ಮೆಟ್ರೊ: 2ನೇ ಪರಿಕ್ಷಾರ್ಥ ಸಂಚಾರ ಯಶಸ್ವಿ

7

ಮೆಟ್ರೊ: 2ನೇ ಪರಿಕ್ಷಾರ್ಥ ಸಂಚಾರ ಯಶಸ್ವಿ

Published:
Updated:

ಬೆಂಗಳೂರು: ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ ರೀಚ್- 1ರ ಮಾರ್ಗದಲ್ಲಿ ‘ನಮ್ಮ ಮೆಟ್ರೊ’ದ ರೈಲು ಬುಧವಾರ ಸಂಜೆ ಎರಡನೇ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ನಡೆಸಿತು. 6.7 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಮೂರು ವಾರಗಳ ಹಿಂದೆ (ಜ. 23) ಮೊಟ್ಟ ಮೊದಲ ಬಾರಿಗೆ ಮೆಟ್ರೊ ರೈಲಿನ ಪರೀಕ್ಷಾರ್ಥ ಸಂಚಾರ ನಡೆಸಲಾಗಿತ್ತು.



ಆ ದಿನ ಬೈಯಪ್ಪನಹಳ್ಳಿಯಿಂದ ಎಂ.ಜಿ ರಸ್ತೆಯ ಬ್ರಿಗೇಡ್ ರಸ್ತೆಯ ಜಂಕ್ಷನ್ ಬಳಿಗೆ ಬರಲು ಮೆಟ್ರೊ ರೈಲು ತೆಗೆದುಕೊಂಡ ಸಮಯ ಸುಮಾರು ಮೂರು ಗಂಟೆಗಳು; ಆದರೆ ಬುಧವಾರ ತೆಗೆದುಕೊಂಡ ಸಮಯ ಕೇವಲ 20 ನಿಮಿಷಗಳು.



‘ನಮ್ಮ ಮೆಟ್ರೊ’ದ ಜೋಡಿ ಮಾರ್ಗದಲ್ಲಿ ಬೈಯಪ್ಪನಹಳ್ಳಿ ಡಿಪೊ ಕಡೆಯಿಂದ ಹೊರ ಬರುವ ಹಳಿಯ (ಡೌನ್ ಟ್ರ್ಯಾಕ್) ಮೇಲೆ ಪರೀಕ್ಷಾರ್ಥ ರೈಲು ಸಂಚಾರ ನಡೆಸಿದ್ದು, ಶನಿವಾರದಿಂದ ಡಿಪೊ ಸೇರುವ ಹಳಿ (ಅಪ್ ಟ್ರ್ಯಾಕ್) ಮೇಲೆ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಬಿ.ಎಲ್.ಯಶವಂತ್ ಚವಾಣ್ ತಿಳಿಸಿದರು.



‘ಪರೀಕ್ಷಾರ್ಥ ಸಂಚಾರದ ಸಂದರ್ಭದಲ್ಲಿ ಬ್ರೇಕ್, ಜರ್ಕ್, ಯಂತ್ರೋಪಕರಣಗಳ ಉಷ್ಣಾಂಶ ವ್ಯತ್ಯಯ ಮೊದಲಾದ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಯಿತು. ಮುಂದಿನ ಸೋಮವಾರದಿಂದ ಜೋಡಿ ಮಾರ್ಗದ ಎರಡು ಬದಿಯಲ್ಲಿ ಒಟ್ಟು ಹತ್ತು ಟ್ರಿಪ್‌ಗಳ ಪರೀಕ್ಷಾರ್ಥ ಓಡಾಟ ನಡೆಸಲಾಗುವುದು’ ಎಂದು ಅವರು ವಿವರಿಸಿದರು.



‘ಮಾರ್ಚ್ ಮೊದಲ ವಾರದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪ್ರಮಾಣ ಪತ್ರ ಪಡೆದುಕೊಳ್ಳಲು ಪ್ರಾಯೋಗಿಕ ರೈಲು ಸಂಚಾರವನ್ನು ನಿರಂತರವಾಗಿ ನಡೆಸಲಾಗುವುದು. ಈಗಾಗಲೇ ಘೋಷಿಸಿರುವಂತೆ ಏಪ್ರಿಲ್ 4ರಂದು ಸಾರ್ವಜನಿಕರ ಸಂಚಾರಕ್ಕೆ ಮೆಟ್ರೊ ರೀಚ್- 1ರ ಮಾರ್ಗವನ್ನು ಮುಕ್ತಗೊಳಿಸಲಾಗುವುದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry