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ವಿರಾಜಪೇಟೆ ಸೇರಿದಂತೆ ಅದರ ಸುತ್ತಲ ಪ್ರದೇಶ ನಿತ್ಯಹರಿದ್ವರ್ಣದ ದಟ್ಟ ಅರಣ್ಯವನ್ನು ಹೊಂದಿದೆ. ಹೀಗಾಗಿ ಅದನ್ನು ಸರ್ಕಾರದ ವಶಕ್ಕೆ ತೆಗೆದುಕೊಂಡು, ನಿರ್ವಹಿಸಲು ಸರ್ಕಾರ ತೀರ್ಮಾನಿಸಿದೆ ಎಂದು ವಿವರಿಸಿದರು. ಒಟ್ಟು 18,750 ಎಕರೆ ವಿಸ್ತೀರ್ಣದ ಜಮ್ಮಾ ಬಾಣೆ/ಜಮ್ಮಾ ಮಲೆ ಇವೆ ಎಂದೂ ಅವರು ಹೇಳಿದರು.ಆನೆ ಹಾವಳಿ: ಮಳವಳ್ಳಿ, ಸಕಲೇಶಪುರ ಮತ್ತು ಹಾಸನದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಅದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಮಳವಳ್ಳಿಯಲ್ಲಿ ಶುಕ್ರವಾರ ಸ್ಥಳೀಯರ ಜತೆ ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.ಆನೆ ಪಥದಲ್ಲಿ ಹೆಚ್ಚು ಕಂದಾಯ ಭೂಮಿ ಇರುವುದರಿಂದ ಅವುಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೇ ಹಸ್ತಾಂತರಿಸುವ ಕುರಿತು ಆ ಇಲಾಖೆ ಜತೆಗೂ ಮಾತುಕತೆ ನಡೆಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.