ಮಂಗಳವಾರ, ಜೂನ್ 15, 2021
27 °C

ಮೆಟ್ರೊ ನಿಲ್ದಾಣದಲ್ಲಿ ಗಾಜಿನ ತಡೆಗೋಡೆ ಇದ್ದಿದ್ದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ರೈಲು ಬಂದಾಗ ಮಾತ್ರ ಹತ್ತಿಳಿಯಲು ಅವಕಾಶ ಇದ್ದಿದ್ದರೆ...! ರೈಲು ಎಂಜಿನ್‌ಗೆ ಎದುರಾಗಿ ಹಳಿಗಳ ಮೇಲೆ ಬೀಳಲು ಅವಕಾಶ ಇಲ್ಲದಿದ್ದರೆ..!ವಿದ್ಯಾರ್ಥಿಯೊಬ್ಬ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಹಾಂಕಾಂಗ್, ಸಿಂಗಪುರ ಸೇರಿದಂತೆ ವಿಶ್ವದ ಪ್ರಮುಖ ಮಹಾನಗರಗಳ ಮೆಟ್ರೊ ನಿಲ್ದಾಣಗಳಲ್ಲಿ ರೈಲು ಹತ್ತಲು ಅಥವಾ ಇಳಿಯಲು ಅವಕಾಶವಾಗುವ ಹಾಗೆ ಗಾಜಿನ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಈ ಗಾಜಿನ ತಡೆಗೋಡೆಗಳಲ್ಲಿ ಇರುವ ಸ್ವಯಂಚಾಲಿತ ಬಾಗಿಲುಗಳು ರೈಲು ಬಂದಾಗ ಮಾತ್ರ ತೆರೆದುಕೊಳ್ಳುತ್ತವೆ, ಉಳಿದಂತೆ ಮುಚ್ಚಿರುತ್ತವೆ. ಈ ಬಾಗಿಲುಗಳಿಗೆ `ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ಸ್‌~ ಎಂದು ಕರೆಯಲಾಗುತ್ತದೆ. ದೆಹಲಿ ಮೆಟ್ರೊದ ಎರಡು ನಿಲ್ದಾಣಗಳಲ್ಲಿ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ.ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್‌ಸಿಎಲ್) ಮಾತೆತ್ತಿದರೆ `ನಗರದ ಮೆಟ್ರೊ ನಿಲ್ದಾಣಗಳು ವಿಶ್ವದರ್ಜೆಯವು, ಪ್ರಯಾಣಿಕರ ಸುರ ಕ್ಷತೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ~ ಎಂದು ಹೇಳುತ್ತಾರೆ. ಆದರೆ ನಿಲ್ದಾಣಗಳಲ್ಲಿ ಹಳಿಗಳ ಮೇಲೆ ಬೀಳದ ಹಾಗೆ ತಡೆಯುವ ವ್ಯವಸ್ಥೆಯನ್ನು ಮಾಡಿಲ್ಲ; ಮಾಡುವ ಬಗ್ಗೆ ಚಿಂತನೆ ಮಾಡಿದಂತಿಲ್ಲ.1984ರಲ್ಲಿ ಕೋಲ್ಕತ್ತ ಮೆಟ್ರೊ ರೈಲು ಸಂಚಾರ ಪ್ರಾರಂಭವಾಯಿತು. ಅಲ್ಲಿನ ನಿಲ್ದಾಣವೊಂದರಲ್ಲಿ 1998ರಲ್ಲಿ ಮೊದಲ ಆತ್ಮಹತ್ಯೆ ಪ್ರಕರಣ ಘಟಿಸಿತು. ಇದುವರೆಗೆ ಅಲ್ಲಿನ ಮೆಟ್ರೊ ನಿಲ್ದಾಣಗಳಲ್ಲಿ 234 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.ದೆಹಲಿಯಲ್ಲಿ 2002ರಲ್ಲಿ ಮೆಟ್ರೊದ ಮೊದಲ ಮಾರ್ಗ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. ಅಲ್ಲಿನ ನಿಲ್ದಾಣಗಳಲ್ಲಿ ಇಲ್ಲಿಯ ತನಕ 12 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಮೆಟ್ರೊ ನಿಲ್ದಾಣ ಸೇರಿದಂತೆ  ದೇಶದ ಮೂರು ಮೆಟ್ರೊ ಸಾರಿಗೆ ವ್ಯವಸ್ಥೆಯಲ್ಲಿ ಒಟ್ಟು 247 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೋಲ್ಕೊತ್ತ ಮೆಟ್ರೊ ರೈಲು ನಿಗಮದ ವಕ್ತಾರ ಪ್ರತ್ಯೂಷ್ ಘೋಷ್, `ಗಾಜಿನ ತಡೆಗೋಡೆ ವ್ಯವಸ್ಥೆಯನ್ನು ಮೂರು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ. 12 ಕೋಟಿ ರೂಪಾಯಿ ವೆಚ್ಚದ ಪೈಲಟ್ ಯೋಜನೆಯನ್ನು ವರ್ಷದ ಹಿಂದೆಯೇ ರೈಲ್ವೆ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ~ ಎಂದರು.`ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನಗಳನ್ನು ಸಿಸಿಟಿವಿ ಮೂಲಕ ಗಮನಿಸಲಾಗುತ್ತಿರುತ್ತದೆ. ಅಲ್ಲದೇ ನಿಲ್ದಾಣಗಳಿಗೆ ನಿಯೋಜಿಸಿರುವ ಪೊಲೀಸರಿಗೆ ಪ್ಲಾಟ್‌ಫಾರಂಗಳಲ್ಲಿ ಚಿಂತಾಕ್ರಾಂತವಾಗಿ ಕಾಣಿಸಿಕೊಳ್ಳುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧವಿರುವಂತೆ ಕಾಣುವ ಜನರನ್ನು ಗುರುತಿಸಲು ವಿಶೇಷ ತರಬೇತಿ ನೀಡಲಾಗಿದೆ. ಈ ನಿಗಾ ವ್ಯವಸ್ಥೆಯ ಮೂಲಕ 114 ಜನ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದ್ದೇವೆ~ ಎಂದು ಅವರು ತಿಳಿಸಿದರು.ದೆಹಲಿ ಮೆಟ್ರೊ ಸಾರಿಗೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನುಜ್ ದಯಾಳ್, `ರಾಜೀವ್ ಚೌಕ ಮತ್ತು ಕಶ್ಮೀರೆ ಗೇಟ್ ನಿಲ್ದಾಣಗಳಲ್ಲಿ ಗಾಜಿನ ತಡೆಗೋಡೆ ವ್ಯವಸ್ಥೆ ಮಾಡಿದ್ದೇವೆ.ಉಳಿದ ನಿಲ್ದಾಣಗಳಲ್ಲಿ ಮೂರಡಿ ಎತ್ತರದ ಬ್ಯಾರಿಕೇಡ್ ವ್ಯವಸ್ಥೆ ಇದೆ. ಭದ್ರತಾ ಸಿಬ್ಬಂದಿಯ ಕಣ್ಗಾವಲು ಇದೆ~ ಎಂದು ತಿಳಿಸಿದರು.ಬಿಎಂಆರ್‌ಸಿಎಲ್ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ಅವರು, `ದೆಹಲಿಯ ಯಾವ ಮಾರ್ಗದಲ್ಲಿ ಗಾಜಿನ ತಡೆಗೋಡೆ ವ್ಯವಸ್ಥೆ ಇದೆ? ಜಗತ್ತಿನಲ್ಲಿ 507 ಮೆಟ್ರೊ ಸಾರಿಗೆ ವ್ಯವಸ್ಥೆಯಿದೆ. ನಮ್ಮ ಮೆಟ್ರೊ ವಿಶ್ವದರ್ಜೆಯದ್ದು~ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.